ಬೆಂಗಳೂರು: ಮಾಜಿ ಸಚಿವ ಕೆ.ಜೆ.ಜಾರ್ಜ್ ಅವರು ಲಂಚಮುಕ್ತ ಕರ್ನಾಟಕ ರಾಷ್ಟ್ರ ಸಮಿತಿ ಅಧ್ಯಕ್ಷ ರವಿಕೃಷ್ಣ ರೆಡ್ಡಿ ಹಾಗೂ ಸಾಮಾಜಿಕ ಕಾರ್ಯಕರ್ತ ಎನ್.ಆರ್.ರಮೇಶ್ ವಿರುದ್ಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.
ರವಿಕೃಷ್ಣ ರೆಡ್ಡಿ ಹಾಗೂ ಎನ್.ಆರ್.ರಮೇಶ್ ಅವರು ಈ ಹಿಂದೆ ಹಾಗೂ ಇತ್ತೀಚೆಗೆ ತಮ್ಮ ವಿರುದ್ಧ ಆಧಾರ ರಹಿತ, ಅಸಮಂಜಸ ಆರೋಪ ಮಾಡಿದ್ದಾರೆ. ಹೀಗಾಗಿ ನನಗೆ ಮಾನನಷ್ಟ ಆಗಿದೆ ಎಂದು ಕೆ.ಜೆ.ಜಾರ್ಜ್ ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾಗಿ ಮೊಕದ್ದಮೆ ದಾಖಲು ಮಾಡಿದ್ದಾರೆ.
ಇತ್ತೀಚೆಗೆ ಲಂಚಮುಕ್ತ ಕರ್ನಾಟಕ ರಾಷ್ರಸಮಿತಿ ಅಧ್ಯಕ್ಷ ರವಿಕೃಷ್ಣ ರೆಡ್ಡಿ, ಜಾರ್ಜ್ ವಿರುದ್ಧ ಇಡಿಗೆ ದೂರು ನೀಡಿದ್ದರು. ದೂರಿನಲ್ಲಿ ಜಾರ್ಜ್ ತಮ್ಮ ಪತ್ನಿ, ಮಗ ಹಾಗೂ ಮಗಳ ಹೆಸರಲ್ಲಿ ವಿದೇಶದಲ್ಲಿ ಬೇನಾಮಿ ಹೆಸರಲ್ಲಿ ಕಂಪನಿಗೆ ಬಂಡವಾಳ ಹೂಡಿದ್ದಾರೆ. ಹೀಗಾಗಿ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದರು. ಹಾಗೆಯೇ ಸಾಮಾಜಿಕ ಕಾರ್ಯಕರ್ತ ಎನ್.ಆರ್.ರಮೇಶ್ ಕೂಡ ಜಾರ್ಜ್ ಅವರು ಬಿಬಿಎಂಪಿ ಜಾಗ ಹಾಗೂ ಸರ್ಕಾರದ ಜಾಗವನ್ನ ಕಬಳಿಸಿದ್ದಾರೆಂದು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದರು. ಇದೀಗ ಈ ಇಬ್ಬರ ವಿರುದ್ಧ ಜಾರ್ಜ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.
ಅರ್ಜಿ ಸಲ್ಲಿಕೆ ಮಾಡಿದ ಬಳಿಕ ಮಾತನಾಡಿದ ಜಾರ್ಜ್, ಸೆಕ್ಷನ್ 499, ಸೆಕ್ಷನ್ 500ರಡಿ ಕ್ರಿಮಿನಲ್ ಪ್ರಕರಣ ದಾಖಲು ಮಾಡಿದ್ದೇವೆ. ತನ್ನ ವಿರುದ್ಧ ಆಧಾರ ರಹಿತ ಆರೋಪ ಮಾಡಿದ್ದಾರೆ. ಇಬ್ಬರೂ ಮಾಡಿರೋದು ಸತ್ಯಕ್ಕೆ ದೂರವಾದ ಆರೋಪವಾಗಿದ್ದು, ಇಂದು ಮಾನನಷ್ಟ ಮೊಕದ್ದಮೆ ದಾಖಲು ಮಾಡಿದ್ದೇನೆ ಎಂದು ತಿಳಿಸಿದ್ದಾರೆ.