ಬೆಂಗಳೂರು : ಕರ್ನಾಟಕ ಪ್ರೀಮಿಯರ್ ಕ್ರಿಕೆಟ್ ಟೂರ್ನಿಯಲ್ಲಿ ನಡೆದಿರುವ ಮ್ಯಾಚ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಹಗರಣದ ತನಿಖೆ ದಿನಕ್ಕೊಂದು ರೋಚಕ ತಿರುವು ಪಡೆಯುತ್ತಿದೆ. ಸಿಸಿಬಿ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ಹಾಗೂ ಡಿಸಿಪಿ ಕುಲದೀಪ್ ಜೈನ್ ಅವರು ತನಿಖೆ ನಡೆಸುತ್ತಿದ್ದು, ಪ್ರತಿಷ್ಠಿತ ಆಟಗಾರರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆ ನಡೆಸುತ್ತಿದ್ದಾರೆ.
ಕರ್ನಾಟಕ ರಣಜಿ ತಂಡದ ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್‌ಮನ್ ಆಗಿದ್ದ ಸಿ.ಎಂ.ಗೌತಮ್ ಹಾಗೂ ಆರ್ಸಿಬಿ ಪರ ಒಂದು ಪಂದ್ಯವನ್ನಾಡಿದ್ದ ಅಬ್ರಾರ್ ಖಾಜಿ ಬಂಧನದ ಬಳಿಕ ಸಿಸಿಬಿಗೆ ಬಹಳ ಮಹತ್ವದ ಸುಳಿವು ಸಿಕ್ಕಿದೆ. ಕೆಪಿಎಲ್ ಹಗರಣದಲ್ಲಿ ದೊಡ್ಡದೊಡ್ಡ ಆಟಗಾರರು ಭಾಗಿಯಾಗಿರುವ ದಾಖಲೆ ಹಾಗೂ ಮಾಹಿತಿ ಲಭ್ಯವಾಗಿದ್ದು, ಭಾಗಿಯಾದ ಪ್ರತಿಯೊಂದು ಆಟಗಾರರರಿಗೆ ಮೊದಲು ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ, ಅವಶ್ಯಕತೆ ಇದ್ದರೆ ಬಂಧಿಸಲು ಸಿಸಿಬಿ ಮುಂದಾಗಿದೆ.
ನಿರೀಕ್ಷಣಾ ಜಾಮೀನು ಅರ್ಜಿ :
ಸಿಸಿಬಿ ಕೆಪಿಎಲ್ ಹಗರಣವನ್ನ ಬಹಳ ಸೂಕ್ಷ್ಮವಾಗಿ ನಡೆಸುತ್ತಿರುವ ಕಾರಣ ಆಟಗಾರರ ಹೆಸರನ್ನು ಬಿಟ್ಟುಕೊಟ್ಟಿಲ್ಲ. ಕೆಪಿಎಲ್ ಹಗರಣದಲ್ಲಿ ಭಾಗಿಯಾದ ಕೆಲ ಆಟಗಾರರು ಬಂಧನ ಭೀತಿಯಿಂದ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ.