ಬೆಂಗಳೂರು: ಮಾಜಿ ಸಚಿವ ಕೆ.ಜೆ. ಜಾರ್ಜ್ ಅವರು ಬೆಂಗಳೂರು ಮತ್ತು ವಿದೇಶದಲ್ಲಿ ತಮ್ಮ ಮಕ್ಕಳ ಹೆಸರಲ್ಲಿ ಅಘೋಷಿತ ಆಸ್ತಿ ಹೊಂದಿದ್ದಾರೆ ಎಂದು ಲಂಚಮುಕ್ತ ಕರ್ನಾಟಕ ರಾಜ್ಯ ಸಮಿತಿ ಅಧ್ಯಕ್ಷ ರವಿಕೃಷ್ಣ ರೆಡ್ಡಿ ಇಡಿಗೆ ದೂರು ನೀಡಿದ್ದಾರೆ. ಈ ಸಂಬಂಧ ತನಿಖೆ ನಡೆಸಬೇಕೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇದೇ ವಿಚಾರವಾಗಿ ಮಾಜಿ ಸಚಿವ ಕೆ.ಜೆ. ಜಾರ್ಜ್ ಸೋಷಿಯಲ್ ಮೀಡಿಯಾದಲ್ಲಿ ಸ್ಪಷ್ಟನೆ ನಿಡಿದ್ದಾರೆ. ರವಿಕೃಷ್ಣ ರೆಡ್ಡಿ ನನ್ನ ವಿರುದ್ಧ ನೀಡಿರುವ ದೂರಿನ ಸಂಬಂಧ ಸಾಕಷ್ಟು ಸುದ್ದಿಯಾಗುತ್ತಿದೆ. ಇದಕ್ಕೆ ನಾನು ಬಲವಾದ ಆಕ್ಷೇಪಣೆ ಸಲ್ಲಿಸುವೆ. ರವಿಕೃಷ್ಣ ಆರೋಪ ಆಧಾರ ರಹಿತ. ನಾನು ಭಾರತದ ಸಂವಿಧಾನ ಭೂ ಕಾನೂನನ್ನು ಗೌರವಿಸುತ್ತೇನೆ. ಅಲ್ಲದೆ ತನಿಖಾ ಸಂಸ್ಥೆಗಳಲ್ಲಿ ಮತ್ತು ನ್ಯಾಯಾಂಗದಲ್ಲಿ ಅತ್ಯಂತ ಗೌರವವಿದೆ ಎಂದಿದ್ದಾರೆ.
ಇಡಿ ಅಧಿಕಾರಿಗಳಿಗೆ ಯಾವುದಾದರೂ ಪ್ರಶ್ನೆಗಳಿದ್ದರೆ ನನ್ನನ್ನು ಕೇಳಲಿ. ಸಂಪೂರ್ಣ ಸಹಕರಿಸಲು ಸಿದ್ಧನಿದ್ದೇನೆ. ಯಾವುದಾದರೂ ದೂರು ಬಂದಾಗ ಅದು ನಿಜವೇ ಎಂದು ನಿರ್ಧರಿಸುವುದು ತನಿಖಾ ಸಂಸ್ಥೆಗೆ ಬಿಟ್ಟಿದ್ದು. ಆದರೆ, ತನಿಖಾ ಸಂಸ್ಥೆಯನ್ನ ವೈಯುಕ್ತಿಕ ಹಾಗೂ ರಾಜಕೀಯ ಲಾಭಕ್ಕೆ ಬಳಸಿದ್ದು ದುರಾದೃಷ್ಟಕರ. ತನಿಖಾ ಸಂಸ್ಥೆ ಮತ್ತು ಸಾಂವಿಧಾನಿಕ ಸಂಸ್ಥೆಯ ವಿರುದ್ಧ ಮಾನಹಾನಿ ಹೇಳಿಕೆಗಳನ್ನ ನೀಡಬಾರದು. ರಾಜಕೀಯದಲ್ಲಿ ಪ್ರತಿಯೊಬ್ಬರೂ ಹಣವನ್ನು ಸಂಪಾದಿಸುತ್ತಾರೆಂಬ ತಪ್ಪು ಕಲ್ಪನೆ ಸೃಷ್ಟಿಸಲಾಗಿದೆ ಎಂದು ಕೆ ಜೆ ಜಾರ್ಜ್ ಬರೆದುಕೊಂಡಿದ್ದಾರೆ.
ಈ ಬಗ್ಗೆ ನನ್ನ ನಿಲುವುನ್ನ ಸ್ಪಷ್ಟಪಡಿಸುತ್ತೇನೆ. ಸುಳ್ಳು ಆರೋಪಗಳನ್ನು ರೂಪಿಸುವುದರ ಪರಿಣಾಮಗಳು ಅಹಿತಕರವಾಗಿರುತ್ತವೆ. ನಾನು ಕಾನೂನು ಮತ್ತು ಭಾರತದ ಸಂವಿಧಾನವನ್ನು ನಂಬಿರುವ ವ್ಯಕ್ತಿ. ಈ ದುರುದ್ದೇಶಪೂರಿತ ವಿಚಿತ್ರವಾದ ಅಪಪ್ರಚಾರದ ಆರೋಪಗಳಿಗೆ ಕಾನೂನಿನ ಅಡಿಯಲ್ಲಿ ಪರಿಹಾರ ತೆಗೆದುಕೊಳ್ಳುತ್ತೇನೆ ಎಂದು ಜಾರ್ಜ್ ಹೇಳಿದ್ದಾರೆ.