ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪಕ್ಷದ ಕಾರ್ಯಾಧ್ಯಕ್ಷರ ಜೊತೆ ಪಕ್ಷ ಸಂಘಟನೆ ಕುರಿತು ಸಮಾಲೋಚನೆ ನಡೆಸಿದರು. ಬೆಂಗಳೂರಿನ ತಮ್ಮ ನಿವಾಸದಲ್ಲಿ ಕಾರ್ಯಾಧ್ಯಕ್ಷರಾದ ಸತೀಶ್ ಜಾರಕಿಹೊಳಿ ಹಾಗೂ ಸಲೀಂ ಅಹ್ಮದ್ ಉಪಸ್ಥಿತರಿದ್ದರು.
ಈ ವೇಳೆ ಮುಂಬರುವ ದಿನಗಳಲ್ಲಿ ಪಕ್ಷ ಸಂಘಟನೆ ವಿಚಾರದಲ್ಲಿ ಹಾಗೂ ಕೆಪಿಸಿಸಿ ವಿವಿಧ ಸಮಿತಿಗಳ ರಚನೆಯಲ್ಲಿ ಒಮ್ಮತದ ತೀರ್ಮಾನ ಕೈಗೊಳ್ಳುವ ಸಂಬಂಧ ಸುದೀರ್ಘ ಚರ್ಚೆ ನಡೆಯಿತು. ಇತ್ತೀಚೆಗಷ್ಟೇ ದೆಹಲಿಗೆ ತೆರಳಿ ಪಕ್ಷದ ಹೈಕಮಾಂಡ್ ನಾಯಕರ ಜೊತೆ ಸಮಾಲೋಚಿಸಿ ಆಗಮಿಸಿರುವ ಡಿಕೆಶಿ, ಮುಂದಿನ ದಿನಗಳಲ್ಲಿ ಕೆಪಿಸಿಸಿ ವಿವಿಧ ಸಮಿತಿಗಳಿಗೆ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ನೇಮಕ ಮಾಡಲು ತೀರ್ಮಾನಿಸಿದ್ದಾರೆ. ಈ ಮೂಲಕ ಪಕ್ಷ ಸಂಘಟನೆ ಹಾಗೂ ಇತರ ಕಾರ್ಯ ನಿರ್ವಹಣೆಗೆ ಅನುಕೂಲ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ.
ಅಲ್ಲದೇ ಮುಂಬರುವ ದಿನಗಳಲ್ಲಿ ನಡೆಯಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೂ ಮುನ್ನವೇ ಪಕ್ಷದ ಜಿಲ್ಲಾ ಹಾಗೂ ತಾಲೂಕು ಮಟ್ಟದ ಸಕ್ರಿಯ ಹಾಗೂ ಪ್ರಾಮಾಣಿಕ ಕಾರ್ಯಕರ್ತರನ್ನು ಗುರುತಿಸಿ ಅಧಿಕಾರ ನೀಡುವ ವಿಚಾರವಾಗಿ ಗಂಭೀರ ಚಿಂತನೆ ನಡೆಸಿದ್ದಾರೆ. ಈ ಎಲ್ಲ ವಿಚಾರವನ್ನು ಕಾರ್ಯಾಧ್ಯಕ್ಷರ ಜೊತೆ ಅವರು ಹಂಚಿಕೊಂಡರು.
ಎರಡು ದಿನಗಳ ಹಿಂದಷ್ಟೇ ಕೆಪಿಸಿಸಿ ಕಚೇರಿಯಲ್ಲಿ ಕಾರ್ಯಾಧ್ಯಕ್ಷರ ಜೊತೆ ಸಭೆ ನಡೆಸಿ ಸುಧೀರ್ಘ ಚರ್ಚೆ ಮಾಡಿದ ಡಿಕೆಶಿ, ಪಕ್ಷ ಸಂಘಟನೆ ಹಾಗೂ ತಳಮಟ್ಟದಿಂದ ಪಕ್ಷವನ್ನು ಕಟ್ಟುವ ವಿಚಾರವಾಗಿ ಸುದೀರ್ಘ ವಿಚಾರ ವಿನಿಮಯ ನಡೆಸಿದ್ದರು. ನಿನ್ನೆ ಅದರ ಮುಂದುವರಿದ ಭಾಗವಾಗಿ ಕಾರ್ಯಾಧ್ಯಕ್ಷರೊಂದಿಗೆ ಸಮಾಲೋಚನೆ ನಡೆಸಿದ್ದಾರೆ.
ಬಳ್ಳಾರಿ ಜಿಲ್ಲೆಯ ಪ್ರಮುಖ ನಾಯಕರಾದ ಶಾಸಕ ನಾಗೇಂದ್ರ, ಕೆಪಿಸಿಸಿ ಮಾಜಿ ಅಧ್ಯಕ್ಷ, ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ, ಮಾಜಿ ಎಂಎಲ್ಸಿ ಐವಾನ್ ಡಿಸೋಜಾ ಅವರು ಡಿಕೆಶಿ ಭೇಟಿ ಮಾಡಿ, ಸಮಾಲೋಚನೆ ನಡೆಸಿದರು.
ಡಿಕೆಶಿಗೆ ಅಭಿನಂದನೆ:
ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನ್ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿರುವ ಮಾಜಿ ಸಂಸದ ನಾರಾಯಣಸ್ವಾಮಿ, ಸಂಚಾಲಕ ವಿಜಯ್ ಸಿಂಗ್ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಸದಾಶಿವನಗರ ನಿವಾಸದಲ್ಲಿ ಅಭಿನಂದಿಸಲಾಯಿತು. ಮಾಜಿ ಸಚಿವ ಶಿವಶಂಕರರೆಡ್ಡಿ, ಶಾಸಕರಾದ ನಾಗೇಂದ್ರ, ಹುಲಗೇರಿ, ಮಾಜಿ ಶಾಸಕ ಕೆ.ಎನ್. ರಾಜಣ್ಣ ಮತ್ತಿತರರು ಹಾಜರಿದ್ದರು.