ಬೆಂಗಳೂರು: ಲಾಕ್‌ಡೌನ್ ಬಳಿಕ ಸಂಕಷ್ಟಕ್ಕೆ ಸಿಲುಕಿರುವ ವಕೀಲರಿಗೆ ಆರ್ಥಿಕ ನೆರವು ನೀಡಲು 25 ಕೋಟಿ ರೂ. ಬಿಡುಗಡೆ ಮಾಡುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸರ್ಕಾರಕ್ಕೆ ಮನವಿ ಪತ್ರ ಬರೆದಿದ್ದಾರೆ.
ಕೊರೊನಾ ವೈರಸ್ ನಿಯಂತ್ರಣ ಮಾಡಲು ಲಾಕ್‌ಡೌನ್ ಜಾರಿಯ ಬಳಿಕ ಕೋರ್ಟ್ ಕಲಾಪಗಳು ಸ್ಥಗಿತಗೊಂಡಿವೆ. ರಾಜ್ಯದಲ್ಲಿ 1.05 ಲಕ್ಷ ವಕೀಲರು ಕಾರ್ಯನಿರತರಾಗಿದ್ದಾರೆ. ಇವರಲ್ಲಿ ಸಾಕಷ್ಟು ವಕೀಲರು ಪೂರ್ಣ ಪ್ರಮಾಣದಲ್ಲಿ ತಮ್ಮ ವೃತ್ತಿಯನ್ನೇ ನಂಬಿ ಬದುಕುತ್ತಿದ್ದಾರೆ. ಲಾಕ್‌ಡೌನ್ ಬಳಿಕ ಕೆಲಸ ಮತ್ತು ಸಂಪಾದನೆ ಇಲ್ಲದೆ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ವಕೀಲರು ನೆರವು ಕೋರಿ ಸರ್ಕಾರಕ್ಕೆ ಈಗಾಗಲೇ ಪತ್ರ ಬರೆದು ಮನವಿ ಮಾಡಿದ್ದಾರೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ರಾಜ್ಯ ಸರ್ಕಾರ ವಕೀಲರಿಗೆ ನೆರವು ನೀಡಲು ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿಗೆ 25 ಕೋಟಿ ರೂ. ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.