ಬೆಂಗಳೂರು: ಇತ್ತೀಚೆಗೆ ನಿಧನರಾಗಿರುವ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ವಿವಿಧ ರಾಜಕೀಯ ಪಕ್ಷಗಳಿಂದ ಆಹ್ವಾನ ಇತ್ತು ಎಂಬ ಮಾಹಿತಿ ತಡವಾಗಿ ಬೆಳಕಿಗೆ ಬರುತ್ತಿದೆ. ಪುನೀತ್ ನಿಧನ ಬಳಿಕ ಈ ಮಾಹಿತಿ ಹೊರಬೀಳುತ್ತಿದೆ.
ಪ್ರಧಾನಿ ನರೇಂದ್ರ ಮೋದಿ ಅವರೇ ಪುನೀತ್ರನ್ನು ಬಿಜೆಪಿಗೆ ಸೇರಿಸಿಕೊಳ್ಳುವ ಉತ್ಸುಕತೆ ತೋರಿಸಿದ್ದರು ಎಂಬ ಮಾಹಿತಿ ಸಿಗುತ್ತಿರುವ ಬೆನ್ನಲ್ಲೇ, ನಾವು ಸಹ ಕಾಂಗ್ರೆಸ್ ಪಕ್ಷಕ್ಕೆ ಪವರ್ ಸ್ಟಾರ್ ಕರೆತರುವ ಪ್ರಯತ್ನ ಮಾಡಿದ್ದೆವು ಅಂತ ಖುದ್ದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಪುನೀತ್ರನ್ನು ರಾಜ್ಯ ರಾಜಕಾರಣಕ್ಕೆ ಸೆಳೆಯುವ ಆಸಕ್ತಿ ತೋರಿಸಿದ್ದರು. ಕಾಂಗ್ರೆಸ್ ಪಕ್ಷ ಸೇರುವಂತೆ ಸಾಕಷ್ಟು ಸಾರಿ ಮನವಿ ಮಾಡಿದ್ದರು. ಆದರೆ ಇದಕ್ಕೆ ಪುನೀತ್ ರಾಜ್ಕುಮಾರ್ ಒಪ್ಪಿರಲಿಲ್ಲ.
ನಾನು ನನ್ನ ತಂದೆಯವರ ನೆರಳಲ್ಲೇ ಸಾಗುತ್ತೇನೆ. ನನ್ನ ಅಭಿಮಾನಿಗಳು ಎಲ್ಲಾ ಪಕ್ಷಗಳಲ್ಲಿಯೂ ಇದ್ದಾರೆ. ನಾನು ಒಂದು ರಾಜಕೀಯ ಪಕ್ಷದ ಜತೆ ಗುರುತಿಸಿಕೊಂಡರೆ ಉಳಿದವರಿಗೆ ಬೇಸರವಾಗುತ್ತದೆ. ನಾನು ನಟನಾಗಿಯೇ ಉಳಿದುಬಿಡುತ್ತೇನೆ, ನನ್ನನ್ನು ಬಿಟ್ಟುಬಿಡಿ ಎಂದು ಹೇಳಿದ್ದರು ಎಂಬ ಮಾಹಿತಿ ಇದೆ.
ಇತ್ತೀಚೆಗೆ ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ತಮ್ಮ ಚಿಕ್ಕ ವಯಸ್ಸಿನಲ್ಲೇ ಸಾಕಷ್ಟು ಕೆಲಸ ಮಾಡಿದ್ದ ವ್ಯಕ್ತಿ ಪುನೀತ್. ನಾನು ಹಾಗೂ ಸಿದ್ದರಾಮಯ್ಯ ಅವರು ಉಪಚುನಾವಣೆ ಸಂದರ್ಭ ಒಮ್ಮೆ ವೇದಿಕೆಯಲ್ಲಿ ಕುಳಿತಿದ್ದಾಗ ಸಾಕಷ್ಟು ಒತ್ತಾಯ ಮಾಡಿದೆವು.
ರಾಜಕೀಯ ವಿಚಾರ ಸಾಕಷ್ಟು ಮಾತಾಡಿದೆವು. ಬನ್ನಿ ನೋಡೋಣ ಅಂತ ಹೇಳಿದೆವು. ಆದರೆ ನಾನು ನನ್ನ ತಂದೆಯ ಹಾದಿಯಲ್ಲಿ ಸಾಗುತ್ತೇನೆ. ಅದನ್ನು ಬಿಡಲ್ಲ. ಅವರು ಹೋದ ಹಾದಿಯಲ್ಲೇ ಸಾಗುತ್ತೇನೆ. ಅಷ್ಟು ಬದ್ಧತೆ ಆತನಲ್ಲಿ ಇತ್ತು ಎಂದು ನೆನೆದರು.