ಬೆಂಗಳೂರು: ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಟಸ್ಕರ್ಸ್ ತಂಡದ ಇಬ್ಬರು ಆಟಗಾರರನ್ನು ಸಿಸಿಬಿ ಅಧಿಕಾರಿಗಳು ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗೆ ವಶಕ್ಕೆ ಪಡೆದಿದ್ದಾರೆ.
ನ್ಯಾಯಾಧೀಶರು ಇವತ್ತು ರಜೆಯಲ್ಲಿದ್ದ ಕಾರಣ ಇನ್‌ಚಾರ್ಜ್ ಕೋರ್ಟ್ 30ನೇ ಎಸಿಎಂಎಂ ನ್ಯಾಯಾಲಯದ ಮುಂದೆ ಆರೋಪಿಗಳನ್ನು ಹಾಜರುಪಡಿಸಲಾಗಿದೆ. ಈ ವೇಳೆ ವಾದ ಮಂಡಿಸಿದ ಸಿಸಿಬಿ ಪರ ವಕೀಲರು ಆರೋಪಿಗಳನ್ನು ಹೆಚ್ಚಿನ ವಿಚಾರಣೆ ಮಾಡುವ ಅವಶ್ಯಕತೆ ಇದೆ. ಇಬ್ಬರ ಜೊತೆ ಬೇರೆ ಬೇರೆ ಆಟಗಾರರು ಸಂಪರ್ಕ ಹೊಂದಿರುವ ಮಾಹಿತಿ ಇದೆ. ಹೀಗಾಗಿ ಹೆಚ್ಚಿನ ವಿಚಾರಣೆಗೆ ವಶಕ್ಕೆ ಒಪ್ಪಿಸುವಂತೆ ನ್ಯಾಯಾಧೀಶರಿಗೆ ಮನವಿ ಮಾಡಿದರು. ವಾದ ಆಲಿಸಿದ ನ್ಯಾಯಾಧೀಶರು ಆರೋಪಿಗಳನ್ನು 7 ದಿನಗಳ ಕಾಲ ಸಿಸಿಬಿ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದ್ದಾರೆ.
ಕೆಪಿಎಲ್-2019 ರ ಫೈನಲ್ ಪಂದ್ಯದಲ್ಲಿ ಸಿ.ಎಂ. ಗೌತಮ್ ಮತ್ತು ಅಬ್ರಾರ್ ಖಾಜಿ ಎಂಬವರು ನಿಧಾನ ಬ್ಯಾಟಿಂಗ್ ಮತ್ತು ಇನ್ನಿತರ ವಿಚಾರಗಳಿಗೆ 20 ಲಕ್ಷ ರೂಗೆ ಮ್ಯಾಚ್ ಫಿಕ್ಸಿಂಗ್ ಮಾಡಿದ್ದರು.