ಬೆಂಗಳೂರು: ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಅಡಿಯಲ್ಲಿ ರಾಜ್ಯದ 1 ಲಕ್ಷ ರೈತರಿಗೆ ವರ್ಷಕ್ಕೆ ₹ 6 ಸಾವಿರ ನೀಡಲಾಗುತ್ತದೆ. ಮೊದಲ ಹಂತದಲ್ಲಿ ₹ 2 ಸಾವಿರವನ್ನು ಅವರ ಖಾತೆಗೆ ಹಾಕಲಾಗುವುದು ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಇಲ್ಲಿನ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಯೋಜನೆ ಜತೆಗೆ ರಾಜ್ಯ ಸರ್ಕಾರವೂ ರೈತರಿಗೆ ಎರಡು ಹಂತದಲ್ಲಿ ₹ 4 ಸಾವಿರ, ಒಟ್ಟು ₹ 10 ಸಾವಿರ ಹಾಕಲಾಗುವುದು. ದೇಶದಲ್ಲಿಯೇ ಮೊದಲ ಬಾರಿಗೆ ಈ ಯೋಜನೆ ಅಡಿಯಲ್ಲಿ ರಾಜ್ಯ ಸರ್ಕಾರದಿಂದಲೂ ಅನುದಾನ ನೀಡುತ್ತಿರುವುದು. ನಮ್ಮದು ರೈತರ ಪರ ಸರ್ಕಾರ ಎಂದು ಹೇಳಿದರು.
ಕೇಂದ್ರ ಸರ್ಕಾರದ ಅನುದಾನ ಕೂಡಲೇ ಬಿಡುಗಡೆ ಮಾಡಿ, ರಾಜ್ಯದ ಅನುದಾನವನ್ನು ಎರಡು, ಮೂರು ದಿನಗಳಲ್ಲಿ ನೀಡಲಾಗುವುದು ಎಂದರು.
ಈ ಯೋಜನೆಯ ಅಡಿ ರಾಜ್ಯ ಸರ್ಕಾರ 44,93,248 ರೈತರ ಆಧಾರ್ ಹಾಗೂ ಬ್ಯಾಂಕ್ ಖಾತೆಯುಳ್ಳ ಮಾಹಿತಿಯನ್ನು ಕೇಂದ್ರಕ್ಕೆ ರವಾನಿಸಿದೆ. ಆ ಪೈಕಿ ಇದುವರೆಗೆ 34,28,238 ರೈತರಿಗೆ ನಗದು ವರ್ಗಾವಣೆ ಮಾಡಲು ಕೇಂದ್ರ ಸರ್ಕಾರ ಮಂಜೂರಾತಿ ನೀಡಿ ಆದೇಶ ಹೊರಡಿಸಿದೆ. ಉಳಿದ ಫಲಾನುಭವಿಗಳಿಗೆ ಮುಂದಿನ ಎರಡು, ಮೂರು ದಿನಗಳಲ್ಲಿ ಮೊದಲ ಕಂತಿನ ಹಣ ವದಗಿಸಲಾಗುತ್ತದೆ ಎಂದರು.
ರಾಜ್ಯ ಸರ್ಕಾರ ಸುಮಾರು ₹ 753.16 ಕೋಟಿ ನಗದು ವರ್ಗಾವಣೆಗೆ ಮಂಜೂರಾತಿ ನೀಡಿದೆ. ಮೊದಲ ಹಂತದಲ್ಲಿ ₹ 685 ಕೋಟಿಗಿಂತ ಹೆಚ್ಚು, ಎರಡನೇ ಹಂತದಲ್ಲಿ ₹ 67 ಕೋಟಿ ಹಣವನ್ನು ಮಂಜೂರು ಮಾಡಲಾಗುವುದು. ಯೋಜನೆಗೆ ಸಂಬಂಧಿಸಿದಂತೆ ಒಟ್ಟು 2,200 ಕೋಟಿಗಳಷ್ಟು ಅನುದಾನವನ್ನು ರಾಜ್ಯ ಸರ್ಕಾರ ಭರಿಸಲಿದೆ ಎಂದು ಹೇಳಿದರು.