ಬೆಂಗಳೂರು: ಎಸ್ಮಾ ಜಾರಿ ಮಾಡಿದರೆ ಅದಕ್ಕೆ ಸ್ಪಷ್ಟಿಕರಣ ಕೊಡಬೇಕು. ಯಾವ ಕಾರಣಕ್ಕೆ ಅನ್ನೋದನ್ನ ತಿಳಿಸಬೇಕು. ನಮ್ಮನ್ನ ಆರೆಸ್ಟ್ ಮಾಡುವುದರಾದರೆ ಮಾಡಲಿ, ನಮ್ಗೆ ಜೈಲಿಗೆ ಹೋಗೋದು ಅಪಮಾನವಲ್ಲ. ನಮ್ಮದು ಯಾವುದೇ ಸಿಡಿ ಕೇಸ್ ಇಲ್ಲ ಅಂತ ನೇರವಾಗಿ ಬಿಜೆಪಿ ಸರ್ಕಾರಕ್ಕೆ ಕೋಡಿಹಳ್ಳಿ ಚಂದ್ರಶೇಖರ್ ಎಚ್ಚರಿಕೆ ನೀಡಿದ್ದಾರೆ.
ಒಬ್ಬರ ಮೇಲೆ ಎಸ್ಮಾ ಜಾರಿ ಆದರೆ 1,30,000 ನೌಕರರ ಕುಟುಂಬಗಳೂ ಜೈಲಿಗೆ ಹೋಗಲು ಸಿದ್ಧವಾಗಿವೆ ಎಂದರು. ಇನ್ನು ಸಾರ್ವಜನಿಕರಿಗೆ ನಮ್ಮಿಂದ ಯಾವುದೇ ತೊಂದರೆ ಆಗ್ತಿಲ್ಲ, ಇದು ಸರ್ಕಾರದ ಸಮಸ್ಯೆ. ನಮ್ಮ ಹೊಟ್ಟೆಪಾಡಿಗೆ ಮುಷ್ಕರ ಮಾಡುತ್ತಿದ್ದೇವೆ. ಸರ್ಕಾರ ಸಾರ್ವಜನಿಕರ ಮುಂದೆ ತಲೆ ತಗ್ಗಿಸಬೇಕು. ತಾತ್ಕಾಲಿಕ ಲಾಭಕ್ಕಾಗಿ ನಮ್ಮ ಎದೆ ಮೇಲೆ ಕಾಲಿಡಬೇಡಿ ಎಂದು ಖಾಸಗಿ ವಾಹನಗಳ ನೌಕರರಿಗೆ ಇದೇ ವೇಳೆ ಮನವಿ ಮಾಡಿದರು.
ಸರ್ಕಾರ ತೆಗೆದುಕೊಂಡಿರುವುದು ತಪ್ಪು ನಿರ್ಧಾರ. ಸಾರಿಗೆ ಸಚಿವರು 2020ರ ಡಿಸೆಂಬರ್ 14ರಂದು ಒಪ್ಪಿಗೆ ಸೂಚಿಸಿ, 6ನೇ ವೇತನ ಆಯೋಗ ಜಾರಿ ಮಾಡುತ್ತೇವೆ ಅಂತ ತೀರ್ಮಾನ ಮಾಡಿದ್ದರು. ನಮ್ಮ ಬೇಡಿಕೆ ಇದಿದ್ದು, ನೆರೆಯ ರಾಜ್ಯದಂತೆ ಸಾರಿಗೆ ನೌಕರರನ್ನ ಸರ್ಕಾರಿ ನೌಕರರನ್ನಾಗಿ ಘೋಷಣೆ ಮಾಡಿದ್ದಾರೆ. ಹಾಗೇ ನಮನ್ನೂ ಮಾಡುವಂತೆ ಮನವಿ ಮಾಡಲಾಗಿತ್ತು ಎಂದರು.
6ನೇ ವೇತನ ಆಯೋಗ ಜಾರಿ ಮಾಡೋವುದಾಗಿ ಸಚಿವರೇ ಘೋಷಣೆ ಮಾಡಿದರು. ಹಣಕಾಸು ಇಲಾಖೆಯೊಂದಿಗೆ ಚರ್ಚಿಸುವುದಕ್ಕೆ ಸಮಯಾವಕಾಶ ಕೇಳಲಾಗಿತ್ತು, ಅದನ್ನೂ ನೀಡಲಾಗಿತ್ತು. ಇದೀಗ ಮೂರು ತಿಂಗಳು ಕಳೆದರೂ ಕೂಡ ಕೊನೆಯ ಘಳಿಗೆಯಲ್ಲಿ ಸಾರಿಗೆ ಸಚಿವರ ಗೈರು ಹಾಜರಾತಿಯಲ್ಲಿ ಈ ರೀತಿ ಸರ್ಕಾರ ಹೇಳೋದು ಯಾಕೆ ಅಂತ ಪ್ರಶ್ನೆ ಮಾಡಿದರು.
ಬಸ್ಸಿಗೆ ಕಲ್ಲು ಹೊಡೆಯುವುದು ಬೇಡ, ಹಾಗೆ ಮಾಡುವುದು ಕಂಡರೆ ಪೊಲೀಸರಿಗೆ ತಿಳಿಸಿ ಅಂತ ನೌಕರರಿಗೆ ತಿಳಿಸಿದರು. ಕೆಲಸಕ್ಕೆ ಗೈರು ಹಾಜರಾಗಿ ರೋಡಿಗಿಳಿಯದಂತೆ ಸೂಚಿಸಿದರು. ಕೊಟ್ಟ ಮಾತಿನಂತೆ ನಡೆದುಕೊಂಡರೆ ಕೆಲಸಕ್ಕೆ ಹಾಜರ್, ಇಲ್ಲವಾದರೆ ಗೈರು ಹಾಜರು ಅಂತ ಕೋಡಿಹಳ್ಳಿ ಚಂದ್ರಶೇಖರ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.