ಬೆಂಗಳೂರು: ಹೌದಪ್ಪ ನಾನು ಕಳ್ಳನೆ. ಮಾಲ್ ಸಿಕ್ಕರೆ ತಗೊಂಡು ಹೋಗಿ ಕಂಪ್ಲೇಂಟ್ ಕೊಡೋಕೆ ಹೇಳಿ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ.
ತಮ್ಮ ಸೋಲಿಗೆ ರಮೇಶ್ ಕುಮಾರ್ ಅವರೇ ಕಾರಣ ಎಂದು ಆರೋಪಿಸಿರುವ ಮಾಜಿ ಸಂಸದ ಕೆ.ಹೆಚ್.ಮುನಿಯಪ್ಪ ಅವರು ತಮ್ಮನ್ನು ಕಳ್ಳ ಎಂದು ಕರೆದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಹೌದು ನಾನು ಕಳ್ಳನೆ, ಹೋಗಿ ದೂರು ಕೊಡೋಕೆ ಹೇಳಿ ಎಂದಿದ್ದಾರೆ.
ಇತ್ತೀಚಿಗೆ ಮುನಿಯಪ್ಪನವರಿಗೆ ನಿಮ್ಮ ಮೇಲೆ ಜಾಸ್ತಿ ಲವ್ ಅಂತೆ ಹೌದಾ? ಎಂದಿದ್ದಕ್ಕೆ, ನೀವು ಲವ್ ಮಾಡಿ, ಅವರ ಮಾತಿಗೆ ನಾನು ಯಾವುದೇ ಪ್ರತಿಕ್ರಿಯೆ ನೀಡಲ್ಲ. ನಾನು ಎಷ್ಟು ದಿನ ಇರುತ್ತೇನೊ ಗೊತ್ತಿಲ್ಲ. ಇರುವಷ್ಟು ದಿನ ದೇಶಕ್ಕೆ, ಜನರ ಸಮಸ್ಯೆಗಳಿಗೆ ಕೆಲಸ ಮಾಡೋದಷ್ಟೇ ನನ್ನ ಉದ್ದೇಶ. ಜನರ ಸಮಸ್ಯೆ ಬಹಳಷ್ಟಿದೆ ಇತರೆ ವಿಚಾರಗಳ ಬಗ್ಗೆ ತಲೆಕೆಡಿಸಿಕೊಳ್ಳಲ್ಲ. ಮಾಧ್ಯಮದವರೇ ನಮ್ಮ ಅಭಿಮಾನಿಗಳು ನೀವೆ ಅವರಿಗೆ ಉತ್ತರ ಕೊಟ್ಟುಬಿಡಿ ಎಂದಿದ್ದಾರೆ.
ಅನರ್ಹರ ವಿಚಾರ ಕುರಿತು ಮಾತನಾಡಿ, ನನ್ನ ವ್ಯಾಪ್ತಿಯಲ್ಲಿ ಒಬ್ಬ ನ್ಯಾಯಾಧೀಶನ ರೀತಿ ತೀರ್ಪು ನೀಡಿದ್ದೇನೆ. ಸದ್ಯ ಅನರ್ಹರ ವಿಚಾರ ಸುಪ್ರೀಂಕೋರ್ಟ್ ಮುಂದೆ ಇದೆ. ಅದರ ಬಗ್ಗೆ ಒಂದು ಅಕ್ಷರ ಮಾತನಾಡಿದರು ತಪ್ಪಾಗುತ್ತದೆ. ಹೀಗಾಗಿ ಅನರ್ಹರ ವಿಚಾರಕ್ಕೆ ಸಂಬಂಧಿಸಿದಂತೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದಿದ್ದಾರೆ.