ಬೆಂಗಳೂರು: ಮಸ್ಕಿ ಕ್ಷೇತ್ರ ಗೆದ್ದಿದ್ದೇವೆ, ಬೆಳಗಾವಿಯಲ್ಲಿ ಬಹಳ ಹೋರಾಟ ನಡೆದಿತ್ತು. ನಮ್ಮ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಹೋರಾಟ ನಡೆಸಿ ನಮ್ಮ ಪಕ್ಷಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದರು.
ಓದಿ: ಸುರೇಶ್ ಅಂಗಡಿ ಕನಸುಗಳನ್ನ ನನಸು ಮಾಡುವೆ.. ಕುಂದಾನಗರಿಯ ಮೊದಲ ಮಹಿಳಾ ಸಂಸದೆಯ ಮಾತು
ಸದಾಶಿವನಗರದ ತಮ್ಮ ನಿವಾಸದಲ್ಲಿ ಮಧ್ಯಮಗಳನ್ನುದ್ದೇಶಿಸಿ ಮಾತನಾಡಿ, ವಿಧಾನಸಭೆ ಸದಸ್ಯರಾಗಿದ್ದರೂ, ನಾವೇ ಅವರನ್ನ ಬಲವಂತವಾಗಿ ಚುನಾವಣೆಗೆ ನಿಲ್ಲಿಸಿದ್ದೆವು ಎಂದರು. ಏಕೆ ಸೋತೆವು ಅನ್ನೋದರ ಬಗ್ಗೆ ನಂತರ ಚರ್ಚೆ ಮಾಡೋಣ. ಮೂರು ಉಪ ಚುನಾವಣೆಯಲ್ಲಿ ಕಾರ್ಯಕರ್ತರು ಕೆಲಸ ಮಾಡಿ ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಎಲ್ಲಾ ಕಾರ್ಯಕರ್ತರಿಗೆ ಕೆಪಿಸಿಸಿ ಅಧ್ಯಕ್ಷನಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಬದಲಾವಣೆಯನ್ನ ಜನತೆ ನೋಡುತ್ತಿದ್ದೀರಿ, ಪ್ರಜಾಪ್ರಭುತ್ವ ನೀಡಿದ ಫಲಿತಾಂಶಕ್ಕೆ ಬೆಲೆ ನೀಡಬೇಕು. ಬಂಗಾಳ, ಅಸ್ಸೋಂ, ಕೇರಳದಲ್ಲಿ ನಾವು ಸೋತಿರಬಹುದು, ಬಿಜೆಪಿ ಸೋಲಿಸೋ ಮೂಲಕ ದೇಶದಲ್ಲೇ ಜನ ಬದಲಾವಣೆ ಬಯಸುತ್ತಿದ್ದಾರೆ. ಬಹುತೇಕ ಕಡೆ ಬಿಜೆಪಿಯನ್ನ ಸೋಲಿಸಿದ್ದಾರೆ. ಹೀಗಾಗಿ ಮತದಾರರನ್ನ ಅಭಿನಂದಿಸುತ್ತೇನೆ ಎಂದು ಹೇಳಿದರು.
ಬಸವ ಕಲ್ಯಾಣದಲ್ಲಿ ನಮ್ಮ ಅಭ್ಯರ್ಥಿ ಕಡಿಮೆ ಅಂತರದಲ್ಲಿ ಗೆಲ್ಲುತ್ತಾರೆ ಎನ್ನುವ ನಿರೀಕ್ಷೆ ಇತ್ತು. ಎಲ್ಲಾ ಕಾರ್ಯಕರ್ತರು ಹೋರಾಟ ಮಾಡಿ, ಮೂರು ಕ್ಷೇತ್ರದಲ್ಲಿ ಐಕ್ಯತೆ ಪ್ರದರ್ಶಿಸಿದ್ದಾರೆ. ಮಸ್ಕಿಯಲ್ಲಿ ರೈತರು ಹೋರಾಟ ಮಾಡಿದ್ದು, ಬಸವ ಕಲ್ಯಾಣದಲ್ಲಿ ಜನತೆ ಮತ ಮಾರಿಕೊಂಡಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಬದಲಾವಣೆಯ ದಿಕ್ಕನ್ನು ಹಲವು ಕಡೆ ಜನತೆ ತೋರಿಸಿಕೊಟ್ಟಿದ್ದಾರೆ. ಬದಲಾವಣೆಯನ್ನ ಪ್ರತಿ ಹಂತದಲ್ಲೂ ತೆಗೆದುಕೊಂಡು ಹೋಗುತ್ತೇವೆ. ಯಾರೂ ಕೂಡ ವಿಜಯೋತ್ಸವ ಮಾಡಬಾರದು. ಕೋವಿಡ್ ಹೋರಾಟಕ್ಕೆ ನಾವು ಕೈಜೋಡಿಸಬೇಕು ಎಂದು ಡಿಕೆಶಿ ಮನವಿ ಮಾಡಿದರು.
ಇಂದು ದೇಶದಲ್ಲಿ ದೊಡ್ಡ ಬದಲಾವಣೆ ಆಗಿದೆ, ಮತದಾರ ಕೊಟ್ಟು ತೀರ್ಪನ್ನು ನಾವು ಗೌರವವಿಸಬೇಕು. ದೇಶದ ಜನರು ಬದಲಾವಣೆ ಅವಶ್ಯಕತೆ ಇದೆ ಅಂತ ಹೇಳಿದ್ದಾರೆ. ಬಿಜೆಪಿ ವಿರುದ್ಧ ಮತ ಚಲಾಯಿಸಿದ್ದು ಪಶ್ಚಿಮ ಬಂಗಾಳ, ತಮಿಳುನಾಡು ಇದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.