ಬೆಂಗಳೂರು: ಇಲ್ಲಿನ ಪೊಲೀಸ್ ಠಾಣೆ ಸಿಬ್ಬಂದಿ ತಮ್ಮ ವ್ಯಾಪ್ತಿಯ ಬೀದಿಗಳಿಗೆ ತೆರಳಿ ಕೊರೊನಾ ಸೋಂಕಿನ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ಸೋಂಕಿನ ದುಷ್ಪರಿಣಾಮ ಕುರಿತು ಮಾಹಿತಿ ನೀಡುತ್ತಿದ್ದಾರೆ.
ನಗರದ ಕೆಆರ್‌ಪುರಂ ಠಾಣೆಯ ಸಂಚಾರಿ ಹಾಗೂ ಸಿವಿಲ್ ಪೊಲೀಸರು ಸಿಗೇಹಳ್ಳಿಯ ಬಹುಮಹಡಿ ಕಟ್ಟಡವಿರುವ ಸಂಕೀರ್ಣಕ್ಕೆ ತೆರಳಿ ಈ ಜಾಗೃತಿ ನಡೆಸಿದರು. ಠಾಣೆಯ ಹೆಡ್ ಕಾನ್ಸ್‌ಸ್ಟೇಬಲ್ ಶಿವರಾಜ್ ಮಾತನಾಡಿ, ಕೊರೊನಾ ಸೋಂಕಿನಿಂದ ಇಡೀ ದೇಶವೇ ಸ್ತಬ್ಧವಾಗಿದೆ. ಜನರ ಆರೋಗ್ಯ ದೃಷ್ಟಿಯಿಂದ ಏಪ್ರಿಲ್ 14ರವರೆಗೂ ಕೇಂದ್ರ ಸರ್ಕಾರ ವಿಧಿಸಿದ ಲಾಕ್ಡೌನ್ ಆದೇಶ ಪಾಲಿಸುವಂತೆ ಸೂಚಿಸಿದರು.
ಅಗತ್ಯ ವಸ್ತುಗಳ ಖರೀದಿ ಹೊರತುಪಡಿಸಿ, ಬೇರೆ ಯಾವ ಕಾರಣಕ್ಕೂ ಮನೆಯಿಂದ ಹೊರಬರುವ ಸಾಹಸ ಮಾಡಬೇಡಿ. ಸಾಮಾಜಿಕ ಅಂತರ ಕಾಪಾಡಿಕೊಳ್ಳಿ. ಕೆಮ್ಮು, ನೆಗಡಿ ಹಾಗೂ ಜ್ವರದಂತಹ ಲಕ್ಷಣ ಕಂಡು ಬಂದರೆ, ಕೂಡಲೇ ಸಮೀಪದ ಆಸ್ಪತ್ರೆಗೆ ತೆರಳಿ ತಪಾಸಣೆ ಮಾಡಿಸಿಕೊಳ್ಳಿ ಎಂದು ಸೂಚಿಸಿದರು.
ಕೊರೊನಾ ಸೋಂಕಿನ ಲಕ್ಷಣಗಳನ್ನು ಮುಚ್ಚಿಡುವ ಪ್ರಯತ್ನ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಇನ್ನೂ ಅನಗತ್ಯ ತಿರುಗಾಟಕ್ಕೆ ಮುಂದಾದವರ ವಾಹನಗಳನ್ನೂ ವಶಪಡಿಸಿಕೊಳ್ಳಲಾಗುವುದು ಎಂದರು.