ಬೆಂಗಳೂರು:ಮಾಜಿ ಸಂಸದ ವಿಎಸ್ ಉಗ್ರಪ್ಪ ಮುಚ್ಚಿದ ಲಕೋಟೆಯಲ್ಲಿ ಉತ್ತರ ನೀಡಿದ್ದು, ಅದನ್ನು ಬಹಿರಂಗಪಡಿಸುವುದಿಲ್ಲ ಎಂದು ಕಾಂಗ್ರೆಸ್ ಶಿಸ್ತು ಸಮಿತಿ ಅಧ್ಯಕ್ಷ ರಹಮಾನ್ ಖಾನ್ ತಿಳಿಸಿದ್ದಾರೆ.
ತಮ್ಮ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ರೆಹಮಾನ್ ಖಾನ್, ಇಂದು ಬೆಳಗ್ಗೆ ತಮ್ಮನ್ನು ಭೇಟಿಯಾಗಿ ಉಗ್ರಪ್ಪ ಉತ್ತರ ನೀಡಿದ್ದಾರೆ. ಇತ್ತೀಚೆಗೆ ಕೆಪಿಸಿಸಿ ಕಚೇರಿಯಲ್ಲಿ ತಾವು ಮತ್ತು ಕೆಪಿಸಿಸಿ ಮಾಧ್ಯಮ ವಿಭಾಗದ ಸಮನ್ವಯಕಾರ ನಡುವೆ ನಡೆದ ಚರ್ಚೆ ಹಾಗೂ ಅದರಿಂದ ಉಂಟಾದ ಗೊಂದಲಗಳಿಗೆ ಸ್ಪಷ್ಟೀಕರಣ ನೀಡಿದ್ದಾರೆ. ಉಭಯ ನಾಯಕರ ಸಂಭಾಷಣೆಯ ಆಡಿಯೋ ವೈರಲ್ ಆದ ಹಿನ್ನೆಲೆ ಶಿಸ್ತು ಸಮಿತಿ ಸಲೀಂರನ್ನ ಉಚ್ಛಾಟನೆ ಮಾಡಿತ್ತು.
ಉಗ್ರಪ್ಪಗೆ ಉತ್ತರ ನೀಡುವಂತೆ ಸೂಚಿಸಿತ್ತು. ಪಕ್ಷದ ರಾಜ್ಯಾಧ್ಯಕ್ಷರಿಗೆ ಮುಜುಗರ ಆಗುವ ರೀತಿ ಮಾತುಕತೆ ನಡೆದಿದೆ ಎಂಬ ಮಾಹಿತಿ ಇದ್ದು, ಮುಂದಿನ ದಿನಗಳಲ್ಲಿ ಈ ಬಗ್ಗೆ ವಿಚಾರಣೆ ನಡೆಸುತ್ತೇವೆ ಎಂದು ತಿಳಿಸಿದ್ದಾರೆ.
ಉಗ್ರಪ್ಪ ಉತ್ತರ ಕೊಟ್ಟಿದ್ದಾರೆ, ಸೀಲ್ ಕವರ್ನಲ್ಲಿ ಕೊಟ್ಟಿದ್ದಾರೆ. ನಾನು ಕೂಡ ಇನ್ನೂ ನೋಡಿಲ್ಲ. ಉತ್ತರ ಏನಿದೆ ಎಂದು ಬಹಿರಂಗ ಪಡಿಸಲು ಆಗಲ್ಲ. ಮೊದಲು ಉತ್ತರವನ್ನ ನಮ್ಮ ಶಿಸ್ತು ಕಮಿಟಿ ಮುಂದೆ ಇಡಬೇಕು. ಸದ್ಯದಲ್ಲಿ ಕಮಿಟಿಯನ್ನ ಕರೆದು, ಆ ವರದಿಯನ್ನ ಮುಂದಿಡುತ್ತೇನೆ. ಉತ್ತರ ಕೇಳಿದ್ವಿ, ಉತ್ತರ ಕೊಟ್ಟಿದ್ದಾರೆ, ಮುಂದೆ ನೋಡೋಣ ಏನಾಗುತ್ತೆ ಎಂದಿದ್ದಾರೆ.
ಈ ವಿಷಯ ತಿಳಿದು ಶಿಸ್ತು ಸಮಿತಿ ಸಭೆ ಕರೆದೆ. ಸಭೆಯಲ್ಲಿ ದೀರ್ಘವಾಗಿ ವಿಚಾರ ನಡೆಸಿದೆವು. ದೀರ್ಘವಾಗಿ ವಿಚಾರ ನಡೆಸಿಯೇ ಸಲೀಂರನ್ನ ಉಚ್ಛಾಟನೆ ಮಾಡಿದ್ದು. ಆದ್ರೆ ಉಗ್ರಪ್ಪನವರ ಮಾತು ಕ್ಲಿಯರ್ ಇಲ್ಲ. ಉಗ್ರಪ್ಪ ಅವರ ಮಾತು ಕೇಳಿಸಿಕೊಂಡು, ನಗ್ತಾ ಇದ್ರು ಅಷ್ಟೇ. ಆದ್ರೆ ಸಲೀಂ ಮಾತುಗಳು ಕ್ಲಿಯರ್ ಇದೆ, ಆ ಕಾರಣಕ್ಕೆ ಅವ್ರನ್ನ ಉಚ್ಛಾಟನೆ ಮಾಡಿದ್ದೀವಿ. ಉಗ್ರಪ್ಪ ಅವರ ಮೇಲೆ ನಾವು ಶಿಸ್ತು ಕ್ರಮತೆಗೆದುಕೊಳ್ಳಲು ಸಾಧ್ಯವಿಲ್ಲ. ಅದನ್ನ ಎಐಸಿಸಿ ತೀರ್ಮಾನ ಮಾಡುತ್ತೆ ಎಂದರು.
