ಬೆಂಗಳೂರು: ರಾಜಧಾನಿಯಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಲು ಸೂಕ್ತ ಕಾರ್ಯ ಯೋಜನೆ ರೂಪಿಸಬೇಕು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಭಾನುವಾರ ಸಂಜೆ ನಗರದಲ್ಲಿ ಸುರಿದ ಧಾರಾಕಾರ ಮಳೆಗೆ ಕೆ.ಆರ್.ಸರ್ಕಲ್‌ನ ಅಂಡರ್‌ಪಾಸ್‌ನಲ್ಲಿ ಕಾರಿನಲ್ಲಿ ಸಿಲುಕಿ 23 ವರ್ಷದ ಯುವತಿ ಭಾನುರೇಖಾ ಎಂಬವರು ಸಾವಿಗೀಡಾಗಿದ್ದಾರೆ. ಘಟನಾ ಸ್ಥಳಕ್ಕೆ ಕಳೆದ ರಾತ್ರಿ ಡಿ.ಕೆ.ಶಿವಕುಮಾರ್, ಸಚಿವ ರಾಮಲಿಂಗಾರೆಡ್ಡಿ, ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹಾಗು ಇತರೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ಅಂಡರ್ಪಾಸ್ಗಳಲ್ಲಿ ನೀರು ಹೋಗದಂತೆ ತಡೆಯಬೇಕು. ಇದಕ್ಕೆ ಅಗತ್ಯ ವ್ಯವಸ್ಥೆ ಮಾಡಲಾಗುವುದು. ಮುನ್ನೆಚ್ಚರಿಕೆ ಕ್ರಮವಾಗಿ ಇಂತಹ ಅಂಡರ್ ಪಾಸ್ಗಳಿಗೆ ಬ್ಯಾರಿಕೇಡ್ ಹಾಕಿ ಸಂಚಾರ ತಡೆಯಬೇಕಿದೆ. ಅಂಡರ್ಪಾಸ್ಗಳಲ್ಲಿ ಕ್ಯಾಮರಾ ಅಳವಡಿಕೆಗೆ ಕೂಡ ಸೂಚನೆ ನೀಡಲಾಗುವುದು ಎಂದು ಹೇಳಿದರು.
ಸರ್ಕಾರ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದೆ. ಯಾವ ರೀತಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬಹುದು ಎಂದು ಚರ್ಚಿಸಿ ಯೋಜನೆ ರೂಪಿಸುತ್ತೇವೆ. ಸಾವಿನ ದವಡೆಯಲ್ಲಿದ್ದ ನಾಲ್ಕೈದು ಮಂದಿಯನ್ನು ರಕ್ಷಣೆ ಮಾಡಿದ ಮಾಧ್ಯಮದವರು, ಸಾರ್ವಜನಿಕರು ಹಾಗೂ ಪೊಲೀಸರಿಗೆ ಧನ್ಯವಾದ ಹೇಳುತ್ತೇನೆ. ಇಲ್ಲಿ ಪರಿಹಾರ ನೀಡಿಕೆ ಪ್ರಮುಖ ವಿಚಾರ ಅಲ್ಲ. ಮುಂದೆ ಇಂತಹ ಘಟನೆ ಆಗದಂತೆ ತಡೆಯಬೇಕು ಎಂದು ಡಿಕೆಶಿ ತಿಳಿಸಿದರು.
