ಬೆಂಗಳೂರು: ಡೇಟಿಂಗ್ ಆ್ಯಪ್ ಮೂಲಕ ಪರಿಚಯವಾಗಿದ್ದ ಇಬ್ಬರ ಜೋಡಿಯ ಮಧ್ಯೆ ಅನುಮಾನವೆಂಬ ಭೂತ ಇಬ್ಬರ ತಲೆಯಲ್ಲಿ ಹೊಕ್ಕಿದ್ದೇ ತಡ ಬೇರೆಯಾಗುವುದಷ್ಟೇ ಅಲ್ಲದೇ ಪ್ರೀತಿಸಿದ ಯುವಕನ ಮೇಲೆಯೇ ಯುವತಿ ಗ್ಯಾಂಗ್ ಕಟ್ಟಿಕೊಂಡು ಹಲ್ಲೆ ನಡೆಸಿರುವ ಆರೋಪ ಪ್ರಕರಣ ನಗರದಲ್ಲಿ ಬೆಳಕಿಗೆ ಬಂದಿದೆ.
ಪ್ರಕರಣದ ಕುರಿತು ಸುದ್ದಿಗಾರರೊಂದಿಗೆ ದಕ್ಷಿಣ ವಿಭಾಗದ ಡಿಸಿಪಿ ಕೃಷ್ಣಕಾಂತ್ ಮಾತನಾಡಿ, ಮಹದೇವ ಪ್ರಸಾದ್ ಎಂಬ ಯುವಕ ಹಾಗೂ ಕ್ಲಾರ್ ಎಂಬ ಯುವತಿ ಡೇಟಿಂಗ್ ಆ್ಯಪ್ ಮೂಲಕ ಇಬ್ಬರು ಪರಿಚಯವಾಗಿರುತ್ತಾರೆ. ಪರಿಚಯ ಪ್ರೀತಿಗೆ ತಿರುಗಿ ಲಿವಿಂಗ್ ಟುಗೆದರ್ನಲ್ಲಿ ವಾಸಿಸುತ್ತಿದ್ದರು. ಆದರೇ ಈ ಇಬ್ಬರ ನಡುವೆ ಅನುಮಾನದ ಹುತ್ತ ಬೆಳೆಯಲಾರಂಭಿಸಿತ್ತು.
ಕ್ಲಾರಾಗೆ ಮಹದೇವ್ ಪ್ರಸಾದ್ ಮೇಲೆ ಹಾಗೂ ಮಹದೇವ ಪ್ರಸಾದ್ ಮೇಲೆ ಕ್ಲಾರಾಗೆ ಬೇರೊಬ್ಬರ ಜೊತೆ ಸಂಬಂಧ ಹೊಂದಿದ್ದಾರೆ ಎಂಬ ಅನುಮಾನ ಶುರುವಾಗಿತ್ತು. ಹೀಗೆ ಅನುಮಾನ ಜಾಸ್ತಿಯಾದಾಗ ಈ ಜೋಡಿ ಪ್ರತ್ಯೇಕವಾಗಿ ಜೀವನ ನಡೆಸಲು ಆರಂಭಿಸಿದ್ದರು ಎಂದು ತಿಳಿಸಿದ್ದಾರೆ.
ಕಳೆದ 10 ದಿನಗಳ ಹಿಂದೆ ಕ್ಲಾರಾ ಮಹದೇವ ಪ್ರಸಾದ್ಗೆ ನಿನ್ನನ್ನು ನೋಡಬೇಕು ಎಂದು ಮನೆ ಬಳಿ ಕರೆಸಿಕೊಂಡಿದ್ದಳು. ರಾತ್ರಿ 11.30ರ ಸುಮಾರಿಗೆ ಮಹದೇವ ಪ್ರಸಾದ್ ಕ್ಲಾರಾ ಮನೆ ಬಳಿ ಬಂದಿದ್ದ. ಈ ವೇಳೆ ಕಾರಿನಲ್ಲಿ ಎಂಟ್ರಿ ಕೊಟ್ಟ ಪ್ರಿಯತಮೆ ಕ್ಲಾರಾ ಗುಂಪೊಂದು ಮಹದೇವ ಪ್ರಸಾದ್ನನ್ನು ಅಪಹರಿಸಿದ್ದಾರೆ. ಅಲ್ಲದೆ ಆಥನ ಮೇಲೆ ಹಲ್ಲೆ ನಡೆಸಿ ಬಳಿಕ ಮನೆಗೆ ತಂದು ಬಿಟ್ಟಿದ್ದಾರೆ ಎಂದು ಹೇಳಿದ್ದಾರೆ.
ಪ್ರಕರಣ ಸಂಬಂಧ ಯುವಕ ಮಹದೇವ್ ಪ್ರಸಾದ್ ಹನುಮಂತನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ. ಸದ್ಯ ಹನುಮಂತನಗರ ಪೊಲೀಸರು ಘಟನೆ ಸಂಬಂಧ ಕ್ಲಾರಾ ಸೇರಿದಂತೆ 8 ಮಂದಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ಕೃಷ್ಣಕಾಂತ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಸಂಬಂಧಿಕನಿಂದಲೇ ಯುವತಿಗೆ ಲೈಂಗಿಕ ಕಿರುಕುಳ: ಸಿಡಿಪಿಒರಿಂದ ಸಂತ್ರಸ್ತೆ ರಕ್ಷಣೆ