ಬೆಂಗಳೂರು: ಕೆಪಿಎಲ್ನಲ್ಲಿ ನಡೆದ ಮ್ಯಾಚ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಕರ್ನಾಟಕ ರಣಜಿ ತಂಡದ ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್‌ಮನ್ ಆಗಿದ್ದ ಸಿ.ಎಂ. ಗೌತಮ್ ಹಾಗೂ ಆರ್ಸಿಬಿ ಪರ ಒಂದು ಪಂದ್ಯವನ್ನಾಡಿದ್ದ ಅಬ್ರಾರ್ ಖಾಜಿಯವರನ್ನು ತನಿಖೆಗೆ ಒಳಪಡಿಸಿದಾಗ ಕೆಲ ರೋಚಕ ವಿಚಾರಗಳು ಬಯಲಿಗೆ ಬಂದಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಪ್ರತಿಷ್ಠಿತ ಆಟಗಾರರಿಗೆ ನೋಟಿಸ್ ನೀಡಿದ ಸಿಸಿಬಿ
ಸಿಸಿಬಿ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ಅವರ ನೇತೃತ್ವದಲ್ಲಿ ತನಿಖೆ ನಡೆಸುತ್ತಿರುವ ಕುಲ್ದೀಪ್ ಕುಮಾರ್ ಜೈನ್ ಅವರು ಇಬ್ಬರು ಆಟಗಾರರನ್ನು ವಿಚಾರಣೆ ನಡೆಸಿದಾಗ ಕೆಪಿಎಲ್ ಹಗರಣದಲ್ಲಿ ಇನ್ನಷ್ಟು ಪ್ರತಿಷ್ಠಿತ ಆಟಗಾರರು ಭಾಗಿಯಾಗಿರುವ ವಿಚಾರ ಬಾಯ್ಬಿಟ್ಟಿದ್ದಾರೆ. 2019ರಲ್ಲಿ ನಡೆದ ಕೆ.ಪಿಎಲ್ ಮ್ಯಾಚ್ ಸೋಲಲು ಈ ಇಬ್ಬರು ಆಟಗಾರರು ಮಾತ್ರ ಕಾರಣವಲ್ಲದೇ ಇದರಲ್ಲಿ ಕೆಪಿಎಲ್ ಟೀಂನಲ್ಲಿ ಆಟವಾಡಿದ ಇನ್ನಷ್ಟು ಆಟಗಾರರ ಪಾತ್ರವಿದ್ದು, ಇವರು ಬುಕ್ಕಿಗಳು ಹೇಳಿದ ಹಾಗೆ ಮ್ಯಾಚ್ ಆಡಿದ್ದಾರೆ ಅನ್ನೋ ವಿಚಾರ ತಿಳಿದು ಬಂದಿದೆ.
ಕ್ಷಮೆ ಕೇಳಿದ ಸಿ.ಎಂ. ಗೌತಮ್
ಕರ್ನಾಟಕ ರಣಜಿ ತಂಡದ ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್‌ಮನ್ ಆಗಿದ್ದ ಸಿ.ಎಂ. ಗೌತಮ್ ಪ್ರಸಕ್ತ ಸಾಲಿನಲ್ಲಿ ಗೋವಾ ಪರ ಆಡುತ್ತಿದ್ದ. 2012-13 ನೇ ಸಾಲಿನ ರಣಜಿ ಋತುವಿನಲ್ಲಿ ರಾಜ್ಯದ ಪರ ಅತೀ ಹೆಚ್ಚು ರನ್ ಗಳಿಸಿದ್ದ ಎರಡನೇ ಆಟಗಾರ. ಅದೇ ಪ್ರದರ್ಶನದ ಆಧಾರದಲ್ಲಿ ಇಂಡಿಯಾ ಎ ತಂಡವನ್ನೂ ಪ್ರತಿನಿಧಿಸಿದ್ದ ಗೌತಮ್ ಬಹಳಷ್ಟು ಹೆಸರು ಗಳಿಸಿದ್ದ. ಆದರೆ ಕೆಪಿಎಲ್ ಹಗರಣದಲ್ಲಿ ತನಿಖೆಗೆ ಇಳಿದಾಗ ಗೌತಮ್ ಭಾಗಿಯಾಗಿದ್ದು ಗೊತ್ತಾಗಿದ್ದು, ನಂತರ ತನಿಖಾಧಿಕಾರಿಗಳು ಬಂಧಿಸಿ ವಿಚಾರಣೆ ನಡೆಸಿದಾಗ ಈತ ತನಿಖಾಧಿಕಾರಿಗಳ ಎದುರು, "ತನ್ನ ಭವಿಷ್ಯ ಕ್ರಿಕೆಟ್ನಲ್ಲೆ ಇದ್ದು ಈ ಒಂದು ಸಲ ತಪ್ಪಾಗಿದೆ ಎಂದು ಕ್ಷಮೆ ಕೋರಿದ್ದಾನೆ ಎಂದು ತಿಳಿದು ಬಂದಿದೆ.
