ಬೆಂಗಳೂರು: ಉಪ ಚುನಾವಣೆಯಲ್ಲಿ ಒಂದು ವೋಟ್ಗೆ ಎಂಟಿಬಿ 2 ಸಾವಿರ ಕೊಟ್ರೆ ನಾನು 4 ಸಾವಿರ ಕೊಡುತ್ತೇನೆ ಎಂಬ ಕೃಷ್ಣಬೈರೇಗೌಡರ ಹೇಳಿಕೆಗೆ ಪ್ರತ್ಯುತ್ತರವಾಗಿ, ಅಧಿಕಾರ ಕಳೆದುಕೊಂಡಿದ್ದಕ್ಕೆ ಗೌಡರಿಗೆ ಬುದ್ಧಿಭ್ರಮಣೆ ಆಗಿದೆ ಎಂದು ಅನರ್ಹ ಶಾಸಕ ಎಂಟಿಬಿ ನಾಗರಾಜ್ ಟಾಂಗ್ ನೀಡಿದ್ದಾರೆ.
ನಾನು ರಾಜಕೀಯ ಜೀವನದಲ್ಲಿ ಎಲ್ಲೂ ದುಡ್ಡು ಕೊಟ್ಟು ವೋಟ್ ಪಡೆಯುತ್ತೇನೆ ಎನ್ನುವ ರೀತಿ ಮಾತನಾಡಿಲ್ಲ. ನಾನು ಮಾತನಾಡಿರುವ ಬಗ್ಗೆ ಒಂದೇ ಒಂದು ದಾಖಲೆ ನೀಡಲಿ ಎಂದು ಕೃಷ್ಣಬೈರೇಗೌಡರ ವಿರುದ್ಧ ಎಂಟಿಬಿ ಆಕ್ರೋಶ ಹೊರಹಾಕಿದರು. ಸಿಎಂ ಬಿಎಸ್ವೈ ಅವರನ್ನು ಡಾಲರ್ಸ್ ಕಾಲೋನಿ ನಿವಾಸದಲ್ಲಿ ಭೇಟಿ ಮಾಡಿದ ಬಳಿಕ ಎಂಟಿಬಿ ನಾಗರಾಜ್ ಈ ಹೇಳಿಕೆ ನೀಡಿದ್ದಾರೆ. ಅಕ್ಟೋಬರ್ 22ರಂದು ಅನರ್ಹ ಶಾಸಕರ ಅರ್ಜಿ ವಿಚಾರಣೆ ಹಿನ್ನೆಲೆ ಸಿಎಂ ಯಡಿಯೂರಪ್ಪರನ್ನು ಭೇಟಿ ಮಾಡಿ ಅರ್ಜಿ ವಿಚಾರಣೆ ಹಾಗೂ ಉಪ ಚುನಾವಣೆಯಲ್ಲಿ ಟಿಕೆಟ್ ಕುರಿತು ಮಾತುಕತೆ ನಡೆಸಿದರು ಎನ್ನಲಾಗಿದೆ.
ಇನ್ನು ಟಿಕೆಟ್ ವಿಚಾರವಾಗಿ ನಾನು ಸಂತೋಷ್ ಅವರನ್ನ ಭೇಟಿಯಾಗಿಲ್ಲ. ಯಾರು ಭೇಟಿ ಆಗಿದ್ದಾರೆ ಅಂತ ಗೊತ್ತಿಲ್ಲ. ನಾನು ಮಾಧ್ಯಮದಲ್ಲಿ ನೋಡಿದ್ದೇನೆ ಅಷ್ಟೇ. ಸಾರ್ವಜನಿಕವಾಗಿ ಜನರ ಸೇವೆ ಮಾಡಲು ರಾಜಕೀಯಕ್ಕೆ ಬಂದಿದ್ದೇನೆ. ಶರತ್ ಬಚ್ಚೇಗೌಡರು ಯಾವ ಪಕ್ಷದಿಂದ ಕಣಕ್ಕಿಳಿದರೂ ನಾನು ಎಲ್ಲದ್ದಕ್ಕೂ ಸಿದ್ಧನಾಗಿದ್ದೇನೆ. ಗೆಲ್ಲುವ ವಿಶ್ವಾಸವಿದೆ. ಮತ್ತೊಮ್ಮೆ ನಾನು ಗೆಲ್ತೇನೆ ಎಂದರು.
ಸಿದ್ದರಾಮಯ್ಯ ಪ್ರತಿಪಕ್ಷ ನಾಯಕರಾಗಬೇಕು ಅಂತ ನೀವು ಬಯಸ್ತೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಎಂಟಿಬಿ, ಯಾರೇ ಪ್ರತಿಪಕ್ಷದ ನಾಯಕ ಆದರೂ ನಮಗೆ ಸಂಬಂಧ ಇಲ್ಲ. ನಾವು ಕಾಂಗ್ರೆಸ್ ಪಕ್ಷ ತ್ಯಜಿಸಿದ್ದೇವೆ. ಸಿದ್ದರಾಮಯ್ಯ ನಮ್ಮ ನಾಯಕ ಹಿಂದೆ ಆಗಿದ್ರು ಈಗಲ್ಲ. ನಮ್ಮ ನಾಯಕ ಯಾರು ಅಂತ 22ರ ನಂತರ ಹೇಳ್ತೇನೆ ಎಂದರು.