ಬೆಂಗಳೂರು : ಯಶವಂತಪುರದ ಕೊಲಂಬಿಯಾ ಏಷಿಯಾ ರೆಫರಲ್ ಆಸ್ಪತ್ರೆಯಲ್ಲಿ ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದ ಮಹಿಳೆಯೊಬ್ಬಳು ತನ್ನ ಗಂಡನ ರಕ್ತದ ಗುಂಪು ಹೊಂದಿಕೆಯಾಗದ ಕಾರಣ ತನ್ನ ಬಾವನಿಂದ ಮೂತ್ರಪಿಂಡ ಪಡೆದು ಕಸಿ ಯಶಸ್ವಿಯಾದ ನಂತರ ಐಸಿಯುನಿಂದಲೇ ಸಮಾಜಶಾಸ್ತ್ರ ಪರೀಕ್ಷೆ ಬರೆದಿದ್ದಾರೆ.
35 ವರ್ಷ ವಯಸ್ಸಿನ ಅಕ್ಷತಾ (ಹೆಸರು ಬದಲಾಯಿಸಲಾಗಿದೆ) ಐಎಎಸ್ ಪಾಸ್ ಮಾಡುವ ದೊಡ್ಡ ಆಕಾಂಕ್ಷೆ ಹೊಂದಿದ್ದರು. ಆದರೆ, ಮೂತ್ರಪಿಂಡ ಕಾಯಿಲೆಯಿರುವ ಸುದ್ದಿ ಆಕೆಯ ಕನಸಿಗೆ ತಡೆ ಒಡ್ಡಿತ್ತು. 6 ವರ್ಷಗಳ ಹಿಂದೆ ತನ್ನ 2ನೇ ಗರ್ಭಾವಸ್ಥೆಯಲ್ಲಿ ಆಕೆಯಲ್ಲಿ ಮೂತ್ರಪಿಂಡ ಕಾಯಿಲೆ ಪತ್ತೆಯಾಗಿ, ಆಗಿನಿಂದಲೇ ಚಿಕಿತ್ಸೆ ಪಡೆಯುತ್ತಿದ್ದರು.
ಕಳೆದ 2 ವರ್ಷಗಳಲ್ಲಿ ಅವರ ಆರೋಗ್ಯ ಸ್ಥಿತಿ ಹದಗೆಟ್ಟು, ಕೊನೆಯ ಹಂತದ ಮೂತ್ರಪಿಂಡ ವೈಫಲ್ಯಕ್ಕೆ ಕಾರಣವಾಯಿತು. ಹೀಗಾಗಿ, 2 ವರ್ಷಗಳಿಂದ ಡಯಾಲಿಸಿಸ್‌ಗೆ ಒಳಗಾಗುತ್ತಿದ್ದ ಅವರು, ಮೂತ್ರಪಿಂಡ ಕಸಿಗಾಗಿ ಕಾಯುತ್ತಿದ್ದರು.
ಆಕೆಯ ಪೋಷಕರು ಅನಾರೋಗ್ಯದ ಕಾರಣದಿಂದ ಮೂತ್ರಪಿಂಡ ದಾನ ಮಾಡುವುದು ಸಾಧ್ಯವಿರಲಿಲ್ಲ, ಹಾಗಾಗಿ, ಆಕೆಯ ಪತಿ ಮುಂದೆ ಬಂದರು. ಆದರೆ, ಅವರ ರಕ್ತದ ಗುಂಪು ಮತ್ತು ಮೂತ್ರಪಿಂಡ ಹೊಂದಾಣಿಕೆಯಾಗಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ದಂಪತಿ ಆತಂಕಕ್ಕೊಳಗಾಗಿದ್ದರು.
ಈಕೆಯ ಬಾವ ಪರಿಸ್ಥಿತಿಯ ಗಂಭೀರತೆ ಅರಿತು ತಾವೇ ಮೂತ್ರಪಿಂಡ ನೀಡಲು ಮುಂದೆ ಬಂದಿದ್ದರಿಂದ ಯಶವಂತಪುರದ ಕೊಲಂಬಿಯಾ ಏಷಿಯಾ ರೆಫರಲ್ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಕಸಿ ನಡೆಸಲಾಯಿತು. ಇದೀಗ ಅಕ್ಷತಾ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಕಸಿ ಚಿಕಿತ್ಸಕ ಡಾ. ದೀಪಕ್ ಕುಮಾರ್ ತಿಳಿಸಿದ್ದಾರೆ.
ಚಿಕಿತ್ಸೆಯ ಸಮಯದಲ್ಲಿ ಅವರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಆಕೆಯ ರಕ್ತನಾಳಗಳು ಡಯಾಲಿಸಿಸ್‌ಗೆ ಸೂಕ್ತವಲ್ಲದ ಕಾರಣ ನಮಗೆ ಚಿಕಿತ್ಸೆಯಲ್ಲಿ ಮುಂದುವರಿಯುವುದು ಕಷ್ಟವಾಗಿತ್ತು. ಗರ್ಭಧಾರಣೆಯ 3ನೇ ತಿಂಗಳಲ್ಲಿ ಅವರು ಅಧಿಕ ರಕ್ತದೊತ್ತಡ ಮತ್ತು ಪ್ರೋಟೀನುರಿಯಾದಿಂದ ಬಳಲುತ್ತಿದ್ದರು. ಹಾಗೆಯೇ ಕ್ರಿಯೇಟಿನೈನ್ ಮಟ್ಟವೂ ಹೆಚ್ಚಿತ್ತು. ಅಲ್ಲದೇ, ಮತ್ತಷ್ಟು ಪರೀಕ್ಷೆಗಳು ಮೂತ್ರಪಿಂಡದ ಕಾಯಿಲೆಯಿರುವುದನ್ನು ದೃಢಪಡಿಸಿದ್ದವು ಎಂದು ಮಾಹಿತಿ ನೀಡಿದರು.
ಈ ಕಸಿ ಅಕ್ಷತಾಳ ಜೀವನಕ್ಕೆ ನೆಮ್ಮದಿ ತಂದಿದ್ದು, ತನ್ನ ಚಟುವಟಿಕೆಗಳನ್ನು ಸಾಮಾನ್ಯವಾಗಿ ನಿರ್ವಹಿಸಬಹುದು ಮತ್ತು ಐಎಎಸ್ ಪೂರ್ಣಗೊಳಿಸುವ ಕನಸನ್ನು ನನಸಾಗಿಸಿಕೊಳ್ಳಬಹುದು. ಅವರು ಕಸಿ ಬಗ್ಗೆ ನಿರ್ಧರಿಸಿದಾಗ, ಕುಟುಂಬವು ಅನುಮೋದನೆ ಪಡೆಯಲು ಹೆಚ್ಚುವರಿ ದೃಢೀಕರಣ ಸಮಿತಿ ಸಂಪರ್ಕಿಸಿತು ಎಂದು ತಿಳಿಸಿದರು.
ಓದಿ: ರಮೇಶ್ ಜಾರಕಿಹೊಳಿ ಹಾಗೂ ಕುಮಾರಸ್ವಾಮಿ ವಿರುದ್ಧ ಎಸಿಬಿಗೆ ದೂರು
ಈ ಕುರಿತು ಮಾತನಾಡಿದ ಅಕ್ಷತಾಳ ಬಾವ, ಮೂತ್ರಪಿಂಡ ವೈಫಲ್ಯದ ಕುರಿತು ಅಕ್ಷತಾ ನಮಗೆ ಅರಿವು ಮೂಡಿಸಿದಾಗ ನಾವೆಲ್ಲರೂ ಅದನ್ನು ಪರಿಹರಿಸಲು ಚರ್ಚಿಸಿದೆವು. ಆದರೆ, ನನ್ನ ಸಹೋದರನ ಮೂತ್ರಪಿಂಡ ಕೂಡ ಹೊಂದಿಕೆಯಾಗುವುದಿಲ್ಲ ಎಂದು ತಿಳಿದಾಗ, ಅಕ್ಷತಾ ದೀರ್ಘಕಾಲಿಕ ಸಮಸ್ಯೆಯಿಂದ ಹೊರ ಬರುವಂತೆ ನಿರ್ಧಾರ ತೆಗೆದುಕೊಳ್ಳುವುದು ನನ್ನ ಜವಾಬ್ದಾರಿಯಾಗಿತ್ತು.
ನನ್ನ ಮೂತ್ರಪಿಂಡ ದಾನ ಮಾಡಲು ಯಾವುದೇ ಸಮಸ್ಯೆ ಕಾಣಿಸಲಿಲ್ಲ. ಹೀಗಾಗಿ, ನಾನು ಮುಂದುವರಿಯಲು ನಿರ್ಧರಿಸಿದೆ. ಕುಟುಂಬವನ್ನು ಬೆಂಬಲಿಸುವುದು ಮಹಿಳೆಯ ಜವಾಬ್ದಾರಿ ಮಾತ್ರವಲ್ಲ, ಅಗತ್ಯವಿದ್ದಾಗ ಪುರುಷರೂ ಮುಂದೆ ಬರಬೇಕು ಎಂದು ಅಭಿಪ್ರಾಯಪಟ್ಟರು.