ಬೆಂಗಳೂರು : ಬಿಜೆಪಿಯವರು ನಮ್ಮ ಸಂಪರ್ಕದಲ್ಲಿದ್ದಾರೆ. ಅವರೇ ನಮ್ಮನ್ನು ಹುಡುಕಿಕೊಂಡು ಬರುತ್ತಿದ್ದಾರೆ. ಆದರೆ ನಮಗೆ ಅವರಿಗೆಲ್ಲ ಅವಕಾಶ ಕೊಡುವುದಕ್ಕೆ ಆಗಲ್ಲ ಎಂದು ಸುಮ್ಮನಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರ ಜತೆ ಮಾತನಾಡಿದ ಅವರು, ಬಿಜೆಪಿಯವರು ನಮ್ಮ ಶಾಸಕರನ್ನು ಕರೆದುಕೊಂಡು ಸರ್ಕಾರ ರಚನೆ ಮಾಡಿದರು. ಇದು ಬಿಜೆಪಿ ಸರ್ಕಾರ ಅಲ್ಲ. ಇದು ಸಮ್ಮಿಶ್ರ ಸರ್ಕಾರ. ಸಿಎಂ ಬೊಮ್ಮಾಯಿಯವರು ಜನತಾದಳದಲ್ಲಿದ್ದರು. ಈಗ ಬಿಜೆಪಿಯಲ್ಲಿದ್ದಾರೆ. ಇದು ಜೆಡಿಎಸ್ ಮತ್ತು ಕಾಂಗ್ರೆಸ್ ಶಾಸಕರಿಂದ ಉಂಟಾದ ಸರ್ಕಾರ. ನಮಗೆ ಅನುಕೂಲ ಆಗುವ ಕಡೆ ಬಿಜೆಪಿಯವರನ್ನು ಸೇರಿಸಿಕೊಳ್ಳುತ್ತೇವೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಬಿಜೆಪಿಯವರಿಗೆ ಬಹುಮತ ಬಂದಿರಲಿಲ್ಲ. ಬೇರೆ ಶಾಸಕರನ್ನು ಕರೆದುಕೊಂಡು ಬಂದು ಸರ್ಕಾರ ರಚನೆ ಮಾಡಿದ್ದಾರೆ. ಬಿಜೆಪಿ ಹೋಗಿದ್ದು ನಮ್ಮದೇ ಶಾಸಕರಲ್ಲವೇ. ಈಗ ಬಿಜೆಪಿಯಿಂದ ಅವರಾಗೇ ವಾಪಸ್ ಬರುತ್ತಿದ್ದಾರೆ. ಸಾಕಷ್ಟು ಜನರು ನಮ್ಮ ಸಂಪರ್ಕದಲ್ಲಿದ್ದಾರೆ, ನಾನು ಅವರ ಹೆಸರು ಹೇಳಲು ಇಷ್ಟಪಡಲ್ಲ. ಈ ಮೂಲಕ ಅವರಿಗೆ ತೊಂದರೆ ಮಾಡಲ್ಲ ಎಂದರು.
ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳ ವಿಷಯವಾಗಿ ಮಾತನಾಡಿ, ಕಾಂಗ್ರೆಸ್ ಪಕ್ಷ ನೀಡುವ ಗ್ಯಾರಂಟಿ ನಾವು ಉಳಿಸಿಕೊಳ್ಳುತ್ತೇವೆ. ಮಹದಾಯಿ ವಿಚಾರದಲ್ಲಿ ಅವಕಾಶ ಕೊಟ್ಟಿಲ್ಲ ಎಂದು ಕೇಂದ್ರವೇ ಹೇಳಿದೆ. ಪ್ರಹ್ಲಾದ್ ಜೋಷಿ ಮಹದಾಯಿ ಸಂಬಂಧ ಸಿಹಿ ಹಂಚಿದ್ದರಲ್ಲ ಎಲ್ಲಿ ಮಹದಾಯಿ ಆಗಿದೆ ಎಂದು ಪ್ರಶ್ನಿಸಿದರು. ನಾವು ಬೋಗಸ್ಸಾ ಇಲ್ಲ ಅವರು ಬೋಗಸ್ಸಾ ಎಂದು ಪ್ರಶ್ನಿಸಿದರು. ನಾವು ಮೂರು ತಿಂಗಳು ಮೊದಲೇ ಚುನಾವಣೆಗೆ ರೆಡಿ ಇದ್ದೇವೆ. ಅವರು ಏನಾದರೂ ಮಾಡಿಕೊಳ್ಳಲಿ. ಇವತ್ತಿನಿಂದ ಸರ್ಕಾರದ ಕೊನೆ ಕ್ಷಣ ಆರಂಭವಾಗಿದೆ. ಬಿಜೆಪಿಯವರು 60-65 ಸೀಟಿಗೆ ಬಂದು ನಿಲ್ಲುತ್ತಾರೆ. ನಾವು ನಿಚ್ಚಳವಾದ ಬಹುಮತ ಬಂದು ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳಿದರು.
