ಬೆಂಗಳೂರು: ಆರು ತಿಂಗಳೊಳಗೆ ಕೆಜಿಎಫ್ನಲ್ಲಿ ಸರ್ವೆ ನಡೆಸಿ ಯಾವುದೇ ಗಣಿ ಸಂಪತ್ತು ಪತ್ತೆಯಾಗದಿದ್ದರೆ 3,200 ಎಕರೆ ಜಮೀನನ್ನು ರಾಜ್ಯಕ್ಕೆ ನೀಡಲು ಕ್ರಮ ವಹಿಸುವುದಾಗಿ ಕೇಂದ್ರ ಗಣಿ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದರು.
ಕೇಂದ್ರ ಸರ್ಕಾರದಲ್ಲಿ ರಾಜ್ಯದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಸಂಬಂಧಿಸಿದಂತೆ ಬಾಕಿ ಇರುವ ವಿಷಯಗಳ ಕುರಿತಂತೆ ಚರ್ಚಿಸಲು ಉನ್ನತ ಮಟ್ಟದ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಕೆಜಿಎಫ್ನಲ್ಲಿನ 3,200 ಎಕರೆ ಭೂಮಿಯನ್ನು ನೀಡುವಂತೆ ಕೋರಿದ್ದರು. ಈ ಸಂಬಂಧ ರಾಜ್ಯ ಸರ್ಕಾರದ ಹಂತದಲ್ಲಿ ನಿರ್ಧಾರ ಕೈಗೊಂಡು, ಮೊದಲನೆಯದಾಗಿ ಮೂರು ತಿಂಗಳಲ್ಲಿ ಭೌತಿಕ ಸರ್ವೆ ಮಾಡಲು ಸೂಚನೆ ನೀಡಿದ್ದೇವೆ. ನಮ್ಮ ಇಲಾಖೆ ಎಂಇಸಿಎಲ್ ಕಡೆಯಿಂದ ಆರು ತಿಂಗಳಲ್ಲಿ ಅಲ್ಲಿರುವ 12,000 ಎಕರೆ ಜಮೀನಿನಲ್ಲಿ ಯಾವುದನ್ನು ಎಕ್ಸ್ಪ್ಲೋರ್ ಮಾಡಿಲ್ಲ, ಅದನ್ನು ಗುರುತಿಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಒಂದು ವೇಳೆ ಕೆಜಿಎಫ್ ಎಕ್ಸ್ಪ್ಲೋರ್ ಮಾಡದ ಭೂಮಿಯಲ್ಲಿ ಗಣಿ ಸಂಪತ್ತು ಸಿಕ್ಕಿದರೆ ಅದರಿಂದಲೂ ರಾಜ್ಯ ಸರ್ಕಾರಕ್ಕೆ ಲಾಭ ಆಗಲಿದೆ. ರಾಜ್ಯ ಸರ್ಕಾರ ಅದನ್ನು ಹರಾಜು ಹಾಕಲು ಅವಕಾಶ ಇದೆ. ಒಂದು ವೇಳೆ ರಾಜ್ಯ ಸರ್ಕಾರ ಕೇಳಿರುವ 3,200 ಎಕರೆ ಜಮೀನಿನಲ್ಲಿ ಯಾವುದೇ ಗಣಿ ಸಂಪತ್ತು ಇಲ್ಲವಾದರೆ ಅದನ್ನು ರಾಜ್ಯ ಸರ್ಕಾರಕ್ಕೆ ವರ್ಗಾಯಿಸಲು ತೀರ್ಮಾನ ಮಾಡುತ್ತೇವೆ ಎಂದರು.
ಕಲ್ಲಿದ್ದಲು ಸರಬರಾಜು ಬಗ್ಗೆ ವಿಸ್ತೃತ ವಾಗಿ ಚರ್ಚೆ ನಡೆದಿದೆ. ಬಹಳ ವರ್ಷದಿಂದ ಹಲವು ಸಮಸ್ಯೆಗಳು ನನೆಗುದಿಗೆ ಬಿದ್ದಿದೆ. ಈ ಬಗ್ಗೆ ಸಿಎಂ ಸಮಸ್ಯೆ ನಿವಾರಿಸುವಂತೆ ಕೋರಿದ್ದರು. ಈ ಸಂಬಂಧ ಇಲಾಖೆಯ ಅಧಿಕಾರಿಗಳ ