ಬೆಂಗಳೂರು : ಹಲವಾರು ಜನರಿಗೆ ಘಾಟಲ, ರೋಹು ಮತ್ತು ಮೃಗಾಲ್ ಮೀನುಗಳ ಬಗ್ಗೆ ಗೊತ್ತಿದೆ. ಆದರೆ ಆಲ್ ಮೇಲ್ ಟಿಲಾಪಿಯಾ ಎನ್ನುವ ಹೊಸ ಬಗೆಯ ಮೀನುಗಳ ಬಗೆಗಿನ ಮಾಹಿತಿಯನ್ನು ಕೃಷಿ ಮೇಳದ ಸಮಯದಲ್ಲಿ ಮುನ್ನೆಲೆಗೆ ತರಲು ಕೃಷಿ ವಿಶ್ವವಿದ್ಯಾಲಯ ಮುಂದಾಗಿದೆ.
ಅದರ ಅತಿ ವೇಗದ ಬೆಳವಣಿಗೆ ಮತ್ತು ಮಾರುಕಟ್ಟೆಯಲ್ಲಿ ಅದಕ್ಕೆ ಸಿಗುತ್ತಿರುವ ಮನ್ನಣೆಯನ್ನು ಮೀನು ಸಾಕಣೆದಾರರಿಗೆ ಮನವರಿಕೆ ಮಾಡಿಕೊಡಲಾಯಿತು. ರೈತರು ಮತ್ತು ಜನರು ಕೂಡ ಮುತ್ತು ಕೃಷಿ ಮತ್ತು ಟಿಲಾಪಿಯಾ ಮೀನುಗಳ ಬಗ್ಗೆ ಅತಿ ಆಸಕ್ತಿ ತೋರಿ ಮಾಹಿತಿ ಪಡೆದುಕೊಂಡರು.
ಈ ಬಗ್ಗೆ ಜಿ ಕೆ ವಿ ಕೆ ಜಲಕೃಷಿ ವಿಭಾಗದ ಸಹಾಯಕ ಪ್ರಾಧ್ಯಾಪಕ ಕಿಶೋರ್ ಮಾತನಾಡಿ, ನಾವು ನಮ್ಮ ಫಾರ್ಮ್ನಲ್ಲಿ ಆಲ್ಮೇಲ್ ಟಿಲಾಪಿಯಾ ಎಂಬ ಮೀನನ್ನು ಬೆಳೆಸುತ್ತಿದ್ದೇವೆ. ಈ ಮೀನನ್ನೇ ಏಕೆ ನಾವು ಬೆಳೆಸುತ್ತಿದ್ದೇವೆ ಎಂದರೆ, ಗಂಡು ಮೀನುಗಳು ಅತಿ ವೇಗವಾಗಿ ಬೆಳೆಯುತ್ತವೆ. ಆದರೆ ಹೆಣ್ಣು ಮೀನು ಆಹಾರವನ್ನು ಬಳಸಿಕೊಂಡು ತನ್ನ ಶಕ್ತಿಯನ್ನು ಸಂತಾನೋತ್ಪತ್ತಿಗಾಗಿ ವಿನಿಯೋಗಿಸುತ್ತದೆ. ಹಾಗಾಗಿ ಅದರ ಬೆಳವಣಿಗೆ ಕಡಿಮೆ. ಅಲ್ಲದೇ ತನ್ನ ಬೆಳವಣಿಗೆ ಎನರ್ಜಿಯನ್ನು ಸಂತಾನೋತ್ಪತ್ತಿಗಾಗಿಯೇ ಪರಿವರ್ತಿಸುತ್ತದೆ.
ಹೀಗಾಗಿ ನಾವು ಆಲ್ ಮೇಲ್ ಟಿಲಾಪಿಯಾವನ್ನ ಗಂಡು ಮತ್ತು ಹೆಣ್ಣನ್ನು ಬ್ರೀಡಿಂಗ್ಗೆ ಬಿಟ್ಟು, ಅದರ ಮೊಟ್ಟೆಯನ್ನು ಕಲೆಕ್ಷನ್ ಮಾಡಿ, ಅದನ್ನು ನಾವು ಸೆವೆಂಟಿನ್ ಮಿಥೆಲ್ ಆಲ್ಫ ಟೆಸ್ಟೋಸ್ಟಿರಾನ್ ಎಂಬ ಹಾರ್ಮೋನ್ ಇಂಜೆಕ್ಟ್ ಮಾಡಿ ಅದನ್ನು ನಾವು ಆಹಾರದಲ್ಲಿ ಬೆರೆಸಿ ಕೊಟ್ಟರೆ ಎಲ್ಲಾ ಹೆಣ್ಣು ಮೀನುಗಳು ಗಂಡು ಮೀನುಗಳಾಗಿ ಪರಿವರ್ತನೆಯಾಗುತ್ತವೆ. ಮೀನುಗಳ ಗಾತ್ರದ ಮೇಲೆ ನಾವು ಮೂರು ರೂಪಾಯಿ, ಇಲ್ಲವೇ ನಾಲ್ಕು ರೂಪಾಯಿಗೆ ರೈತರಿಗೆ ಹಾಗೂ ಸಾಕಾಣಿಕೆದಾರರಿಗೆ ಕೃಷಿ ವಿವಿ ಕಡೆಯಿಂದ ಕೊಡುವ ಕೆಲಸ ಮಾಡುತ್ತಿದ್ದೇವೆ.
ಆಲ್ ಮೇಲ್ ಟಿಲಾಪಿಯಾ ಮೀನಿನ ಬದಲಾದ ಹಾರ್ಮೋನ್ನಿಂದ ಮನುಷ್ಯರಿಗೆ ಯಾವುದೇ ರೀತಿಯ ಅಡ್ಡ ಪರಿಣಾಮ ಆಗುವುದಿಲ್ಲ. ಅದಕ್ಕೆ ನೀಡುವ ಆಹಾರದಲ್ಲಿ ಹಾರ್ಮೋನ್ ಕೊಟ್ಟರೆ ಅದು ಹೆಣ್ಣಿರುವ ಮೀನುಗಳು ಗಂಡುಗಳಾಗಿ ಬದಲಾಗುತ್ತವೆ. ಇದರಿಂದ ಮನುಷ್ಯನ ದೇಹದ ಮೇಲೆ ಯಾವುದೇ ಪರಿಣಾಮ ಆಗುವುದಿಲ್ಲ ಎಂದು ಅವರು ಇದೇ ವೇಳೆ ತಿಳಿಸಿದ್ದಾರೆ.
ಮುತ್ತಿನ ಕೃಷಿ ಹೇಗೆ ?: ಜಾಗತಿಕ ಮಟ್ಟದಲ್ಲಿ ಮಿಂಚುವ ಮುತ್ತಿನ ಹಾರಕ್ಕೆ ಎಲ್ಲಿಲ್ಲದ ಬೇಡಿಕೆ ಇದೆ. ಆಭರಣಗಳ ತಯಾರಿಕೆಯಲ್ಲಿ ಹೇರಳವಾಗಿ ಮುತ್ತುಗಳನ್ನು ಬಳಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಮುತ್ತಿನ ಕೃಷಿಯನ್ನು ಜನಪ್ರಿಯಗೊಳಿಸಲು ಕೃಷಿ ಮೇಳದಲ್ಲಿ ಗಾಂಧಿ ಕೃಷಿ ವಿಜ್ಞಾನ ಕೇಂದ್ರ ಮುಂದಾಗಿದೆ.
ಈ ಕೃಷಿಯನ್ನು ಮನೆಯ ಡ್ರಮ್, ಟ್ಯಾಂಕ್, ಸಿಮೆಂಟ್‌ನಿಂದ ತಯಾರಿಸಿದ ತೊಟ್ಟಿಗಳಲ್ಲಿ ಮಾಡಬಹುದು. ಕಪ್ಪೆ ಚಿಪ್ಪನ್ನು ಟ್ಯಾಂಕ್ನಲ್ಲಿ ಹಾಕಬೇಕಾಗುತ್ತದೆ. ನಂತರ ಪ್ಲಾಂಕ್ಟನ್ ಸಸ್ಯ ಬೆಳೆಯುವಂತೆ ಮಾಡಬೇಕು. ಕೆಲ ದಿನಗಳ ಬಳಿಕ ನೀರಿಗೆ ಮೆಂಥಾಲ್ ಪುಡಿ ಬೆರೆಸಿದಾಗ ಕಪ್ಪೆ ಚಿಪ್ಪುಗಳು ಅರೆಪ್ರಜ್ಞಾವಸ್ಥೆಗೆ ಹೋಗುತ್ತವೆ. ಈ ವೇಳೆ, ದಂತ ಚಿಕಿತ್ಸೆಗೆ ಉಪಯೋಗಿಸುವ ಕೋಲ್ಡ್ ಕ್ಯೂರಿಂಗ್ ಅಕ್ರೈಲಿಕ್ ಪುಡಿ ಮತ್ತು ದ್ರಾವಣವನ್ನು ಉಪಯೋಗಿಸಿ ಅಚ್ಚುಗಳನ್ನು ಮಾಡಿಕೊಳ್ಳಬೇಕು. ಅದನ್ನು ಕಪ್ಪೆ ಚಿಪ್ಪಿನೊಳಗೆ ತೂರಿಸಬೇಕು, ಆ ನಂತರ ಆ್ಯಂಟಿಬಯೋಟಿಕ್ ದ್ರಾವಣ ಸೇರಿಸಬೇಕು.
ಇದನ್ನೂ ಓದಿ : ಮುತ್ತಿನ ಕೃಷಿ ಹೇಗೆ?: ಗಾಂಧಿ ಕೃಷಿ ವಿಜ್ಞಾನ ಕೇಂದ್ರದಿಂದ ಉಪಯುಕ್ತ ಮಾಹಿತಿ