ಬೆಂಗಳೂರು : ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನಲ್ಲಿ ಬೆಳೆ ಬೆಳೆದ ರೈತರನ್ನು ಅಕ್ರಮವಾಗಿ ಒಕ್ಕಲೆಬ್ಬಿಸಿ ಕೋಟ್ಯಂತರ ರೂಪಾಯಿ ಮೌಲ್ಯದ ಬೆಳೆ ಹಾನಿ ಮಾಡಿದ ಡಿಎಫ್‍ಒ ಏಳುಕೊಂಡಲ ಮತ್ತು ಸಂಸದರ ಮೇಲೆ ದೌರ್ಜನ್ಯ ಮಾಡಿದ ಪೊಲೀಸ್ ವರಿಷ್ಠಾಧಿಕಾರಿ (ಎಸ್‍ಪಿ) ನಾರಾಯಣ್ ಅವರನ್ನು ಅಮಾನತು ಮಾಡಬೇಕು. ಇಲ್ಲವಾದರೆ ಅಕ್ಟೋಬರ್ 3ರಂದು ಬೃಹತ್ ಹೋರಾಟ ಮಾಡುವುದಾಗಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್ ಅವರು ಎಚ್ಚರಿಕೆ ರವಾನಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಒಂದು ರೀತಿ ಅಧಿಕಾರದ ಅಮಲಿನಲ್ಲಿದೆ. ಸರ್ವಾಧಿಕಾರಿಯಂತೆ ವರ್ತಿಸುತ್ತಿದೆ. ನೀರು ಕೊಡಲು ಇವರಿಗೆ ಸಾಧ್ಯವಾಗುತ್ತಿಲ್ಲ. ಬದಲಾಗಿ ಮದ್ಯ ನೀಡಲು ಒಂದು ಸಾವಿರ ಮದ್ಯದಂಗಡಿಗಳನ್ನು ತೆರೆಯಲು ಮುಂದಾಗಿದೆ. ಇದೊಂದು ಅಮಲಿನ ಸರ್ಕಾರ ಎಂದು ಟೀಕಿಸಿದರು.
ಕೋಲಾರ ಜಿಲ್ಲೆಯಲ್ಲಿ ರೈತರನ್ನು ಒಕ್ಕಲೆಬ್ಬಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅಲ್ಲಿ ಸಾವಿರಾರು ಎಕರೆ ಜಮೀನಿನಲ್ಲಿ ಮಾವು ಬೆಳೆಯುತ್ತಿದ್ದಾರೆ. ಶ್ರೀನಿವಾಸಪುರ ತಾಲೂಕಿನ ಹಳ್ಳಿಗಳಲ್ಲಿ ಮಾವು, ರೇಷ್ಮೆ, ಟೊಮೆಟೊ, ತೆಂಗು, ತರಕಾರಿ ಬೆಳೆಯುವ ಒಂದು ಸಾವಿರ ಎಕರೆ ಜಮೀನಿನಲ್ಲಿ ಸಂಪೂರ್ಣ ಬೆಳೆ ನಾಶ ಮಾಡಿದ್ದಾರೆ. 30-40 ವರ್ಷಗಳಿಂದ ಬೆಳೆದು ನಿಂತ ಮಾವಿನ ಮರಗಳನ್ನು ಕಡಿದು ಹಾಕಿದ್ದಾರೆ. ಇದಕ್ಕೆ ಸಿಎಂ ಸಿದ್ದರಾಮಯ್ಯ ರೈತ ವಿರೋಧಿ ಸರ್ಕಾರ ಕಾರಣ ಎಂದು ರವಿಕುಮಾರ್ ಆರೋಪಿಸಿದರು.
