ಬೆಂಗಳೂರು: ಮನೆಯ ಟೆರೇಸ್ನಲ್ಲಿ ಗಾಳಿಪಟ ಹಾರಿಸುವಾಗ ಹೈಟೆನ್ಶನ್ ತಂತಿ ತಗುಲಿ ಬಾಲಕ ಸಾವನ್ನಪ್ಪಿರುವ ಘಟನೆ ಆರ್.ಟಿ.ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಚಾಮುಂಡಿ ನಗರದ ವಿಶ್ವೇಶ್ವರಯ್ಯ ಲೇಔಟ್‌ನಲ್ಲಿ ಕಳೆದ ಸೋಮವಾರ ಸಂಭವಿಸಿದೆ. 12 ವರ್ಷದ ಅಬೂಬಕರ್ ಮೃತಪಟ್ಟಿದ್ದಾನೆ.
ಗಾಳಿಪಟ ಹಾರಿಸುವಾಗ ಪಕ್ಕದಲ್ಲಿ ಹೈಟೆಕ್ಷನ್ ಕಂಬದ ತಂತಿಯಿಂದ ವಿದ್ಯುತ್ ಪ್ರವಹಿಸಿ ಗಾಯಗೊಂಡಿದ್ದ. ತಕ್ಷಣ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗಲೇ ಬಾಲಕ ಸಾವನ್ನಪ್ಪಿದ್ದಾನೆ. ಈ ಸಂಬಂಧ ಬಾಲಕನ ಮನೆಯವರು ಪೊಲೀಸರಿಗೆ ದೂರು ನೀಡಿಲ್ಲ. ದೂರು ಬಂದರೆ ಪ್ರಕರಣ ದಾಖಲಿಸಿಕೊಂಡು ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಆರ್.ಟಿ.ನಗರ ಪೊಲೀಸರು ತಿಳಿಸಿದ್ದರು. ಇದೀಗ ಬಾಲಕನ ತಂದೆ ದೂರು ನೀಡಿದ್ದಾರೆ.
ದೂರು ದಾಖಲು: ಘಟನೆಗೆ ಸಂಬಂಧಿಸಿದಂತೆ ಆರ್ ಟಿ ನಗರ ಪೊಲೀಸ್ ಠಾಣೆಯಲ್ಲಿ ಮೃತ ಬಾಲಕನ ತಂದೆ ದೂರು ನೀಡಿದ್ದಾರೆ. ಇವರು ನೀಡಿದ ದೂರಿನ ಮೇರೆಗೆ ಪೊಲೀಸರು ಬಿಬಿಎಂಪಿ, ಬೆಸ್ಕಾಂ ಮತ್ತು ಕೆಪಿಟಿಸಿಎಲ್ ಅಧಿಕಾರಿಗಳ ವಿರುದ್ಧ ಸೆಕ್ಷನ್ 304A ಅಡಿ ಎಫ್ಐಆರ್ ದಾಖಲು ಮಾಡಿದ್ದಾರೆ.
ಕಳೆದ ವರ್ಷ ಡಿಸೆಂಬರ್ 1ರಂದು ಮಹಾಲಕ್ಷ್ಮೀ ಲೇಔಟ್‌ನಲ್ಲಿ ಹೈಟೆನ್ಶನ್ ಲೈನ್ ತಗುಲಿ ಸುಪ್ರೀತ್ ಹಾಗೂ ಚಂದು ಸಾವನ್ನಪ್ಪಿದ್ದರು. ಪಾರಿವಾಳ ಹಿಡಿಯಲು ಹೋಗಿ ಇಬ್ಬರಿಗೆ ವಿದ್ಯುತ್ ತಂತಿ ತಗುಲಿತ್ತು. ಪಾರಿವಾಳ ಹಿಡಿಯಲು ಸ್ನೇಹಿತನ ಜೊತೆ ಹೋಗಿದ್ದಾಗ ವೈರ್ ಸ್ಫರ್ಶವಾಗಿದೆ. ಈ ವೇಳೆ ಇಬ್ಬರು ಬಾಲಕರಿಗೆ ತೀವ್ರ ಸುಟ್ಟ ಗಾಯಗಳಾಗಿದ್ದವು. ತೀರ ಕೆಳಕ್ಕಿರುವ ಹೈಟೆನ್ಶನ್ ಲೈನ್ ಬಗ್ಗೆ ಬೆಸ್ಕಾಂ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದರು.
