ಬೆಂಗಳೂರು: ಸದಾಶಿವ ಆಯೋಗದ ವರದಿಯನ್ನು ಯಥಾವತ್ತಾಗಿ ಜಾರಿಗೆ ತರಬೇಕು ಹಾಗೂ ಒಳ ಮೀಸಲಾತಿಯನ್ನು ಜಾರಿಗೆ ತರಬೇಕು ಎಂದು ಮಾಜಿ ಸಚಿವ ಕೆ.ಎಚ್. ಮುನಿಯಪ್ಪ ಸರ್ಕಾರಗಳಿಗೆ ಆಗ್ರಹಿಸಿದ್ದಾರೆ.
ನಿವೃತ್ತ ನ್ಯಾಯಮೂರ್ತಿ ಸದಾಶಿವ ಆಯೋಗ ವರದಿ ಜಾರಿಗೆ ಸಂಬಂಧಿಸಿದಂತೆ, ಸುಪ್ರೀಂಕೋರ್ಟ್ ತೀರ್ಪು ಹಿನ್ನೆಲೆಯಲ್ಲಿ ಒಳ ಮೀಸಲಾತಿಯನ್ನು ಜಾರಿಗೆ ತರುವ ಬಗ್ಗೆ ಸರ್ಕಾರಕ್ಕೆ ಆಗ್ರಹಿಸಿ ಅಸ್ಪೃಶ್ಯ ಸಮುದಾಯದ ಕಾಂಗ್ರೆಸ್ ಹಿರಿಯ ನಾಯಕರು ನಗರದ ಖಾಸಗಿ ಹೊಟೇಲ್ನಲ್ಲಿ ಜಂಟಿ ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಒಳ ಮೀಸಲಾತಿ ಜಾರಿಗೆ ತರುವುದರಿಂದ ಯಾರಿಗೂ ಕೂಡ ಅನ್ಯಾಯ ಆಗುವುದಿಲ್ಲ. ಸಂವಿಧಾನವನ್ನೂ ಯಾವುದೇ ರೀತಿ ತಿರುಚಿದಂತೆ ಆಗುವುದಿಲ್ಲ. ರಾಜ್ಯ ಸರ್ಕಾರ ತಮ್ಮ ಬಳಿ ಇರುವ ಅಧಿಕಾರವನ್ನು ಬಳಸಿಕೊಂಡು ಸದಾಶಿವ ಆಯೋಗ ವರದಿ ಜಾರಿಗೆ ತರಬೇಕು ಎಂದು ಹೇಳಿದರು.
ಮಾಜಿ ಸಂಸದ ಬಿ.ಎನ್. ಚಂದ್ರಪ್ಪ ಮಾತನಾಡಿ, 2004ರಲ್ಲಿ ಸರ್ವೋಚ್ಚ ನ್ಯಾಯಾಲಯವೇ ಒಳಮೀಸಲಾತಿಯ ಬಗ್ಗೆ ಉಲ್ಲೇಖಿಸಿತ್ತು. ನಂತರ ಸದಾಶಿವ ಆಯೋಗ ರಚನೆಯಾಗಿತ್ತು. ವರದಿಯನ್ನ 2012ರಲ್ಲಿಯೇ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಈ ವರದಿಯನ್ನ 24 ಗಂಟೆಯೊಳಗೆ ಜಾರಿಗೆ ತರುತ್ತೇವೆ ಎಂದು ಬಿಜೆಪಿ ನಾಯಕರು ಹೇಳಿದ್ದರು. ಈಗ ಬಿಜೆಪಿ ಸರ್ಕಾರವೇ ಅಸ್ತಿತ್ವದಲ್ಲಿದೆ ಎಂದರು.
ವಿಧಾನಪರಿಷತ್ ಸದಸ್ಯ ಧರ್ಮಸೇನಾ ಮಾತನಾಡಿ, ಜನಸಂಖ್ಯೆಗನುಗುಣವಾಗಿ ನಮಗೆ ಒಳಮೀಸಲಾತಿ ನೀಡಿ. ಕೆನೆಪದರದಡಿ ಮೀಸಲಾತಿಯನ್ನು ಪರಿಷ್ಕರಿಸಿ. ಸದಾಶಿವ ಆಯೋಗದ ವರದಿಯನ್ನು ಯಥಾವತ್ ಜಾರಿಗೊಳಿಸಿ ಎಂದರು.
ಮಾಜಿ ಸಂಸದ ಕೆ.ಹೆಚ್.ಮುನಿಯಪ್ಪ ಮಾತು ಮುಂದುವರಿಸಿ, ಯಡಿಯೂರಪ್ಪ ಬಸವಣ್ಣನವರ ಅನುಯಾಯಿ. ಬಸವಣ್ಣನವರ ಸಿದ್ಧಾಂತವನ್ನ ಅಳವಡಿಸಿಕೊಂಡವರು. ಹೀಗಾಗಿ ಈ ವರದಿಯನ್ನು ಜಾರಿಗೆ ತರಬೇಕು. ಆಂಧ್ರದಲ್ಲಿ ಮಂದಕೃಷ್ಣ ಮಾದಿಗ ಇದರ ಬಗ್ಗೆ ಹೋರಾಟ ಮಾಡಿದ್ದರು. ಕೇಂದ್ರ ಸರ್ಕಾರದ ಮುಂದೆಯೂ ಈ ಪ್ರಸ್ತಾಪವಿದೆ. ಈ ಕೆನೆಪದರ ಮೀಸಲಾತಿಯನ್ನು ಶೀಘ್ರ ಜಾರಿಗೊಳಿಸಬೇಕು. ಸಿದ್ದರಾಮಯ್ಯ ಅವಧಿಯಲ್ಲಿ ತಯಾರಿಸಿರುವ ಜಾತಿಗಣತಿಯನ್ನು ಸಮಾಜ ಕಲ್ಯಾಣ ಇಲಾಖೆ ಮಾಡಿಸಿತ್ತು. ಆದರೆ ಬಹಿರಂಗ ಮಾಡದೆ ಪೆಂಡಿಂಗ್ ಇಡಲಾಗಿತ್ತು ಎಂದರು.