ಬೆಂಗಳೂರು: ಕೆಪಿಎಲ್ ಕ್ರಿಕೆಟ್ ಟೂರ್ನಿನಲ್ಲಿ ನಡೆದಿದೆ ಎನ್ನಲಾದ ಬೆಟ್ಟಿಂಗ್ ಪ್ರಕರಣ ಸಂಬಂಧ ಸಿಸಿಬಿ ತನಿಖಾಧಿಕಾರಿಗಳು ಟೂರ್ನಿಯಲ್ಲಿ ಭಾಗವಹಿಸಿದ್ದ ಆಟಗಾರರು ಸೇರಿದಂತೆ 10ಕ್ಕಿಂತ ಹೆಚ್ಚು ಮಂದಿಯಿಂದ ಹೇಳಿಕೆ ಪಡೆದುಕೊಂಡಿದ್ದಾರೆ.
ಈಗಾಗಲೇ ಪ್ರಕರಣ ಸಂಬಂಧ ಬೆಳಗಾವಿ ಪ್ಯಾಂಥರ್ಸ್ ತಂಡದ ಮಾಲೀಕ ಅಲಿ ಅಷ್ಫಕ್ ಥಾರ್ ಅವರನ್ನು ಬಂಧಿಸಲಾಗಿದ್ದು, ಅವರು ನೀಡಿದ ಮಾಹಿತಿ ಮೇರೆಗೆ ತನಿಖಾಧಿಕಾರಿಗಳು ಕೆಪಿಎಲ್ ಟೂರ್ನಿಯಲ್ಲಿ ಭಾಗಿಯಾಗಿದ್ದ ಪ್ರತಿ ತಂಡಗಳ ಮೂವರು ಆಟಗಾರರನ್ನು ಕರೆಯಿಸಿಕೊಂಡು ಕ್ರಿಕೆಟ್ ಬೆಟ್ಟಿಂಗ್ ಬಗ್ಗೆ ಮಾಹಿತಿ ಕಲೆಹಾಕಿದ್ದಾರೆ.
ಬೆಟ್ಟಿಂಗ್ ಪ್ರಕರಣ ಸಂಬಂಧ ಕೆಲವು ಕ್ರಿಕೆಟ್ ಆಟಗಾರರನ್ನು ಕರೆಯಿಸಿಕೊಂಡು ಹೇಳಿಕೆ ಪಡೆದುಕೊಂಡಿದ್ದೇವೆ. ವಿಚಾರಣೆ ತನಿಖಾ ಹಂತದಲ್ಲಿರುವುದರಿಂದ ಆಟಗಾರರ ಹೆಸರು ಹೇಳಲು ಸಾಧ್ಯವಿಲ್ಲ. ಸಂಪೂರ್ಣ ತನಿಖೆ ಬಳಿಕ ಮಾಹಿತಿ ನೀಡಲಾಗುವುದು ಎಂದು ನಗರ ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.