ಬೆಂಗಳೂರು: ಕುಮಾರಸ್ವಾಮಿ ಮತ್ತು ನಿಖಿಲ್ ಸಂಭಾಷಣೆಯಾದ 'ನಿಖಿಲ್ ಎಲ್ಲಿದ್ದೀಯಪ್ಪಾ' ಡೈಲಾಗ್ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗಿತ್ತು. ಇದೀಗ ಗೂಗಲ್ ಮ್ಯಾಪ್ನಲ್ಲೂ ನಿಖಿಲ್ ಎಲ್ಲಿದ್ದೀಯಪ್ಪಾ ಎನ್ನುವುದು ಸಖತ್ ವೈರಲ್ ಆಗುತ್ತಿದೆ.
ನಿಖಿಲ್ ಕುಮಾರಸ್ವಾಮಿ ಅಭಿನಯದ ಮೊದಲ ಚಿತ್ರ ‘ಜಾಗ್ವಾರ್’ನ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಸಿಎಂ ಕುಮಾರಸ್ವಾಮಿ ನಿಖಿಲ್ ಎಲ್ಲಿದ್ದೀಯಪ್ಪಾ... ಎಂದು ವೇದಿಕೆ ಮೇಲಿಂದ ಮಗನನ್ನು ಕೂಗಿ ಕರೆದಿದ್ದರು. ಜನರ ಮಧ್ಯ ನಿಂತಿದ್ದ ನಿಖಿಲ್, ನಿಮ್ಮನ್ನು ಮತ್ತು ತಾತನನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ಜನಗಳ ಮಧ್ಯೆ ಇದ್ದೀನಪ್ಪ ಎಂದು ಹೇಳಿದ್ದರು. ಈ ಸಂಭಾಷಣೆಯನ್ನು ಯಾರು ಸಹ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಯಾವಾಗ ಮಂಡ್ಯ ಕ್ಷೇತ್ರದಿಂದ ಕುಮಾರಸ್ವಾಮಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಸಿದ್ದತೆ ನಡೆಸಿದ್ರೋ ಆ ಕ್ಷಣವೇ ಅಪ್ಪ-ಮಗನ ಈ ಡೈಲಾಗ್ ಜಾಲತಾಣದಲ್ಲಿ ವಿವಿಧ ಶೈಲಿಯಲ್ಲಿ ಸಖತ್ ಟ್ರೋಲ್ ಆಯಿತು.
ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಇದೇ ಡೈಲಾಗ್ ಇಟ್ಕೊಂಡು ನಿಖಿಲ್ರನ್ನು ವ್ಯಂಗ್ಯವಾಗಿ ಟ್ರೋಲ್ ಮಾಡಿದರು. ಅಪ್ಪ-ಮಗನ ಸಂಭಾಷಣೆಯ ಆಡಿಯೋ, ವಿಡಿಯೋಗಳನ್ನು ಎಡಿಟ್ ಮಾಡಿ ಟ್ರೋಲ್ ಮಾಡಿದ್ದರು. ಇದೀಗ ಗೂಗಲ್ ಮ್ಯಾಪ್ನಲ್ಲಿ ನಿಖಿಲ್ ಎಲ್ಲಿದ್ದೀಯಪ್ಪಾ ಎನ್ನುವ ಸ್ಥಳವನ್ನೇ ಗುರುತಿಸಿ, ರೂಟ್ ಮ್ಯಾಪ್ ಹಾಕಿ ಬಿಟ್ಟಿದ್ದಾರೆ. ಗೂಗಲ್ ಮ್ಯಾಪ್ನಲ್ಲಿ, ನಿಖಿಲ್ ಎಲ್ಲಿದ್ದೀಯಪ್ಪಾ ಎಂದು ಟೈಪ್ ಮಾಡಿದರೆ ಸಾಕು, ಅದು ನೇರವಾಗಿ ನೆಲಮಂಗಲ - ಚಿಕ್ಕಬಳ್ಳಾಪುರ ಮುಖ್ಯ ರಸ್ತೆಯ ದೊಡ್ಡಬಳ್ಳಾಪುರದಲ್ಲಿ ಆ ಸ್ಥಳ ಕಾಣಿಸುತ್ತದೆ.
ನಿಖಿಲ್ ಎರಡು ಸಿನಿಮಾ ಮಾಡಿ ಹೆಸರು ಮಾಡಿದ್ರೋ ಇಲ್ವೋ, ಆದರೆ ಕುಮಾರಸ್ವಾಮಿ, ನಿಖಿಲ್ ಅವರ ಸಂಭಾಷಣೆಯಂತೂ ಜಾಲತಾಣದಲ್ಲಿ ಒಂದಲ್ಲ ಒಂದು ರೂಪದಲ್ಲಿ ಸಖತ್ ಟ್ರೋಲ್ ಆಗುತ್ತಿದೆ.