ಬೆಂಗಳೂರು : ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಸಂಪೂರ್ಣವಾಗಿ ರೈತ ವಿರೋಧಿ ನಿಲುವು ತೆಗೆದುಕೊಂಡಿದೆ ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ದೂರಿದರು. ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏಳು ಗಂಟೆ ಕೊಡಬೇಕಿದ್ದ ವಿದ್ಯುತ್ ಎರಡು ಗಂಟೆಗೆ ಇಳಿಸಿದ್ದಾರೆ. ಬಿತ್ತನೆ ಬೀಜ ಹಾಳಾಗಿದ್ದು, ಗೊಬ್ಬರ ಸಮಸ್ಯೆ ಇದೆ. ಇದರ ನಡುವೆ ಲೋಡ್ ಶೆಡ್ಡಿಂಗ್ ಜಾರಿಯಿಂದ ಬೆಳೆ ಉಳಿಸಿಕೊಳ್ಳಲು ಆಗಿಲ್ಲ. ವಿದ್ಯುತ್ ಖರೀದಿ ಮಾಡಲು ಏನು ಬೇಕಾದರೂ ಮಾಡಿ. ಆದರೆ, ರೈತರ ಬಾಳಲ್ಲಿ ಚೆಲ್ಲಾಟ ಆಡೋದು ಸರಿಯಲ್ಲ ಎಂದರು.
ಕೃಷಿ ಸಚಿವ ಚಲುವರಾಯಸ್ವಾಮಿ ರೈತರಿಗೆ ಅನ್ಯಾಯ ಆಗಿದೆ ಎಂದು ಹೇಳುತ್ತಿದ್ದಾರೆ. ಇದನ್ನು ಇಂಧನ ಸಚಿವರು ಒಪ್ಪಿಕೊಳ್ಳುತ್ತಿಲ್ಲ. ಇಲಾಖೆಯಲ್ಲಿ ಸಮನ್ವಯದ ಕೊರತೆ ಇದೆ ಎಂದು ತಿಳಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಈ ಕಡೆ ಗಮನ ಹರಿಸಬೇಕು. ಇಲ್ಲದಿದ್ದರೆ, ರೈತರಿಗೆ ಆಗುವ ಅನ್ಯಾಯಕ್ಕೆ, ಸಮಸ್ಯೆಗಳಿಗೆ, ರೈತರ ಆತ್ಮಹತ್ಯೆಗೆ ಸಿಎಂ, ಡಿಸಿಎಂ ನೇರ ಕಾರಣವಾಗುತ್ತಾರೆ. ರೈತರ ಸಮಸ್ಯೆ ಬಗೆಹರಿಸದಿದ್ದರೆ ಬಿಜೆಪಿ ಮುಂದಿನ ದಿನದಲ್ಲಿ ಉಗ್ರ ಹೋರಾಟ ಮಾಡಲಿದೆ ಎಂದು ಎಚ್ಚರಿಸಿದ್ದಾರೆ.
ಮಹಿಷ ದಸರಾ ಆಚರಣೆ ಬಗ್ಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಸರ್ಕಾರ ಯಾವ್ಯಾವ ದಸರಾಗೆ ಅವಕಾಶ ಕೊಟ್ಟಿದೆಯೋ ಗೊತ್ತಿಲ್ಲ. ರಾಕ್ಷಸ ದಸರಾಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಕಾಂಗ್ರೆಸ್‌ನವರು ನ್ಯಾಯಯುತ, ಧರ್ಮದ ವ್ಯವಸ್ಥೆ ಹಾಳು ಮಾಡುತ್ತಿದ್ದಾರೆ. ಚಾಮುಂಡಿ ದಸರಾ ಹೆಮ್ಮೆಯ ವಿಚಾರ. ಅದಕ್ಕೆ ಅವಕಾಶ ಮಾಡಿಕೊಡಬೇಕು. ಅದ್ಯಾವುದೋ ಬೇರೆ ದಸರಾ ಮಾಡುತ್ತೇನೆ ಅಂತ ಹೊರಟಿದ್ದಾರೆ ಎಂದು ವಾಗ್ದಾಳಿ ಮಾಡಿದರು.
ಮಾಜಿ ಸಚಿವ ಮುರುಗೇಶ್ ನಿರಾಣಿ ಮಾತನಾಡಿ,ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಲೋಡ್ ಶೆಡ್ಡಿಂಗ್ ತೀವ್ರಗೊಂಡಿದೆ. ಎಲ್ಲಾ ಇಲಾಖೆಯಲ್ಲಿ ಅಭಿವೃದ್ಧಿ ಶೂನ್ಯ ಪರಿಸ್ಥಿತಿ ತಲೆದೋರಿದೆ. ಕಾಂಗ್ರೆಸ್ ಶಾಸಕರೇ ಸರಕಾರದ ಕಾರ್ಯವೈಖರಿ ವಿರುದ್ಧ ಛೀಮಾರಿ ಹಾಕುವ ಕೆಲಸ ಮಾಡುತ್ತಿದ್ದಾರೆ ಎಂದರು.
ವಿಶೇಷವಾಗಿ ಕೈಗಾರಿಕೆಗಳು ಎಂಎಸ್‍ಎಂಇ, ಸಣ್ಣ ಕೈಗಾರಿಕೆದಾರರು ತೊಂದರೆಗೆ ಸಿಲುಕಿದ್ದಾರೆ. ಸರ್ಕಾರ ವಿದ್ಯುತ್ ದರ ಗಣನೀಯವಾಗಿ ಹೆಚ್ಚಳ ಮಾಡಿದೆ. ಎಲ್ಲಾ ಕೈಗಾರಿಕೆದಾರರ ಸಂಘಗಳು, ಸಣ್ಣ- ಗುಡಿ ಕೈಗಾರಿಕೆಗಳು ವಿದ್ಯುತ್ ದರ ಇಳಿಸಲು ಸರ್ಕಾರಕ್ಕೆ ಮನವಿ ಮಾಡಿವೆ. ಹಿಂದೆ ಕರ್ನಾಟಕದಲ್ಲಿ ಬೆಂಗಳೂರನ್ನು ಇಡೀ ವಿಶ್ವವೇ ತಿರುಗಿ ನೋಡುವ ಸ್ಥಿತಿ ಇತ್ತು. ಈಗ ಎಲ್ಲಾ ಕೈಗಾರಿಕೆಗಳು ಬೇರೆ ರಾಜ್ಯದತ್ತ ಮುಖ ಮಾಡಿವೆ. ಹೊಸದಾಗಿ ಬರಬೇಕಿದ್ದ ಕೈಗಾರಿಕೆಗಳೂ ಈಗ ಬೇರೆ ಕಡೆ ಹೋಗುವ ಪರಿಸ್ಥಿತಿ ಇದೆ ಸರಕಾರವು ಕೂಡಲೇ ಎಚ್ಚೆತ್ತುಕೊಳ್ಳಬೇಕು. ಮೊದಲ ದರದಲ್ಲೇ ವಿದ್ಯುತ್ ಪೂರೈಕೆ ಮಾಡಬೇಕು ಎಂದರು.
ಇದನ್ನೂ ಓದಿ : ಲೋಡ್ ಶೆಡ್ಡಿಂಗ್ ಟೀಕಿಸುವ ಬಿಜೆಪಿ ಎಷ್ಟು ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆ ಹೆಚ್ಚಿಸಿತ್ತು?: ಡಿ.ಕೆ.ಶಿವಕುಮಾರ್