ಬೆಂಗಳೂರು: ವಿಧಾನಸೌಧ ದಾಖಲೆಗಳಲ್ಲಿ ಸರ್ಕಾರಿ ಎಂದು ಉಲ್ಲೇಖವಾಗಿದೆಯಾ ಗಮನಿಸಿ, ಇಲ್ಲವಾದರೆ ಬೇರೆ ಯಾರಾದರೂ ವಿಧಾನಸೌಧವನ್ನೇ ಯಾರಿಗಾದರೂ ಮಾರಾಟ ಮಾಡಿ ರಿಜಿಸ್ಟರ್ ಮಾಡಿ ಕೊಡುತ್ತಾರೆ ಎಂದು ಮಾಜಿ ಸಚಿವ, ಶಾಸಕ ಕೃಷ್ಣಭೈರೇಗೌಡ ಆತಂಕ ವ್ಯಕ್ತಪಡಿಸಿದರು.
ವಿಧಾನಸಭೆ ಪ್ರಶ್ನೋತ್ತರ ಕಲಾಪದಲ್ಲಿ ಆತಂಕ ವ್ಯಕ್ತಪಡಿಸಿದ ಮಾಜಿ ಸಚಿವ ಕೃಷ್ಣಭೈರೇಗೌಡ, ಬೆಂಗಳೂರಿನ ಜಾಲಹೋಬಳಿಯಲ್ಲಿ 22 ಎಕರೆ ಸರ್ಕಾರಿ ಜಮೀನನ್ನು ಖಾಸಗಿ ವ್ಯಕ್ತಿಯೊಬ್ಬರು ಮತ್ತೊಬ್ಬರಿಗೆ ಮಾರಾಟ ಮಾಡಿ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿ ಮಾಡಿಕೊಟ್ಟಿರುವ ಉದಾಹರಣೆ ಉಲ್ಲೇಖಿಸಿದರು.
ಇದಕ್ಕೆ ಉತ್ತರಿಸಿದ ಕಂದಾಯ ಸಚಿವ ಆರ್.ಅಶೋಕ್, ಈ ಪ್ರಕರಣದಲ್ಲಿ ಬೋಗಸ್ ದಾಖಲೆಗಳನ್ನು ಸೃಷ್ಟಿಸಿ ಸರ್ಕಾರಿ ಭೂಮಿ ಮಾರಾಟ ಮಾಡಿರುವುದು ಸಾಬೀತಾಗಿದೆ. ಭೂಮಿ ವಾಪಸ್ ಪಡೆಯಲು ಕ್ರಮಕೈಗೊಳ್ಳಲಾಗಿದೆ. ಆದರೆ ಈ ರೀತಿ ನಕಲಿ ದಾಖಲೆಗಳ ಆಧಾರದ ಮೇಲೆ ರಿಜಿಸ್ಟರ್ ಮಾಡಿಕೊಟ್ಟಿರುವ ಸಬ್ ರಿಜಿಸ್ಟಾರ್ ಮೇಲೆ ಕ್ರಮಕೈಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಅಧಿಕಾರಿಯನ್ನು ಅಮಾನತು ಮಾಡಿದರೆ, ಒಂದೇ ವಾರದಲ್ಲಿ ಅಮಾನತು ರದ್ದು ಮಾಡಿಸಿಕೊಂಡು ಬಂದರು. ವರ್ಗಾವಣೆ ಮಾಡಿದ್ರೆ ನ್ಯಾಯಾಲಯದ ಮೂಲಕ ರದ್ದು ಮಾಡಿಸಿಕೊಂಡರು. ಕೊನೆಗೆ ನಿಯೋಜನೆ ಮಾಡಿದ್ರೂ ಕೂಡ ರದ್ದು ಮಾಡಿಸಿಕೊಂಡರು. ನ್ಯಾಯಾಲಯಗಳ ಮಧ್ಯ ಪ್ರವೇಶದಿಂದ ಅಂತಹ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.