ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಂದು ಮಾವಳ್ಳಿಯ ಗಣೇಶ ಮೂರ್ತಿ ಮಾರಾಟ ಕೇಂದ್ರಕ್ಕೆ ಭೇಟಿ ನೀಡಿ ವ್ಯಾಪಾರಸ್ಥರನ್ನು ಮಾತನಾಡಿಸಿ, ಸ್ಥಳೀಯ ವ್ಯಾಪಾರಿಗಳಿಂದ ಗಣೇಶ ಮೂರ್ತಿಗಳ ಮಾರಾಟದ ಬಗ್ಗೆ ಮಾಹಿತಿ ಪಡೆದರು.
ಇದೇ ವೇಳೆ ಕೋವಿಡ್ನಿಂದ ವ್ಯಾಪಾರ ನಷ್ಟ ಅನುಭವಿಸಿದ ಕುರಿತು ಚರ್ಚಿಸಿದರು. ಎರಡು ಸಾವಿರ ರೂಪಾಯಿ ಕೊಟ್ಟು ತಮ್ಮ ನಿವಾಸಕ್ಕೆಂದು ಗೌರಿಗಣೇಶ ಮೂರ್ತಿಯನ್ನು ಖರೀದಿಸಿದರು.
ಬಳಿಕ ಮಾತನಾಡಿದ ಡಿಕೆಶಿ, ಗಣೇಶ ಹಬ್ಬ ದೇಶದ ಸಂಸ್ಕೃತಿ. ಇದು ನಮ್ಮ ಆಸ್ತಿ. ಈ ಪೂಜೆಯನ್ನು ಹೇಗೆ ಮಾಡಬೇಕೆಂದು ಯಾರೂ ಹೇಳಿಕೊಡಬೇಕಿಲ್ಲ. ಕೋವಿಡ್ನಿಂದ ನರಳುತ್ತಿರುವಾಗ ಜನರು ವಿಘ್ನ ನಿವಾರಣೆ ಮಾಡಪ್ಪಾ ಎಂದು ಮೊರೆ ಹೋಗುವುದು ನಾವು ನಂಬಿರುವ ದೇವರ ಬಳಿ. ಹೀಗಾಗಿ ಸರ್ಕಾರ ಎಲೆಕ್ಷನ್, ಜನಾಶೀರ್ವಾದ ಯಾತ್ರೆ ಮಾಡುತ್ತಿರುವಾಗ ಗಣೇಶ ಹಬ್ಬ ಆಚರಣೆಗೆ ನಿಯಮಗಳು ಯಾಕೆ?. ಮನೆ ಒಳಗೆ ಎರಡು ಅಡಿ, ಹೊರಗೆ ನಾಲ್ಕು ಅಡಿ ಎಂಬ ನಿಯಮಗಳು ಯಾಕೆ?. ಇದರಿಂದ ನಿಮಗೇನು ಕಷ್ಟ ಎಂದು ಪ್ರಶ್ನಿಸಿದರು.
ಗುಜರಾತ್, ಮಧ್ಯಪ್ರದೇಶಗಳಲ್ಲೇ ಅನುಮತಿ ಕೊಟ್ಟಿರುವಾಗ ಇಲ್ಲಿ ಯಾಕೆ ಇಲ್ಲ?. ಆಂಧ್ರದಲ್ಲೂ ಸಿಎಂ ವಿರುದ್ಧ ಪ್ರತಿಭಟನೆ ನಡೆಯುತ್ತಿದೆ. ಮೂರ್ನಾಲ್ಕು ತಿಂಗಳ ಮೊದಲೇ ಹೇಳಬೇಕಿತ್ತು. ಈಗಾಗಲೇ ತಯಾರು ಮಾಡಿರುವ ಮೂರ್ತಿಗಳನ್ನು ಕಾರ್ಮಿಕರು ಏನು ಮಾಡಬೇಕು?. ಬೇರೆ ಬೇರೆ ರಾಜ್ಯದಲ್ಲಿ ಕುಂಬಾರರಿಗೆ ಪರಿಹಾರ ಕೊಟ್ಟಿದ್ದಾರೆ. ಹೂವಿನ ವ್ಯಾಪಾರಿಗಳಿಂದ ಪೆಂಡಾಲ್ ಹಾಕುವವರೂ ಈ ಹಬ್ಬ ನಂಬಿಕೊಂಡು ಇದ್ದಾರೆ. ಹೀಗಾಗಿ ಹತ್ತಾಗಲೀ, ಹದಿನೈದು ದಿನವಾಗಲಿ ಹಬ್ಬಕ್ಕೆ ಅನುಮತಿ ಕೊಡಬೇಕು. ಡಿಜೆ, ಕಾರ್ಯಕ್ರಮಕ್ಕೂ ಅವಕಾಶ ಕೊಡಬೇಕು. ಯಾವ ನಿರ್ಬಂಧವನ್ನೂ ಹಾಕಬಾರದು ಎಂದರು.
ಕಲಬುರಗಿ ಪಾಲಿಕೆ ಚುನಾವಣೆ ವಿಚಾರ:
ಕಲಬುರಗಿ ಪಾಲಿಕೆ ವಿಚಾರದಲ್ಲಿ ಜೆಡಿಎಸ್ ನಾಯಕರ ಜೊತೆ ಸಂಪರ್ಕದಲ್ಲಿದ್ದಾರೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಾನು ಎಲ್ಲರ ಬಳಿ ಮಾತನಾಡುತ್ತೇನೆ. ಇದು ನನ್ನ ವೈಯಕ್ತಿಕ ವಿಚಾರ ಅಲ್ಲ. ಪಕ್ಷದ ವಿಚಾರ ಎಂದರು.