ಬೆಂಗಳೂರು: ಮುಂದಿನ ಸಿಎಂ ಯಾರು? ಎಂದು ಪ್ರಸ್ತಾಪಿಸುವ ವಿಚಾರ ಮುಗಿದ ಅಧ್ಯಾಯ. ಇದನ್ನು ಯಾರೊಬ್ಬರೂ ಪ್ರಸ್ಥಾಪಿಸುವ ಹಾಗಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ತಿಳಿಸಿದರು.
ಯುವ ಕಾಂಗ್ರೆಸ್ ಮುಖಂಡ ಮೊಹಮ್ಮದ್ ನಲಪಾಡ್ ಮುಂದಿನ ಸಿಎಂ ಡಿಕೆಶಿ ಎಂದು ಹೇಳಿಕೆ ನೀಡಿರುವ ಕುರಿತು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರ ಜತೆ ಅವರು ಮಾತನಾಡಿದರು. ಕಾಂಗ್ರೆಸ್ ಪಕ್ಷಕ್ಕೆ ಹೈಕಮಾಂಡ್ ಸೂಚನೆ ಇದೆ. ಪಕ್ಷದ ನಾಯಕರು ಹೈಕಮಾಂಡ್ ನಿರ್ಧಾರಕ್ಕೆ ಬದ್ಧವಾಗಿರಬೇಕು. ನಮ್ಮ ಹೋರಾಟ ಏನಿದ್ದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧವೇ ಹೊರತು ಪರಸ್ಪರ ನಮ್ಮೊಳಗಿನ ನಾಯಕತ್ವಕ್ಕಾಗಿ ಅಲ್ಲ ಎಂದರು.
ಪಕ್ಷವನ್ನು ಅಧಿಕಾರಕ್ಕೆ ತರುವ ಜವಾಬ್ದಾರಿ ನಮ್ಮ ಮೇಲಿದೆ. ಅಧಿಕಾರಕ್ಕೆ ಬಂದರೆ ಯಾರನ್ನು ಸಿಎಂ ಮಾಡಬೇಕು ಎನ್ನುವುದು ಹೈಕಮಾಂಡ್ ನಿರ್ಧರಿಸುತ್ತದೆ. ಪಕ್ಷದ ವರಿಷ್ಠರು ಮುಂದಿನ ಸಿಎಂ ಕುರಿತು ಹೇಳಿಕೆ ನೀಡುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಪದೇ ಪದೇ ಪ್ರಸ್ತಾಪಿಸುವುದು ಸರಿಯಲ್ಲ:
ಮತ್ತೋರ್ವ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಮಾತನಾಡಿ, ಮುಂದಿನ ಸಿಎಂ ವಿಚಾರ ಮುಗಿದ ಅಧ್ಯಾಯ. ಈ ಬಗ್ಗೆ ಹೇಳಿಕೆ ನೀಡಲ್ಲ. ಇದೇ ವಿಚಾರವನ್ನು ಪದೇ ಪದೇ ಪ್ರಸ್ತಾಪಿಸುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.
![Ramalingareddy](https://etvbharatimages.akamaized.net/etvbharat/prod-images/kn-bng-03-saleem-ramalingareddy-talk-script-7208077_07072021155119_0707f_1625653279_477.jpg)
ಮುಂದಿನ ಮುಖ್ಯಮಂತ್ರಿ ಡಿಕೆಶಿ ಎಂದಿದ್ದ ನಲಪಾಡ್:
ಮಂಗಳವಾರ ಉಡುಪಿ ಜಿಲ್ಲೆಯ ಮಹಿಳೆಯರ ಕಷ್ಟಗಳನ್ನು ಆಲಿಸುವ ಸಂದರ್ಭದಲ್ಲಿ ಮಾತನಾಡುತ್ತಾ, ಇಂದು ನಮ್ಮ ನಾಯಕರಾದ ಡಿ.ಕೆ. ಶಿವಕುಮಾರ್ ಅವರು ಬಂದಿದ್ದಾರೆ. ಕಾಂಗ್ರೆಸ್‌ಗೆ ಮತ ನೀಡಿದರೆ ಅವರು ಮುಂದೆ ಮುಖ್ಯಮಂತ್ರಿ ಆಗುತ್ತಾರೆ. ನಿಮ್ಮ ಕಷ್ಟವನ್ನು ಬಗೆಹರಿಸುತ್ತಾರೆ. ಈ ಕಷ್ಟದ ಸಂದರ್ಭದಲ್ಲಿ ನಿಮಗೆ ಯಾರು ಸಹಕಾರ ಕೊಟ್ಟಿಲ್ಲ. ಕಾಂಗ್ರೆಸ್ ಮಾತ್ರ ನಿಮ್ಮನ್ನು ನೆನಪಿಸುತ್ತದೆ ಎಂದು ನಲಪಾಡ್ ಹೇಳಿಕೆ ನೀಡಿದ್ದರು.
ಯುವ ಕಾಂಗ್ರೆಸ್ ಅಧ್ಯಕ್ಷರಾಗಿ 2022ರ ಜನವರಿಯಿಂದ ಅಧಿಕಾರ ವಹಿಸಿಕೊಳ್ಳಲು ಪಕ್ಷದ ಹೈಕಮಾಂಡ್ ಸೂಚನೆ ನೀಡಿದ ಹಿನ್ನೆಲೆ, ತಕ್ಷಣವೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಲು ತೆರಳಿದ್ದ ಮೊಹಮ್ಮದ್ ನಲಪಾಡ್ ಅಲ್ಲಿ ಇಂಥದ್ದೊಂದು ಹೇಳಿಕೆ ನೀಡಿ ಇಕ್ಕಟ್ಟಿಗೆ ಸಿಲುಕಿದ್ದಾರೆ.