ಬೆಂಗಳೂರು: ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರ ಉಪಚುನಾವಣೆ ಹಿನ್ನೆಲೆ ಕಾಂಗ್ರೆಸ್ ಅಭ್ಯರ್ಥಿ ಪರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪೀಣ್ಯ ಮತ್ತಿತರ ಭಾಗಗಳಲ್ಲಿ ಪ್ರಚಾರ ನಡೆಸಿದರು.
ಕಾಂಗ್ರೆಸ್ ಅಭ್ಯರ್ಥಿ ಕುಸುಮ ಹನುಮಂತರಾಯಪ್ಪ ಪರ ನಿರಂತರ ಮೂರು ದಿನಗಳಿಂದ ಪ್ರಚಾರ ಕಾರ್ಯದಲ್ಲಿ ತೊಡಗಿರುವ ಡಿಕೆಶಿ, ಇಂದು ಬೆಳಗ್ಗೆ 11 ಗಂಟೆಯಿಂದ ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಹೆಚ್ಎಂಟಿ ವಾರ್ಡ್ ನಂಬರ್ 38 ರ ಸಂಜಯ ನಗರ, ಮುನೇಶ್ವರ ನಗರ, ಪೀಣ್ಯ ನಾಲ್ಕನೇ ಹಾಗೂ ಒಂದನೇ ಹಂತ, ಪೀಣ್ಯ ಆಂಜನೇಯ ದೇವಸ್ಥಾನ ಸ್ವಾಮಿ ರಸ್ತೆ, ಎಸ್ಆರ್ಎಸ್ ಕಾಂಗ್ರೆಸ್ ಕಚೇರಿ ಹತ್ತಿರ, ಆಶ್ರಯ ನಗರ ಗೊರಗುಂಟೆಪಾಳ್ಯ, ರಾಜಕುಮಾರ್ ವೃತ್ತ, ಪೋಜಮ್ಮ ವೃತ್ತ, ಎಂಎಸ್ಕೆ ನಗರದಲ್ಲಿ ಪ್ರಚಾರ ನಡೆಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಕುಸುಮ ಹನುಮಂತರಾಯಪ್ಪ ಸೇರಿದಂತೆ ಹಲವು ನಾಯಕರು ಅವರಿಗೆ ಸಾಥ್ ನೀಡಿದರು.
ಪೀಣ್ಯದಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಡಿ.ಕೆ.ಶಿವಕುಮಾರ್, ಜಾತಿ ಒಡೆಯುತ್ತಾರೆಂಬ ಮುನಿರತ್ನ ಹೇಳಿಕೆಗೆ ಟಾಂಗ್ ಕೊಟ್ಟರು. ಪಾಪ ಮುನಿರತ್ನ ಟೆನ್ಶನ್ನಲ್ಲಿದ್ದಾನೆ. ಯಾಕಪ್ಪಾ ಇಂಥ ಕೆಲಸ ಮಾಡಿದ್ದೇನೆ ಅನ್ನಿಸಿದೆ. ಒಂದು ವರ್ಷ ಮನೆಯಲ್ಲಿ ಅವನನ್ನ ಕೂರಿಸಿದರು. ಹೆತ್ತ ತಾಯಿಗೆ ಮೋಸ ಮಾಡಿದ್ದೇನೆ ಅನ್ನಿಸಿದೆ. ಜನ ರೊಚ್ಚಿಗೇಳ್ತಾರೆ ಅನ್ನೋದು ಅವನಿಗೆ ಗೊತ್ತಿಲ್ಲ. ಅವನ ಪರ ಪ್ರಚಾರಕ್ಕೆ ಯಡಿಯೂರಪ್ಪ ಬಂದಿಲ್ಲ. ಸಂತೋಷ್ ಜೀ ಕೂಡ ಬಂದಿಲ್ಲ. ಯಾವೊಬ್ಬ ಮಂತ್ರಿಯೂ ವೋಟ್ ಹಾಕಿ ಅಂತ ಕೇಳಿಲ್ಲ. ನಿಷ್ಟಾವಂತ ಬಿಜೆಪಿಯವರು ಪ್ರಚಾರಕ್ಕೆ ಬರುತ್ತಿಲ್ಲ. ಇವರಿಗೆ ಮಿನಿಸ್ಟರ್ ಮಾಡಿಸಿ, ನಮಗಿಲ್ಲ ಅನ್ನುವಂತಾಗಿದೆ. ಅರವಿಂದ ಲಿಂಬಾವಳಿ ಸೇರಿ ಎಲ್ಲರಿಗೂ ಅಧಿಕಾರ ಸಿಕ್ಕಿಲ್ಲ ಅನ್ನೋ ಬೇಸರವಿದೆ. ಇವರಿಂದಾಗಿ ಬಿಜೆಪಿ ಅವರಿಗೆ ಅಧಿಕಾರ ಇಲ್ಲದಂತಾಗಿದೆ ಎಂದರು.
