ಬೆಂಗಳೂರು : ಮನಗೂಳಿ ಅವರು ನಮ್ಮನ್ನು ಬಂದು ಭೇಟಿ ಮಾಡಿದ್ದು ನಿಜ. ಈ ವಿಚಾರದಲ್ಲಿ ಸುಳ್ಳು ಹೇಳುವ ಅಗತ್ಯ ನನಗಿಲ್ಲ. ಬೇರೆ ಪಕ್ಷಗಳ ಅಭ್ಯರ್ಥಿಯನ್ನು ಹೈಜಾಕ್ ಮಾಡುವ ಸ್ಥಿತಿ ಕಾಂಗ್ರೆಸ್ಗೆ ಬಂದಿಲ್ಲ. ಪಕ್ಷದ ಸಿದ್ಧಾಂತ ಒಪ್ಪಿ ಬರುವವರನ್ನು ನಾವು ಬೇಡ ಎನ್ನುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ತಿಳಿಸಿದ್ದಾರೆ.
ಸಿಂದಗಿ ಉಪಚುನಾವಣೆಯಲ್ಲಿ ಮನಗೂಳಿ ಅವರ ಪುತ್ರ ಅಶೋಕ್ ಮನಗೂಳಿ ಅವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ವಿಚಾರವಾಗಿ ಕುಮಾರಸ್ವಾಮಿ ಅವರು ಮಾಡಿರುವ ಟ್ವೀಟ್ಗೆ ಸಂಬಂಧಿಸಿದಂತೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿ, ಅಶೋಕ್ ಅವರು ನಮ್ಮ ಅಭ್ಯರ್ಥಿ.
ಮನಗೂಳಿ ಅವರು ಬಂದು ನನ್ನನ್ನು ಭೇಟಿ ಮಾಡಿ ಮಾತನಾಡಿದ ವಿಚಾರ ನನಗೆ ಮನಗೂಳಿ ಹಾಗೂ ಅವರ ಪುತ್ರ ಅಶೋಕ್ಗೆ ಗೊತ್ತಿದೆ. ನಾನು ಈ ವಿಚಾರವನ್ನು ಬಹಿರಂಗವಾಗಿ ಹೇಳಿದ್ದು, ಗೌಪ್ಯವಾಗಿ ಹೇಳಿಲ್ಲ. ನಾನು ಮಾತ್ರವಲ್ಲ ಸಿದ್ದರಾಮಯ್ಯನವರು ಕೂಡ ಈ ಬಗ್ಗೆ ಪ್ರಸ್ತಾಪಿಸಿದ್ದಾರೆ. ನಾವು ಈ ವಿಚಾರದಲ್ಲಿ ಯಾಕೆ ಸುಳ್ಳು ಹೇಳಬೇಕು? ಅದರ ಅಗತ್ಯ ನಮಗೇನಿದೆ? ಬೇಕಿದ್ದರೆ ಅಶೋಕ್ ಮನಗೂಳಿ ಅವರನ್ನೇ ಕೇಳಿ ಎಂದು ಹೇಳಿದರು.
ನಾವು ಯಾರನ್ನೂ ಹೈಜಾಕ್ ಮಾಡುವುದಿಲ್ಲ : ತಮ್ಮ ಪಕ್ಷದಲ್ಲಿದ್ದವರು ಕಾಂಗ್ರೆಸ್ಗೆ ಹೋಗಿದ್ದಾರಲ್ಲ ಎಂಬ ನೋವು ಕುಮಾರಣ್ಣ ಅವರಿಗಿದೆ. ಆ ನೋವಿನಿಂದ ಮಾತನಾಡಿದ್ದಾರೆ. ಅದಕ್ಕೆ ನಾನು ಬೇಸರ ಮಾಡಿಕೊಳ್ಳುವುದಿಲ್ಲ. ನಾವು ಯಾರನ್ನೂ ಹೈಜಾಕ್ ಮಾಡುವುದಿಲ್ಲ. ನಮ್ಮಲ್ಲಿ ಸಾಕಷ್ಟು ಸಂಖ್ಯಾಬಲ ಇದೆ. ನಮ್ಮ ಪಕ್ಷಕ್ಕೆ ಸ್ವಇಚ್ಛೆಯಿಂದ ಬರುವವರನ್ನು ನಾವು ಬೇಡ ಎನ್ನುವುದಿಲ್ಲ.
