ಬೆಂಗಳೂರು: ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳವು (ಕೆಎಂಎಫ್) ನಂದಿನಿ ಹಾಲು ಮತ್ತು ಮೊಸರಿನ ಬೆಲೆ ಹೆಚ್ಚಳ ಮಾಡಲು ಸಜ್ಜಾಗಿದೆ. ಇದರಿಂದ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟಲಿದೆ. ಈ ಕುರಿತು ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದು, ನವೆಂಬರ್ 20 ರಂದು ಸಭೆ ನಡೆಸಿ ಅಂತಿಮ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.
ಟೋನ್ಡ್ ಹಾಲಿನ ದರ ಪ್ರತಿ ಲೀಟರ್ಗೆ 37 ರಿಂದ 40 ರೂ, ಸ್ಪೆಷಲ್ ಹಾಲಿನ ದರ 43 ರಿಂದ 46 ರೂಪಾಯಿ, ಶುಭಂ ಹಾಲಿನ ದರ 43 ರಿಂದ 46 ರೂ, ಸಮೃದ್ಧಿ ಹಾಲಿನ ದರ 48 ರಿಂದ 51 ರೂ ಹಾಗೂ ಮೊಸರಿನ ದರ 45 ರಿಂದ 48 ರೂಪಾಯಿಗೆ ಹೆಚ್ಚಳ ಮಾಡಲಾಗ್ತಿದೆ ಎಂದು ಹೇಳಲಾಗಿತ್ತು.
(ಓದಿ: ಹಬ್ಬಗಳ ಸೀಸನ್ನಲ್ಲೇ ಗ್ರಾಹಕರಿಗೆ ಶಾಕ್.. ಅಮುಲ್, ಮದರ್ ಡೈರಿ ಹಾಲಿನ ದರ ಏರಿಕೆ)
ಸಿಎಂ ಬೊಮ್ಮಾಯಿ ಹೇಳಿಕೆ: ನಂದಿನಿ ಹಾಲು ಮತ್ತು ಮೊಸರಿನ ಬೆಲೆ ಹೆಚ್ಚಳ ಬಗ್ಗೆ ಹಾಲು ಉತ್ಪಾದಕ ಮಹಾಮಂಡಳಿಯೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಕಲಬುರಗಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾಲಿನ ಬೆಲೆ ಏರಿಕೆ ಬಗ್ಗೆ ಕಳೆದ ಹಲವಾರು ತಿಂಗಳಿಂದ ಚರ್ಚೆ ಪ್ರಗತಿಯಲ್ಲಿದೆ. ನಾನು ನ.20 ರಂದು ಕೆಎಂಎಫ್ ಅಧ್ಯಕ್ಷರನ್ನು ಹಾಗೂ ಅಧಿಕಾರಿಗಳನ್ನು ಕರೆದು ಸಭೆ ನಡೆಸಿ, ರೈತರಿಗೆ ಅನುಕೂಲವಾಗುವಂತೆ, ಗ್ರಾಹಕರಿಗೆ ಹೊರೆಯಾಗದಂತೆ ಅಂತಿಮ ನಿರ್ಧಾರಕ್ಕೆ ಬರುವುದಾಗಿ ತಿಳಿಸಿದರು.