ಬೆಂಗಳೂರು : ಸಾರಿಗೆ ನೌಕರರ ಒಕ್ಕೂಟದಲ್ಲಿ ಬಿರುಕು ಹೆಚ್ಚಾಗ್ತಿದ್ಯಾ? ಇಂತಹದೊಂದು ಅನುಮಾನ ಕಾಡದೇ ಇರದು. ಯಾಕೆಂದರೆ, ಕೂಟದ ಅಧ್ಯಕ್ಷರ ಏಕಪಕ್ಷೀಯ ನಿರ್ಧಾರಕ್ಕೆ ಬೇಸತ್ತು ಪದಾಧಿಕಾರಿಗಳು ಒಬ್ಬೊಬ್ಬರಾಗಿ ಹೊರಗೆ ಬರುತ್ತಿದ್ದಾರೆ. ಕೂಟದ ಅಧ್ಯಕ್ಷ ಚಂದ್ರಶೇಖರ್ ಏಕ ಪಕ್ಷೀಯ ನಿರ್ಧಾರಗಳಿಗೆ ನೌಕರರು, ಪದಾಧಿಕಾರಿಗಳು ಗರಂ ಆಗಿ ಸುದ್ದಿಗೋಷ್ಠಿಯನ್ನೂ ನಡೆಸಿದರು.
ಲಕ್ಷಾಂತರ ನೌಕರರನ್ನ ಹೊಂದಿರುವ 4 ಸಾರಿಗೆ ನಿಗಮಗಳು ಒಗ್ಗಟಾಗಿ ಸೇರಿ ಬರೋಬ್ಬರಿ 15 ದಿನಗಳ ಕಾಲ ಮುಷ್ಕರವನ್ನೂ ನಡೆಸಿದರು. ಇದೀಗ ಅದೇ ಒಗ್ಗಟಿನಲ್ಲಿ ಅಪಸ್ವರ ಕೇಳಿ ಬಂದಿದೆ. ಮುಷ್ಕರ ವಿಫಲವಾಗಿದ್ದೆ ಸಾರಿಗೆ ಮುಖಂಡರಿಂದ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.
ಇಂತಹದೊಂದು ಆರೋಪ ಮಾಡಿರುವುದು ಅವರದ್ದೇ ಕೂಟದಲ್ಲಿದ್ದ ಸದಸ್ಯರುಗಳು. ಸದ್ಯ ಕೂಟದಿಂದ ಆಚೆ ಬಂದವರು ಮತ್ತೊಂದು ಒಕ್ಕೂಟ ರಚನೆ ಮಾಡಿದ್ದಾರೆ. ಮುಷ್ಕರ ಸಮಯದಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಅವ್ರ ತೀರ್ಮಾನವೇ ಕೊನೆಯ ತೀರ್ಮಾನ ಎಂದವರು, ಇದೀಗ ಅವರ ವಿರುದ್ಧವೇ ತಿರುಗಿ ಬಿದ್ದಿದಾರೆ. ನಾವು ಬೀದಿಪಾಲು ಆಗಲು ಅವರೇ ಕಾರಣ ಅಂತಾ ಆರೋಪಿಸಿದ್ದಾರೆ.
ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ತಿದ್ದ ಅಧ್ಯಕ್ಷ ಚಂದ್ರಶೇಖರ್ ಹಾಗೂ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರು, ಸಚಿವರು, ಅಧಿಕಾರಿಗಳ ಜೊತೆ ಮಾತನಾಡೋಣ ಎಂದಾಗ, ತಿರಸ್ಕಾರ ಮಾಡುತ್ತಿದ್ದರು. ಹೀಗಾಗಿ, ಸಾರಿಗೆ ಮುಷ್ಕರ ವಿಫಲವಾಗಲು ಇವರಿಬ್ಬರೇ ನೇರ ಹೊಣೆ ಎಂದು ದೂರಿದ್ದಾರೆ.
ಇದನ್ನೂ ಓದಿ : ಕಾವೇರಿ ಹೋರಾಟಗಾರ, ಸಂಸದ ಜಿ.ಮಾದೇಗೌಡ ಕೊನೆಯುಸಿರು
ಈ ಕುರಿತು ಪ್ರತಿಕ್ರಿಯಿಸಿರುವ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ನೌಕರರ ಸಂಘಟನೆ ಕೂಟವಿದ್ದು, ಎಲ್ಲರ ಅಭಿಪ್ರಾಯ ಕ್ರೂಢೀಕರಿಸಿ ತೀರ್ಮಾನ ಮಾಡಲಾಗಿದೆ. ಈಗ ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದೆ. ಮುಷ್ಕರದಲ್ಲಿ ಸಕ್ರಿಯವಾಗಿ ಭಾಗಿಯಾಗಿ ಕೆಲಸ ಮಾಡಿದವರು ಈ ಸಂದರ್ಭದಲ್ಲಿ ಯಾವ ಕಾರಣಕ್ಕೆ ಇಂತಹ ಆರೋಪ ಮಾಡುತ್ತಿದ್ದಾರೆಯೋ ಗೊತ್ತಿಲ್ಲ.
ಸರ್ಕಾರ 6ನೇ ವೇತನ ಜಾರಿ ಮಾಡ್ತೀವಿ ಅಂತಾ ಹೇಳಿದ್ದೇ ವಿನಃ ಶೇ.18%ರಷ್ಟು ವೇತನ ಹೆಚ್ಚಳ ಮಾಡೋ ಬಗ್ಗೆ ನಮ್ಮ ಜೊತೆಗೆ ಎಲ್ಲೂ ಮಾತಾಡಿಲ್ಲ. ಇದನ್ನ ವಿರೋಧ ಮಾಡಿದ್ದೀವಿ ಅಂದರೆ, ಈ ಆರೋಪ ಸರಿಯಿಲ್ಲ. ನಮ್ಮ ಕೂಟದಿಂದ ಆ ಸದಸ್ಯರು ಸ್ವಾತಂತ್ರ್ಯರಾಗಿದ್ದಾರೆ, ನೌಕರರಿಗೆ ಒಳ್ಳೆಯದು ಮಾಡಲಿ ಅಂತಾ ತಿಳಿಸಿದರು.
ಮುಷ್ಕರ ವಿಚಾರ : ಜುಲೈ 21ರಂದು ರೈತರ ಹುತಾತ್ಮರ ದಿನವಿದೆ. 22ರಂದು ರೈತರ ಸತ್ಯಾಗ್ರಹ ದೆಹಲಿಯಲ್ಲಿ ಶುರುವಾಗಲಿದೆ. ಈ ಎರಡು ದಿನ ಮುಗಿದ ಬಳಿಕ ಸಾರಿಗೆ ನೌಕರರ ಕುಟುಂಬ ಸದಸ್ಯರು ಸೇರಿ, 6ನೇ ವೇತನ ಆಯೋಗ ಹಾಗೂ ಇತರೆ ಬೇಡಿಕೆ ಈಡೇರಿಕೆಗೆ ಮುಷ್ಕರ ನಡೆಸುವ ಸಂಬಂಧ ಸಭೆ ನಡೆಸಲಾಗುವುದು ಅಂತಾ ಸ್ಪಷ್ಟಪಡಿಸಿದರು.