ನಿಮ್ಮ ಕಷ್ಟದಲ್ಲಿ ನಾವು ಭಾಗಿಯಾಗುತ್ತೇವೆ. ಮುನಿರತ್ನ ಅವರನ್ನ ಎರಡು ಬಾರಿ ಗೆಲ್ಲಿಸಿದ್ರಿ. ಆದರೆ, ಅವರು ಬಿಜೆಪಿಗೆ ಹೋದರು. ನಿಮ್ಮನ್ನ ಕೇಳಿ ಅವರು ಬಿಜೆಪಿಗೆ ಹೋದ್ರಾ? ನಮ್ಮ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಕುಸುಮಾಗೆ ಟಿಕೆಟ್ ಕೊಟ್ಟಿದ್ದಾರೆ. ನಿಮ್ಮ ಕಷ್ಟ - ಸುಖದಲ್ಲಿ ನಾವು ಭಾಗಿಯಾಗುತ್ತೇವೆ. ನೀವ್ಯಾರೂ ಹೆದರಬೇಡಿ. ಅವನ್ಯಾರೋ ನಾಯ್ಡು ಕೇಸ್ ಹಾಕ್ರಿ ಅಂತಾನಂತೆ. ಯಾವ್ಯಾವ ಅಧಿಕಾರಿ ಏನ್ಮಾಡ್ತಾರೆ ಗೊತ್ತಿದೆ. ನಿಮ್ಮ ರಕ್ಷಣೆಗೆ ನಾವು ನಿಲ್ಲುತ್ತೇವೆ. ನಾವು ಬೆನ್ನು ಹತ್ತಿದ್ದರೆ ಏನಾಗುತ್ತೆ ಗೊತ್ತಿಲ್ವಾ? ನಿಮ್ಮ ಮನೆ ಮಗಳನ್ನ ಗೆಲ್ಲಿಸಿ ಕಳಿಸಿ ಎಂದು ಮತದಾರರಿಗೆ ಡಿಕೆಶಿ ಮನವಿ ಮಾಡಿದರು.
ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಅಭ್ಯರ್ಥಿ ಕುಸುಮ ಹನುಮಂತರಾಯಪ್ಪ, ನಾನು ನಿಮ್ಮ ಮನೆಮಗಳು. ನಾನು ಜನನಾಯಕಿಯಲ್ಲ, ನಿಮ್ಮ ಸೇವಕಿ. ಈ ಬಾರಿ ನಾನು ಚುನಾವಣೆಗೆ ನಿಂತಿದ್ದೇನೆ. ನೀವೆಲ್ಲರೂ ನನ್ನ ಕೈಬಿಡುವುದಿಲ್ಲವೆಂಬ ಭರವಸೆಯಿದೆ. ನಿಮ್ಮ ಸೇವೆ ಮಾಡಲು ನನಗೆ ಅವಕಾಶ ಕೊಡಿ ಎಂದು ಕೋರಿದರು.