ಡಿಎಫ್‍ಒ ಏಳುಕೊಂಡಲ ಅವರು ರೌಡಿಯಂತೆ ವರ್ತಿಸಿ ಜೆಸಿಬಿಯಿಂದ ತರಕಾರಿ, ಮಾವು ಮತ್ತಿತರ ಬೆಳೆ ನಾಶ ಮಾಡಿದ್ದಾರೆ. ರಾತ್ರೋರಾತ್ರಿ ಅರಣ್ಯದ ಸಸಿ ನೆಡಿಸಿದ್ದಾರೆ. ರೈತರ ಬಳಿ 30-40 ವರ್ಷಗಳಿಂದ ಆರ್ಟಿಸಿ ಇದೆ. ಈ ವಿಚಾರದಲ್ಲಿ ರೈತರ ಪರ ನಿಲ್ಲಬೇಕಾದ ಸರ್ಕಾರ ಡಿಎಫ್‍ಒಗೆ ರಕ್ಷಣೆ ಕೊಡುತ್ತಿದೆ. ರೈತರು ಕಣ್ಣೀರು ಹಾಕುತ್ತಿದ್ದಾರೆ. ಹೋರಾಟ ಮಾಡಿದ ರೈತರನ್ನು ಬಂಧಿಸಲಾಗಿದೆ. ಇತ್ತೀಚೆಗೆ ಜನತಾ ದರ್ಶನ ನಡೆದಿತ್ತು. ರೈತರ ಮೇಲಿನ ದೌರ್ಜನ್ಯದ ವಿಷಯ ಹೇಳಲು ರೈತ ವಿರೋಧಿ ಸಚಿವರು ಅವಕಾಶ ಕೊಟ್ಟಿಲ್ಲ. ಈ ವಿಷಯ ಪ್ರಶ್ನಿಸಿದ ಬಿಜೆಪಿ ಸಂಸದ ಮುನಿಸ್ವಾಮಿಯವರನ್ನು ಹೊರಗೆ ಹಾಕಿದ್ದಾರೆ. ಸಚಿವರು, ಶಾಸಕರ ಉಪಸ್ಥಿತಿಯಲ್ಲಿ ಈ ದುರ್ವರ್ತನೆ ನಡೆದಿದೆ ಎಂದು ರವಿಕುಮಾರ್ ದೂರಿದರು.
ಎಸ್‍ಪಿ, ಅಕ್ಷರಶಃ ನಮ್ಮ ಸಂಸದರನ್ನು ಎತ್ತಿಕೊಂಡು ಹೋಗಿ ಕೆಳಕ್ಕೆ ಇಳಿಸಿದ್ದಾರೆ. ಸಂಸದರ ವಿಚಾರದಲ್ಲಿ ಇಂಥ ದೌರ್ಜನ್ಯ ಸರಿಯೇ ಎಂದು ಪ್ರಶ್ನಿಸಿದ ರವಿಕುಮಾರ್, ಕೂಡಲೇ ಎಸ್‍ಪಿ ನಾರಾಯಣ್‍ರನ್ನು ಅಮಾನತು ಮಾಡಿ ಎಂದು ಆಗ್ರಹಿಸಿದರು. ಕರ್ನಾಟಕದಲ್ಲಿ ಮತ್ತು ಕಾವೇರಿ ಕಣಿವೆಯಲ್ಲಿ ನೀರಿಲ್ಲ. ಕಾವೇರಿ ನೀರಿನ ವಿಚಾರದಲ್ಲಿ ಸರ್ಕಾರವು ವಾಸ್ತವ ಸ್ಥಿತಿಯನ್ನು ಪ್ರಾಧಿಕಾರ ಮತ್ತು ಸುಪ್ರೀಂ ಕೋರ್ಟಿಗೆ ತಿಳಿಸಿಲ್ಲ. ಇದರಿಂದ ನಮ್ಮ ರೈತರಿಗೆ ಅನ್ಯಾಯವಾಗಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಕೋಲಾರ ಸಂಸದ ಮುನಿಸ್ವಾಮಿ, ಎಸ್‍ಸಿ ಮೋರ್ಚಾ ರಾಜ್ಯಾಧ್ಯಕ್ಷ ಮತ್ತು ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಇದನ್ನೂ ಓದಿ : ಚಿಕ್ಕಮಗಳೂರಲ್ಲಿ ಅಕ್ರಮ ಭೂಮಿ ಮಂಜೂರು: ನಾಲ್ವರ ವಿರುದ್ಧ ದೂರು ದಾಖಲು.. ಇಬ್ಬರು ಅರೆಸ್ಟ್