ಬೆಂಗಳೂರು: ಪಕ್ಷ ಸಂಘಟನೆ ಹಾಗೂ ಬಲವರ್ಧನೆ ಉದ್ದೇಶದಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಇಂದಿನಿಂದ ನಾಲ್ಕು ದಿನಗಳ ಕಾಲ ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
ಪ್ರವಾಸ ಇಂದಿನಿಂದ ನ.25ರವರೆಗೆ ನಿಗದಿಯಾಗಿದ್ದು, ಅವರು ಬಳ್ಳಾರಿ, ರಾಯಚೂರು, ಕಲಬುರಗಿ ಹಾಗೂ ಬೀದರ್ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ. ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳು ಹಾಗೂ ಪಕ್ಷ ಸಂಘಟನೆ ಉದ್ದೇಶದಿಂದ ಈ ಪ್ರವಾಸ ಕೈಗೊಂಡಿರುವ ಅವರು, ಬೆಳಗ್ಗೆ ಏಳು ಗಂಟೆಗೆ ಹೊಸಪೇಟೆಯತ್ತ ಪ್ರಯಾಣ ಬೆಳೆಸಿದ್ದಾರೆ. ತಮ್ಮ ಸದಾಶಿವನಗರ ನಿವಾಸದಿಂದ ರಸ್ತೆ ಮಾರ್ಗದಲ್ಲಿ ಹೊರಟಿರುವ ಅವರು ಮಧ್ಯಾಹ್ನ 12 ಗಂಟೆಗೆ ಹೊಸಪೇಟೆ ತಲುಪಲಿದ್ದಾರೆ.
ಈ ಭೇಟಿ ಸಂದರ್ಭ ಜಿಲ್ಲಾ ಕಾಂಗ್ರೆಸ್ ನಾಯಕರು ಸ್ಥಳೀಯ ಶಾಸಕರು ಮಾಜಿ ಶಾಸಕರು, ಮಾಜಿ ಸಚಿವರು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಜೊತೆ ಸಮಾಲೋಚನಾ ಸಭೆ ನಡೆಸಲಿದ್ದಾರೆ. ಆಯಾ ಜಿಲ್ಲೆಗಳಲ್ಲಿ ವಾಸ್ತವ್ಯ ಹೂಡಿ ಪಕ್ಷ ಸಂಘಟನೆಗೆ ಅಗತ್ಯವಿರುವ ಮಾಹಿತಿ, ಸಲಹೆ, ಸೂಚನೆ ಪಡೆಯಲಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಕೇಡರ್ ಆಧಾರಿತ ಪಕ್ಷವಾಗಿ ಕಟ್ಟುವ ಗುರಿ ಹೊಂದಿರುವ ಅವರು ಈ ಪ್ರವಾಸದಲ್ಲಿ ಅದೇ ನಿಟ್ಟಿನಲ್ಲಿ ಅಗತ್ಯವಿರುವ ಪ್ರಯತ್ನ ಮಾಡಲಿದ್ದಾರೆ. 2023ರ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷವನ್ನು ಸಂಘಟಿಸುವ ದೃಷ್ಟಿಯಿಂದ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲು ಡಿಕೆಶಿ ನಿರ್ಧರಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಡಿಕೆಶಿ ಪ್ರವಾಸದ ವಿವರ:
ನ. 22 ರಂದು ಬಳ್ಳಾರಿ ಜಿಲ್ಲಾ ಪ್ರವಾಸ
ನ.23 ರಂದು ರಾಯಚೂರು ಜಿಲ್ಲಾ ಪ್ರವಾಸ
ನ.24 ರಂದು ಕಲಬುರಗಿ ಜಿಲ್ಲಾ ಪ್ರವಾಸ
ನ.25 ರಂದು ಬೆಳಗ್ಗೆ ಬೆಂಗಳೂರಿನತ್ತ ಹೊರಡಲಿದ್ದಾರೆ. ಅಂದು ಸಂಜೆಯೇ ಬೆಂಗಳೂರಿನ ಸಿಬಿಐ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಬೇಕಾಗಿರುವ ಅನಿವಾರ್ಯತೆ ಎದುರಿಸುತ್ತಿರುವ ಅವರು, ಬೆಳಗ್ಗೆ ಪ್ರವಾಸ ಪೂರ್ಣಗೊಳಿಸಿ ಸದಾಶಿವನಗರ ನಿವಾಸಕ್ಕೆ ಆಗಮಿಸಲಿದ್ದಾರೆ. ಸಂಜೆ 4ರ ನಂತರ ವಿಚಾರಣೆಗೆ ತೆರಳಲಿದ್ದಾರೆ.