ಬಿಎಂಟಿಸಿ ಬಸ್ ಅಡಿ ಸಿಲುಕಿದ ಬೈಕ್ ಸವಾರ: ಬಿಎಂಟಿಸಿ ಬಸ್ ಅಪಘಾತದಿಂದ ಸಾವು ಎನ್ನುವ ಸುದ್ದಿಗಳು ಹೆಚ್ಚಾಗುತ್ತಿವೆ. ಇದೀಗ ಬೆಂಗಳೂರಿನ ಸುಮನಹಳ್ಳಿ ಬ್ರಿಡ್ಜ್ ಬಳಿ ಬಿಎಂಟಿಸಿ ಬಸ್ ಅಡಿಗೆ ಸಿಲುಕಿ ಬೈಕ್ ಸವಾರನೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಬ್ರಿಡ್ಜ್ ಬಳಿ ಹೋಗುತ್ತಿದ್ದ ವೇಳೆ ಬೈಕ್ ಮೇಲೆ ಬಿಎಂಟಿಸಿ ಬಸ್ ಹರಿದು, ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದರು. ಗಾಯಾಳುವನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಸಾಗಿಸಲಾಗಿದೆ. ಘಟನೆ ನಡೆದ ಸ್ಥಳಕ್ಕೆ ತಕ್ಷಣವೇ ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸರು ದೌಡಾಯಿಸಿದ್ದು, ಬಿಎಂಟಿಸಿ ಬಸ್ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.
ಈ ಹಿಂದೆಯೂ ಬಿಎಂಟಿಸಿ ಬಸ್ಗೆ ಬೈಕ್ ಡಿಕ್ಕಿ ಹೊಡೆದು ಪ್ರಮೋದ್ ಎನ್ನುವ ಬೈಕ್ ಸವಾರನೊಬ್ಬ ಸಾವನ್ನಪ್ಪಿದ್ದ ಘಟನೆ ಸುಮನಹಳ್ಳಿ ಬಸ್ ಡಿಪೋ ಬಳಿ ನಡೆದಿತ್ತು. ಸುಮನಹಳ್ಳಿಯಿಂದ ಲಗ್ಗೆರೆ ಮಾರ್ಗವಾಗಿ ಸಾಗುತ್ತಿದ್ದ ಬೈಕ್ ಚಾಲಕ ಪ್ರಮೋದ್ ಹಂಪ್ ಇದ್ದ ಕಾರಣ ನಿಧಾನವಾಗಿ ಚಲಿಸುತ್ತಿದ್ದರು. ಆದರೆ ಹಿಂದೆಯಿಂದ ಬಂದ ಬಿಎಂಟಿಸಿ ಬಸ್ ಬೈಕ್ಗೆ ಗುದ್ದಿ, ಬೈಕ್ ಹಾಗೂ ಸವಾರನ ಮೇಲೆಯೇ ಸಂಚರಿಸಿತ್ತು.
ಮತ್ತೊಂದು ಬಿಎಂಟಿಸಿ ಅಪಘಾತದಲ್ಲಿ 16 ವರ್ಷದ ಬಾಲಾಕಿ ಸಾವನ್ನಪ್ಪಿದ್ದ ಘಟನೆ ಕೆ ಆರ್ ಪುರಂ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು. ಬೇಗವಾಗಿ ಸಾಗುತ್ತಿದ್ದ ಬಿಎಂಟಿಸಿ ಬಸ್ ಮುಂದೆ ಹೋಗುತ್ತಿದ್ದ ಸ್ಕೂಟರ್ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ನಲ್ಲಿ ಹಿಂಬದಿ ಕುಳಿತಿದ್ದ 16 ವರ್ಷದ ಲಾವ್ಯಾಶ್ರೀ ಸಾವನ್ನಪ್ಪಿದ್ದರು. ಅಪಘಾತ ಎಸಗಿದ್ದ ಬಿಎಂಟಿಸಿ ಬಸ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದನು.
ಇದನ್ನೂ ಓದಿ: ಪಾರಿವಾಳ ಹಿಡಿಯಲು ಹೋಗಿ ಹೈಟೆನ್ಶನ್ ವೈರ್ ಸ್ಪರ್ಶ; ಇಬ್ಬರು ಬಾಲಕರು ಗಂಭೀರ