ಹೆಚ್ಡಿಕೆ ವಿರುದ್ಧ ಕಿಡಿ:
ಹೆಚ್ ಡಿ ಕುಮಾರಸ್ವಾಮಿ ಅಲ್ಪಸಂಖ್ಯಾತ ಪ್ರೇಮಕ್ಕೆ ಮಾಜಿ ಕೇಂದ್ರ ಸಚಿವ ರಹಮಾನ್ ಖಾನ್ ಕಿಡಿಕಾರಿದರು. ಕುಮಾರಸ್ವಾಮಿಗೆ ಈಗ ಯಾಕೆ ದಿಢೀರ್ ಜಾಫರ್ ಷರೀಫ್ ಮೊಮ್ಮಗನ ಮೇಲೆ ಪ್ರೀತಿ ಬಂದಿದೆ. ಅಲ್ಪ ಸಂಖ್ಯಾತರನ್ನು ಚೆಸ್ ಬೋರ್ಡ್ನಲ್ಲಿನ ದಾಳದಂತೆ ಮಾಡಿಕೊಳ್ಳಲಾಗಿದೆ. ಎಲ್ಲ ಪಕ್ಷದವರೂ ಅಲ್ಪ ಸಂಖ್ಯಾತರನ್ನು ಪಾನ್ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ನಲ್ಲಿ ಅಲ್ಪ ಸಂಖ್ಯಾತರನ್ನು ಕಡೆಗಣಿಸಲಾಗುತ್ತಿದೆ ಎಂಬ ಜನರಲ್ ಅಭಿಪ್ರಾಯ ಇದೆ.
ಕಮ್ಯುನಲ್ ಫೋರ್ಸ್ಗಳಿಂದಾಗಿ ಸೆಕ್ಯುಲರ್ ಪಾರ್ಟಿಗಳೂ ಕೂಡ ಅಲ್ಪಸಂಖ್ಯಾತರ ಹೆಸರು ತೆಗೆದುಕೊಳ್ಳಲು ಹೆದರುತ್ತಿದ್ದಾರೆ. ಜೆಡಿಎಸ್ ಸೆಕ್ಯುಲರ್ ಅಂತ ಹೇಳಿಕೊಳ್ಳುತ್ತೆ, ಆದರೆ ಬಿಜೆಪಿ ಜೊತೆ ಸೇರಿ ಅಧಿಕಾರ ನಡೆಸ್ತಾರೆ. ಇದ್ಯಾವ ಸೆಕ್ಯುಲರಿಸಂ? ಎಂದು ಕೇಳಿದರು.
ಸಿಎಂ ಇಬ್ರಾಹಿಂ ಪಕ್ಷ ತೊರೆಯುತ್ತಿರುವ ವಿಚಾರ ಪ್ರಸ್ತಾಪಿಸಿ, ಸಿಎಂ ಇಬ್ರಾಹಿಂ ಹಿರಿಯ ನಾಯಕರು. ಅವರನ್ನು ವಿಪಕ್ಷ ನಾಯಕನಾಗಿ ಮಾಡಬೇಕು ಬೇಡ ಎನ್ನೋದಕ್ಕೆ ಸಮಾಜದ ಬಣ್ಣ ಕೊಡೋದು ಬೇಡ.
ಅವರನ್ನು ವಿಪಕ್ಷ ನಾಯಕನಾಗಿ ಮಾಡುವುದು ಬಿಡುವುದು ಸಮಾಜಕ್ಕೆ ಸಂಬಂಧಿಸಿದ ವಿಚಾರ ಅಲ್ಲ. ಸಿಎಂ ಇಬ್ರಾಹಿಂ ಅವರನ್ನು ಹಿಂದೆ ಜೆಡಿಎಸ್ ನಿಂದ ಕಾಂಗ್ರೆಸ್ ಸೇರಿದಾಗ ಮಂತ್ರಿ ಮಾಡಿದ್ದರು. ಗುಂಡೂರಾವ್ ಸರ್ಕಾರದಲ್ಲಿ ಸಿಎಂ ಇಬ್ರಾಹಿಂ ಮಂತ್ರಿ ಆಗಿದ್ದರು. ನನಗೆ ಅಧಿಕಾರ ನೀಡಿದ್ದೂ ಕೂಡ ಕಾಂಗ್ರೆಸ್ ಪಕ್ಷವೇ. ಕಾಂಗ್ರೆಸ್ ಪಕ್ಷ ಅಧಿಕಾರ ನೀಡಲಿಲ್ವಾ? ಎಂದು ರಹಮಾನ್ ಖಾನ್ ಪ್ರಶ್ನೆ ಮಾಡಿದರು.