ಆದರೆ ತನಿಖಾಧಿಕಾರಿ ಈ ಟಿವಿ ಭಾರತ್ ಪ್ರತಿನಿಧಿ ಜೊತೆ ದೂರವಾಣಿ ಮೂಲಕ ಮಾತನಾಡಿ, ನಾವು ತನಿಖೆಯಲ್ಲಿ ಸ್ಪಷ್ಟ ನಿಲುವು ಇಟ್ಟುಕೊಂಡು ಗಂಭೀರವಾಗಿ ತನಿಖೆಯನ್ನ ಮುಂದುವರೆಸಿದ್ದೇವೆ. ಕ್ರಿಕೆಟ್ ಮೇಲೆ ಬಹಳಷ್ಟು ಮಂದಿ ಅಭಿಮಾನ ಇಟ್ಟುಕೊಂಡಿದ್ದಾರೆ. ಹಾಗೆ ಈ ಕೆಪಿಎಲ್ ಹಗರಣ ಕಳೆದ ಒಂದು ತಿಂಗಳ ಹಿಂದೆನೆ ಬಯಲಿಗೆ ಬಂದಿತ್ತು. ನಾವು ಬಹಳ ಕಷ್ಟ ಪಟ್ಟು ತನಿಖೆ ನಡೆಸಿದಾಗ ಈ ಆಟಗಾರರ ಹೆಸರು ಬಯಲಾಗಿದ್ದು ಈ ಆಟಗಾರ ಮೊದಲೇ ಬಂದು ತನಿಖೆಗೆ ಒಳಪಡಬೇಕಿತ್ತು. ತಪ್ಪು ಮಾಡಿದ ಮೇಲೆ ಕ್ಷಮೆ ಕೇಳಿದರೆ ಪ್ರಯೋಜನವೇನು ಮಾಡಿದ ತಪ್ಪು ಅನುಭವಿಸಲೇಬೇಕು ಎಂದು ಹೇಳಿದ್ದಾರೆ.
ಪ್ರತಿಪಂದ್ಯ ಬಗ್ಗೆ ಗಮನ ಇಟ್ಟ ಸಿಸಿಬಿ
ಪ್ರಕರಣ ಬಯಲಾದ ಹಿನ್ನೆಲೆ, 2018ರಿಂದ ಇಲ್ಲಿಯವರೆಗೆ ನಡೆದ ಕೆಪಿಎಲ್, ಐಪಿಎಲ್, ಟೂರ್ನಿ ಎಲ್ಲಾ ಮ್ಯಾಚ್ಗಳನ್ನು ತನಿಖಾಧಿಕಾರಿ ಕುಲ್ ದೀಪ್ ಕುಮಾರ್ ಜೈನ್, ವೀಕ್ಷಣೆ ಮಾಡಿದ್ದು ಪ್ರತಿ ಆಟಗಾರರು ಯಾವ ರೀತಿ ಹೇಗೆ ಆಟವಾಡಿದ್ದಾರೆಂದು ಪಟ್ಟಿ ರೆಡಿ ಮಾಡಿದ್ದಾರೆ. ಸಿಸಿಬಿಗೆ ಈಗಾಗ್ಲೇ ಪ್ರತಿ ಕ್ರಿಕೆಟ್ ಮ್ಯಾಚ್ನಲ್ಲಿ ಫಿಕ್ಸಿಂಗ್ ನಡೆದಿರುವ ಮಾಹಿತಿ ಸಿಸಿಬಿಗೆ ಲಭ್ಯವಾಗಿದೆ.
ಇನ್ನಷ್ಟು ಬುಕ್ಕಿಗಳ ಬೆನ್ನತ್ತಿದ ಸಿಸಿಬಿ
ಸದ್ಯ ಇಬ್ಬರು ಬುಕ್ಕಿಗಳನ್ನ ಬಂಧಿಸಿರುವ ಸಿಸಿಬಿ, ಇನ್ನಷ್ಟು ಮಂದಿ ಬುಕ್ಕಿಗಳು ಪ್ರಕರಣದಲ್ಲಿ ಭಾಗಿಯಾಗಿರುವ ವಿಚಾರ ತಿಳಿದು ತನಿಖೆ ನಡೆಸಿದಾಗ ಕೆಲ ಬುಕ್ಕಿಗಳು ವಿದೇಶಕ್ಕೆ ಹಾರಿರುವ ಮಾಹಿತಿ ಗೊತ್ತಾಗಿದೆ.