ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಸೋಂಕಿನ ಎರಡಲೇ ಅಲೆ ಇಳಿಕೆಯಾಗುತ್ತಿದೆ. ಹೀಗಾಗಿ, ಕೋರ್ಟ್ ಹಿಂದಿನ ಆದೇಶದಂತೆ ರಾಜ್ಯಾದ್ಯಂತ ಕೆರೆಗಳು ಮತ್ತು ಅವುಗಳ ಬಫರ್ ಝೋನ್ ಸರ್ವೇ ಕಾರ್ಯವನ್ನು ಚುರುಕುಗೊಳಿಸಿ ಎಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ. ರಾಜ್ಯಾದ್ಯಂತ ಒತ್ತುವರಿಯಾಗಿರುವ ಹಾಗೂ ಹಂತಹಂತವಾಗಿ ಕಣ್ಮರೆಯಾಗುತ್ತಿರುವ ಕೆರೆಗಳ ಸಂರಕ್ಷಣೆ ಕೋರಿ ಸಿಟಿಜನ್ ಆ್ಯಕ್ಷನ್ ಗ್ರೂಪ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯಪೀಠ ಈ ನಿರ್ದೇಶನ ನೀಡಿದೆ.
ವಿಚಾರಣ ವೇಳೆ ಸರ್ಕಾರಿ ವಕೀಲರನ್ನು ಪ್ರಶ್ನಿಸಿದ ಪೀಠ, ಹಿಂದಿನ ವಿಚಾರಣೆ ವೇಳೆ ರಾಜ್ಯದ ಎಲ್ಲ ಕೆರೆಗಳ ಸಮೀಕ್ಷೆ ಕಾರ್ಯದ ವರದಿ ಕೇಳಿದ್ದೆವು. ಸರ್ಕಾರ ವರದಿ ಸಲ್ಲಿಸಿದೆಯೇ ಎಂದು ಕೇಳಿತು. ಇದಕ್ಕೆ ಉತ್ತರಿಸಿದ ಸರ್ಕಾರಿ ವಕೀಲರು, ಕೋವಿಡ್ ಕಾರಣದಿಂದಾಗಿ ಕೆರೆಗಳ ಸರ್ವೇ ನಡೆಸಲು ವಿಳಂಬವಾಗಿದೆ. ಹೀಗಾಗಿ ಕನಿಷ್ಠ ಮೂರು ತಿಂಗಳು ಕಾಲಾವಕಾಶ ನೀಡಬೇಕು ಎಂದು ಕೋರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಸರಿ ಇಷ್ಟು ದಿನ ಕೋವಿಡ್ ಎರಡಲೇ ಅಲೆ ತೀವ್ರವಾಗಿತ್ತು. ಇದೀಗ ಇಳಿಮುಖವಾಗುತ್ತಿದ್ದು ಕೆಲಸ ಮಾಡಬಹುದಲ್ಲವೇ ಎಂದಿತು. ಹಾಗೆಯೇ, 2019ರ ಆದೇಶದಂತೆ ರಾಜ್ಯದಲ್ಲಿನ ಎಲ್ಲ ಕೆರೆಗಳು ಮತ್ತು ಬಫರ್ ವಲಯದ ಸರ್ವೇ ಕಾರ್ಯವನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು ಎಂದು ನಿರ್ದೇಶಿಸಿತು. ಅಲ್ಲದೆ, ಮುಂದಿನ ದಿನಗಳಲ್ಲಿ ಕೆರೆಗಳ ಬಫರ್ ಜೋನ್ ಗುರುತಿಸಿದ ನಂತರ ಅನಧಿಕೃತ ಕಟ್ಟಡಗಳನ್ನು ತೆರವು ಮಾಡುವ ಸಮಸ್ಯೆ ಎದುರಾಗಲಿದೆ. ಇನ್ನು ಬಫರ್ ವಲಯವೇ ಖಾಸಗಿಯವರ ಸ್ವತ್ತಾಗಿದ್ದರೆ ಏನು ಮಾಡಬೇಕೆಂಬ ಪ್ರಶ್ನೆಯೂ ಎದುರಾಗುತ್ತದೆ. ಈ ಕುರಿತು ಮುಂದಿನ ವಿಚಾರಣೆ ವೇಳೆ ಪರಿಶೀಲಿಸಬೇಕಾಗುತ್ತದೆ ಎಂದು ತಿಳಿಸಿ ವಿಚಾರಣೆ ಮುಂದೂಡಿತು.
ಕೆರೆ ಸಂರಕ್ಷಣೆ ಸಮಿತಿಗಳ ಸಭೆ ನಡೆಸಿ:
ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಕೆರೆಗಳ ಸಂರಕ್ಷಣೆಗಾಗಿ ರಚಿಸಲಾಗಿರುವ ಸಮಿತಿಗಳು ಕನಿಷ್ಠ ತಿಂಗಳಿಗೊಮ್ಮೆಯಾದರೂ ಕುಂದು-ಕೊರತೆ ಸಭೆ ನಡೆಸುವಂತೆ ನೋಡಿಕೊಳ್ಳಿ. ಸಮಿತಿಗಳು ಆಗಾಗ್ಗೆ ಸಭೆ ನಡೆಸಿ ಸಮಸ್ಯೆಗಳಿಗೆ ಅಲ್ಲಿಯೇ ಪರಿಹಾರ ಕಂಡುಕೊಳ್ಳಬಹುದು ಎಂದು ಸರ್ಕಾರಕ್ಕೆ ಸೂಚಿಸಿತು.