ಜನರಿಗೆ ಅನುಕೂಲವಾಗಲಿ ಎಂದು ಅಂಡರ್‌ಪಾಸ್ ಮಾಡಲಾಗಿದೆ. ಮತ್ತೆ ಇಂತಹ ದುರ್ಘಟನೆ ರಾಜ್ಯದಲ್ಲಿ ನಡೆಯದ ರೀತಿಯಲ್ಲಿ ಮುನ್ನೆಚ್ಚರಿಕೆ ವಹಿಸುತ್ತೇವೆ. ಹೀಗಾಗಿ ಈ ಘಟನೆ ಕುರಿತು ವರದಿ ಪಡೆದು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
5 ಲಕ್ಷ ರೂ ಪರಿಹಾರ ಘೋಷಣೆ ಮಾಡಿದ ಸಿಎಂ: ಘಟನೆ ನಡೆದ ಕೆ.ಆರ್.ವೃತ್ತ ಮತ್ತು ಸೆಂಟ್ ಮಾರ್ಥಸ್ ಆಸ್ಪತ್ರೆಗೆ ಸಿಎಂ ಸಿದ್ದರಾಮಯ್ಯ ನಿನ್ನೆ ಭೇಟಿ ನೀಡಿ ಘಟನೆಯ ಕುರಿತು ಮಾಹಿತಿ ಪಡೆದರು. ಯುವತಿ ಬಾಡಿಗೆ ವಾಹನ ಪಡೆದು ಬೆಂಗಳೂರು ನಗರ ನೋಡಲು ಬಂದಿದ್ದರು. ಚಾಲಕ ಸೇರಿ ಏಳು ಮಂದಿ ಕಾರಲ್ಲಿದ್ದರು. ಮಳೆಯ ಪ್ರಮಾಣದ ಅಂದಾಜು ಇರಲಿಲ್ಲ. ಚಾಲಕ ಅಂಡರ್‌ಪಾಸ್ ಒಳಗೆ ಹೋಗಿದ್ದರಿಂದ ಕಾರಿನ ಬಾಗಿಲುಗಳು ಓಪನ್ ಆಗಿಲ್ಲ. ನೀರಿನ ಒತ್ತಡದಿಂದಾಗಿ ಗಾಜು ಜಾಮ್ ಆಗಿದೆ. ಭಾನುರೇಖಾ ನೀರು ಸೇವಿಸಿದ ಹಿನ್ನೆಲೆಯಲ್ಲಿ ಸಾವನ್ನಪ್ಪಿದ್ದಾರೆ. ವಾಹನದಲ್ಲಿದ್ದ ಏಳು ಮಂದಿ ಪೈಕಿ ಆರು ಮಂದಿಗೆ ಏನೂ ಆಗಿಲ್ಲ. ಚಾಲಕ ಸಹ ಸುರಕ್ಷಿತವಾಗಿದ್ದಾನೆ. ಮೃತ ಯುವತಿ ಬೆಂಗಳೂರಿನ ಇನ್ಫೋಸಿಸ್ನಲ್ಲಿ ಉದ್ಯೋಗ ಮಾಡುತ್ತಿದ್ದು, ಅವರ ಕುಟುಂಬಕ್ಕೆ 5 ಲಕ್ಷ ರೂ ಪರಿಹಾರ ನೀಡುವುದಾಗಿ ಸಿಎಂ ಘೋಷಿಸಿದರು.
ಇನ್ನು ಬೆಂಗಳೂರು ಹೊರತುಪಡಿಸಿ ರಾಜ್ಯದ ವಿವಿಧೆಡೆ ಭಾನುವಾರ ಮಳೆ ಸುರಿದಿದೆ. ವಾಹನಗಳಿಗೆ ಮರ ಬಿದ್ದು ಹಾನಿ ಉಂಟಾಗಿದೆ. ಇಂದೂ ಹವಾಮಾನ ಇಲಾಖೆ ಮಳೆ ಮುನ್ಸೂಚನೆ ನೀಡಿದೆ.
ಇದನ್ನೂ ಓದಿ: ರಾಜಧಾನಿಯಲ್ಲಿ ಸುರಿದಿದ್ದು ಕೇವಲ ಒಂದೇ ಗಂಟೆ ಮಳೆಗೆ ಟೆಕ್ಕಿ ಬಲಿ; ಅವಾಂತರಗಳ ಮಾಹಿತಿ