ಬೆಂಗಳೂರು: ನಗರದಲ್ಲಿ ಬ್ಲ್ಯಾಕ್ ಫಂಗಸ್ಗೆ 104 ಮಂದಿ ಬಲಿಯಾಗಿದ್ದಾರೆ. ಕಲಬುರಗಿಯಲ್ಲಿ 23, ದಕ್ಷಿಣಕನ್ನಡದಲ್ಲಿ 20 ಮಂದಿ ಕಪ್ಪು ಶಿಲೀಂಧ್ರದಿಂದ ಮೃತಪಟ್ಟಿದ್ದಾರೆ. ಸೋಂಕು ಪತ್ತೆಯಾಗುತ್ತಿರುವ ಪೈಕಿ ಶೇಕಡಾ 8.6 ರಷ್ಟು ಮಂದಿ ಬ್ಲ್ಯಾಕ್ ಫಂಗಸ್ನಿಂದ ಮರಣ ಹೊಂದುತ್ತಿದ್ದಾರೆ.
ಈ ಬಗ್ಗೆ ಮಾತನಾಡಿರುವ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ, ಕೋವಿಡ್ ಕಡಿಮೆಯಾಗಿದೆ. ಇದರ ಹೊರತಾಗಿ ಹುಟ್ಟಿಕೊಳ್ಳುವಂಥ ರೋಗಗಳನ್ನೂ ಗಂಭೀರವಾಗಿ ಪರಿಗಣಿಸಲಾಗುತ್ತಿದೆ. ತಜ್ಞರ ಸಲಹೆ ಪಡೆದು ರೋಗ ನಿಯಂತ್ರಣಕ್ಕೆ ಬಿಬಿಎಂಪಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಹೇಳಿದ್ದಾರೆ.
ಈವರೆಗೆ 3,591 ಮಂದಿಯಲ್ಲಿ ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡಿದೆ. ಬೆಂಗಳೂರಿನಲ್ಲಿ 1109, ಧಾರವಾಡದಲ್ಲಿ 279, ವಿಜಯಪುರದಲ್ಲಿ 208 ಬ್ಲ್ಯಾಕ್ ಫಂಗಸ್ ಕೇಸ್ ಪತ್ತೆಯಾಗಿದೆ. ಇದು ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿಕೊಂಡರೆ ಅತಿ ಹೆಚ್ಚು ಬ್ಲ್ಯಾಕ್ ಫಂಗಸ್ ಪ್ರಕರಣಗಳಿರುವ ಜಿಲ್ಲೆಗಳಾಗಿವೆ. ಕೊರೊನಾದಿಂದ ಗುಣಮುಖರಾದ ಬಳಿಕ ಕಾಣಿಸಿಕೊಳ್ಳುವ ರೋಗ ಇದಾಗಿದ್ದು, ಇತ್ತೀಚೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪತ್ತೆಯಾಗುತ್ತಿದೆ. ಕೋಮಾರ್ಬಿಟ್ ರೋಗಿಗಳಲ್ಲಿ ಹೆಚ್ಚಾಗಿ ಕಪ್ಪು ಶಿಲೀಂಧ್ರ ಪತ್ತೆಯಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಅನ್ಲಾಕ್ ನಂತರ ಕೋವಿಡ್ ಕೇಸ್ಗಳಲ್ಲಿ ಯಾವ ರೀತಿ ಏರು ಪೇರಾಗುತ್ತಿದೆ ಅನ್ನೋದನ್ನು ಪರಿಶೀಲಿಸಲಾಗುತ್ತಿದೆ. ಸದ್ಯ ಪ್ರಕರಣಗಳ ಸಂಖ್ಯೆ ಒಂದೇ ರೀತಿಯಾಗಿದ್ದು, ಮುಂದಿನ ಅನ್ಲಾಕ್ ಬಗ್ಗೆ ಚಿಂತನೆ ನಡೆಸಲಾಗಿದೆ ಸಿನಿಮಾ ಥಿಯೇಟರ್ಗಳನ್ನು ತೆರೆಯುವ ಬಗ್ಗೆ ಸಿಎಂ ಮಟ್ಟದಲ್ಲಿ ಚರ್ಚೆಯಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ:ಮಂಡ್ಯದ ಬೇಬಿ ಬೆಟ್ಟದಲ್ಲಿನ ಗಣಿಗಾರಿಕೆ ಶಾಶ್ವತ ನಿಷೇಧಕ್ಕೆ ನಿರ್ಧಾರ: ಸಚಿವ ನಾರಾಯಣಗೌಡ
ಧೂಳು ಕಡಿಮೆ ಮಾಡುವ ವಾಹನ ಖರೀದಿಯ ಬಗ್ಗೆ ಮಾತನಾಡಿದ ಅವರು, ವಿಷಯ ಪರಿಶೀಲನೆ ಮಾಡಲಾಗುವುದು. ಅವಶ್ಯಕ್ಕಿಂತ ಹೆಚ್ಚು ವಾಹನ ಖರೀದಿ ಮಾಡುವುದಿಲ್ಲ. ಪಾಲಿಕೆಯಲ್ಲಿ ದುಂದುವೆಚ್ಚ ಆಗುತ್ತಿದ್ದರೆ ಸರಿಪಡಿಸಲಾಗುವುದು ಎಂದರು.