ಇನ್ನು, ಎಷ್ಟು ಬೇಗ ಚುನಾವಣೆ ನಡೆಯುತ್ತದೋ ಅಷ್ಟು ಕಾಂಗ್ರೆಸ್ ಒಳ್ಳೆಯದಾಗುತ್ತದೆ. ಸರ್ಕಾರ ಅಧಿಕಾರವನ್ನು ಎಷ್ಟು ದುರ್ಬಳಕೆ ಮಾಡಬೇಕೋ ಅಷ್ಟ ಮಾಡಿದ್ದಾರೆ. ಮೀಸಲಾತಿ ವಿಚಾರದಲ್ಲಿ ಯಾರಿಗೂ ಸಮಾಧಾನ ಇಲ್ಲ. ಕೋರ್ಟ್ ಗೆ ಹೋದರೆ ಯಾವುದೂ ನಿಲ್ಲುವುದಿಲ್ಲ. ಅವರು ಮಾಡಿದ ತಪ್ಪನ್ನು ನಾವು ಸರಿ ಮಾಡುತ್ತೇವೆ. ಮನೆ ಆಸ್ತಿ ಹಂಚಿಕೆ ಮಾಡಿಕೊಂಡಂತೆ ಇವರು ಕೊನೆ ಕ್ಷಣದಲ್ಲಿ ಹಂಚಿಕೊಳ್ಳಲು ಹೊರಟಿದ್ದಾರೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಸದಾಶಿವ ಆಯೋಗದ ವರದಿಯಲ್ಲಿ ಏನಿದೆ ಅನ್ನುವುದನ್ನು ಜನರಿಗೆ ತಿಳಿಸಿ. ಇದನ್ನು ಮಾಡಿದ್ದು ನಾವು. ಇದರಲ್ಲಿ ಎಲ್ಲಿ ಸಮುದಾಯಗಳನ್ನು ಭಾಗ ಮಾಡಿದ್ದಾರೆ ಎಂದು ತೋರಿಸಲಿ. ಈ ಬಿಜೆಪಿಯವರು ಕಾನೂನಿಗೆ ವಿರುದ್ಧವಾದ ಕೆಲಸಗಳನ್ನೇ ಮಾಡಿಕೊಂಡು ಬಂದಿದ್ದಾರೆ. ಯಡಿಯೂರಪ್ಪ ನವರ ಸ್ವಂತ ಊರಿನಲ್ಲಿಯೇ ಸಮಯದಾಯದ ಆಕ್ರೋಶ ಎಷ್ಟಿದೆ ನೋಡಿದ್ದೀರಲ್ಲ. ಎಲ್ಲರಿಗೂ ನ್ಯಾಯ ಒದಗಿಸುವ ಕೆಲಸ ನಾವು ಮಾಡುತ್ತೇವೆ. ಓಬಿಸಿ ರಿಪೋರ್ಟ್, ಎಸ್.ಸಿ ಎಸ್ಟಿ ರಿಪೋರ್ಟ್ ಎಲ್ಲ ತೆಗೆದು ಜನರ ಮುಂದಿಡಿ. ಯಾಕೆ ಜನರ ಮುಂದೆ ವರದಿಗಳನ್ನು ಇಟ್ಟಿಲ್ಲ? ಸದಾಶಿವ ಆಯೋಗವನ್ನು ಎಸ್.ಎಂ ಕೃಷ್ಣ ಕಾಲದಲ್ಲಿ ಕಾಂಗ್ರೆಸ್ ಮಾಡಿದೆ. ಜೇನುಗೂಡಿಗೆ ಕೈ ಹಾಕಿದ್ದೀವಿ ಅಂದಿದ್ದೀರಲ್ಲ, ಜೇನುಗೂಡಲ್ಲ ಕಡುಜೇನಿಗೆ ಕೈ ಹಾಕಿದ್ದೀರಿ ಎಂದು ಟೀಕಿಸಿದರು.
ಇದನ್ನೂ ಓದಿ : ಕುರುಬರ ಸಮುದಾಯಕ್ಕೆ ಕಾಂಗ್ರೆಸ್ ಪಕ್ಷ ಅನ್ಯಾಯ ಮಾಡಿದೆ: ಸಿದ್ಧರಾಮಾನಂದಪುರ ಸ್ವಾಮೀಜಿ