ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ರಾಜೀನಾಮೆಯಿಂದ ತೆರವಾಗಲಿರುವ ಸ್ಥಾನಕ್ಕೆ ಹೊಸಬರನ್ನು ನೇಮಿಸುವ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಈ ಸ್ಥಾನಕ್ಕೆ ಮಾಜಿ ಡಿ ಕೆ ಶಿವಕುಮಾರ್ ಆಯ್ಕೆ ಖಚಿತವಾಗಿದ್ದು, ಅಧಿಕೃತ ಘೋಷಣೆ ಮಾತ್ರ ಬಾಕಿ ಉಳಿದಿದೆ. ಆದರೆ ಇದೀಗ ಸೋನಿಯಾ ಗಾಂಧಿ ವಿದೇಶ ಪ್ರವಾಸ ಹಾಗೂ ದೆಹಲಿ ವಿಧಾನಸಭೆ ಚುನಾವಣೆ ಟಿಕೆಟ್ ಹಂಚಿಕೆ ಪ್ರಕ್ರಿಯೆಯ ಕಾರಣ ನೀಡಿ ಕೆಪಿಸಿಸಿ ಅಧ್ಯಕ್ಷರ ಆಯ್ಕೆಯನ್ನು ಫೆಬ್ರುವರಿ ಮೊದಲ ವಾರಕ್ಕೆ ಮುಂದೂಡುವ ಪ್ರಯತ್ನ ನಡೆದಿದೆ ಎಂದು ಹೇಳಲಾಗ್ತಿದೆ.
ಸಿದ್ದರಾಮಯ್ಯ ಅಡ್ಡಗಾಲು?
ಕೆಪಿಸಿಸಿ ಅಧ್ಯಕ್ಷ ಸ್ಥಾನದ ಘೋಷಣೆಗೆ ಅದರಲ್ಲೂ ಡಿ ಕೆ ಶಿವಕುಮಾರ್ ಹೆಸರಿನ ಆಯ್ಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಶತಾಯಗತಾಯ ಇವರ ಆಯ್ಕೆ ತಡೆಯುವ ಇಲ್ಲವೇ ಅಧ್ಯಕ್ಷ ಸ್ಥಾನವನ್ನು ದುರ್ಬಲಗೊಳಿಸುವ ಪ್ರಯತ್ನ ನಡೆಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಒಂದೊಮ್ಮೆ ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾದರೆ ಕಾಂಗ್ರೆಸ್ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ನಾಲ್ವರು ಕಾರ್ಯಾಧ್ಯಕ್ಷರನ್ನು ನೇಮಿಸಬೇಕೆಂಬ ಒತ್ತಡವನ್ನು ಸಿದ್ದರಾಮಯ್ಯ ಹೈಕಮಾಂಡ್ ಮೇಲೆ ಹೇರಿದ್ದಾರೆ ಎನ್ನಲಾಗುತ್ತಿದೆ. ನಾಲ್ಕು ಕಂದಾಯ ವಿಭಾಗಗಳಿಗೆ ತಲಾ ಒಬ್ಬರಂತೆ ಪ್ರತ್ಯೇಕ ಸಮುದಾಯದ ನಾಯಕರನ್ನು ಆಯ್ಕೆ ಮಾಡಬೇಕೆಂಬ ಒತ್ತಡ ಹೇರಿದ್ದಾರೆ. ಅದು ಕೂಡ ತಮ್ಮವರೇ ಆಯ್ಕೆಯಾಗಬೇಕು ಎಂಬ ಒತ್ತಡ ತಂತ್ರ ಅನುಸರಿಸಿದ್ದಾರೆ. ಈ ಮೂಲಕ ಪಕ್ಷ ಸಂಘಟನೆ ಕೂಡ ಸುಗಮವಾಗಲಿದೆ ಎಂಬ ಮಾತನ್ನು ಸಿದ್ದರಾಮಯ್ಯ ಆಡಿದ್ದಾರೆ.
ಅಲ್ಪಸಂಖ್ಯಾತ, ಹಿಂದುಳಿದ ವರ್ಗ, ದಲಿತ ಹಾಗೂ ಲಿಂಗಾಯತ ಸಮುದಾಯದವರಿಗೆ ಅವರ ಕೋಟಾದಡಿ ಕಾರ್ಯಾಧ್ಯಕ್ಷ ಹುದ್ದೆ ನೀಡಬೇಕೆಂದು ಒತ್ತಡ ಹೇರಿದ್ದಾರೆ. ಆಯ್ಕೆಗೆ ತಮ್ಮ ಆಪ್ತರಾದ ಜಮೀರ್ ಅಹಮದ್, ಸತೀಶ್ ಜಾರಕಿಹೊಳಿ, ಎಂ ಬಿ ಪಾಟೀಲ್ ಮತ್ತಿತರರ ಹೆಸರನ್ನು ಸೂಚಿಸಿದ್ದಾರೆ. ಈ ಮೂಲಕ ಪಕ್ಷದಲ್ಲೂ ಹಾಗೂ ಆಡಳಿತದಲ್ಲಿ ಹಿಡಿತ ಹೊಂದಲು ಸಿದ್ದರಾಮಯ್ಯ ಪ್ರಯತ್ನ ನಡೆಸಿದ್ದಾರೆ. ಆದರೆ ಈ ಆಯ್ಕೆ ಪ್ರಕ್ರಿಯೆಯನ್ನು ಡಿಕೆಶಿ ತೀವ್ರವಾಗಿ ಖಂಡಿಸಿದ್ದು, ಇಂತಹ ಆಯ್ಕೆಯನ್ನು ತಾವು ತಿರಸ್ಕರಿಸುವುದಾಗಿ ಆಪ್ತ ವಲಯದಲ್ಲಿ ಹೇಳಿಕೊಂಡಿದ್ದಾರೆ ಎಂಬ ಮಾತಿದೆ.
ಒಟ್ಟಾರೆ ರಾಜ್ಯ ಸರ್ಕಾರದಲ್ಲಿ ಸಚಿವ ಸಂಪುಟ ವಿಸ್ತರಣೆ ಎಷ್ಟು ಗೋಜಲವಾಗಿದೆಯೋ, ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷ ಆಯ್ಕೆ ಕೂಡ ಅಷ್ಟೇ ಕಗ್ಗಂಟಾಗಿ ಕಾಡಿರುವುದು ಸುಳ್ಳಲ್ಲ.