ರಾಜಕಾರಣ ನಿಂತ ನೀರಲ್ಲ ಎಂದು ಕುಮಾರಣ್ಣ ಅವರೇ ಹೇಳಿದ್ದಾರೆ. ಕೆಲವರು ಬಿಜೆಪಿಗೆ ಹೋಗಲು ಸಿದ್ಧರಿರುತ್ತಾರೆ. 17 ಜನ ಸಂಸದರು ಗೆದ್ದು, ದೇವೇಗೌಡರು ದೇಶದ ಪ್ರಧಾನಿ ಆದಾಗ, ನಾವು ಅವರನ್ನು ಹೈಜಾಕ್ ಮಾಡಿ ಕರೆದುಕೊಂಡು ಬಂದಿದ್ದೆವಾ? ಒಂದಲ್ಲಾ ಒಂದು ಕಾರಣದಿಂದ ಬರುವವರು ಬರುತ್ತಾರೆ. ಈ ಹಿಂದೆ ಅನೇಕ ನಾಯಕರು ಕೂಡ ಅವರ ಜತೆ ರಾಜಕೀಯ ಭಿನ್ನಾಭಿಪ್ರಾಯದಿಂದ ಕಾಂಗ್ರೆಸ್ಗೆ ಬಂದಿದ್ದರು.
ಅದೇ ರೀತಿ ಮನಗೂಳಿ ಅವರು ಸಾಯುವ ಮುನ್ನ ನನ್ನನ್ನು ಭೇಟಿ ಮಾಡಿದ್ದು ನಿಜ. ಆಗ ಅವರ ಪುತ್ರ ಅಶೋಕ್ ಅವರು ಇದ್ದದ್ದೂ ನಿಜ. ನಾವು ಯಾರ ಮತವನ್ನೂ ಗುತ್ತಿಗೆಗೆ ತೆಗೆದುಕೊಂಡಿಲ್ಲ. ನನ್ನ ಮತವನ್ನೇ ನಾನು ಗುತ್ತಿಗೆ ತೆಗೆದುಕೊಳ್ಳಲು ಆಗುವುದಿಲ್ಲ. ಪ್ರಜಾಪ್ರಭುತ್ವದಲ್ಲಿ ಎಲ್ಲರೂ ಗೌಪ್ಯವಾಗಿ ಮತ ಹಾಕುತ್ತಾರೆ ಎಂದರು.
ಎರಡೂ ಕ್ಷೇತ್ರಗಳಲ್ಲಿ ಬೆಂಬಲ : ಸಿಂದಗಿ ಹಾಗೂ ಹಾನಗಲ್ ಉಪ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಕೆ ವೇಳೆ ಪಕ್ಷದ ಪರವಾಗಿ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಉತ್ಸಾಹ, ಬೆಂಬಲ ಸಿಕ್ಕಿದ್ದು, ಎರಡೂ ಕ್ಷೇತ್ರಗಳಲ್ಲಿ ನಾವು ಗೆಲ್ಲುತ್ತೇವೆ. ಬೆಳಗ್ಗೆ 10 ರಿಂದ ರಾತ್ರಿ 10 ಗಂಟೆವರೆಗೂ ಇದ್ದ ಚುನಾವಣೆ ಪ್ರಚಾರದ ಅವಕಾಶವನ್ನು ರಾತ್ರಿ 7ಗಂಟೆಗೆ ಸೀಮಿತಗೊಳಿಸಿ ಹೊಸ ನಿಯಮ ತಂದಿದ್ದಾರೆ.
ನಾವು ನಮ್ಮದೇ ಆದ ತಂತ್ರಗಾರಿಕೆ ಮೂಲಕ ಪ್ರಚಾರ ಮಾಡುತ್ತೇವೆ. ನಾವು ನಿತ್ಯ ಆಂತರಿಕ ವರದಿ ಪಡೆಯುತ್ತಿರುತ್ತೇವೆ. ಮುಖ್ಯಮಂತ್ರಿಗಳಿಗೂ ನಿತ್ಯ ವರದಿ ಹೋಗುತ್ತಿರುತ್ತದೆ. ಎರಡೂ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಪಕ್ಷ ಗೆಲ್ಲಲಿದೆ ಎಂಬ ಮಾಹಿತಿಯೇ ಮುಖ್ಯಮಂತ್ರಿಗಳಿಗೆ ರವಾನೆಯಾದ ವರದಿಯಲ್ಲೂ ಇದೆ ಎಂದ್ರು.
ರಮೇಶ್ ಆಪ್ತರು ನನ್ನ ಭೇಟಿ ಮಾಡಿದ್ದು ನಿಜ : ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಆಪ್ತರು ನನ್ನನ್ನು ಬಂದು ಭೇಟಿ ಮಾಡಿ, ಅನೇಕ ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದಾರೆ. ಅವರ ಸಂದೇಶಗಳನ್ನು ತಿಳಿಸಿದ್ದಾರೆ. ಈ ವಿಚಾರಗಳನ್ನು ನಾನು ಈಗ ಗೌಪ್ಯವಾಗಿ ಇಡಬೇಕಿದೆ, ಅದನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದಷ್ಟೇ ಹೇಳಿದರು.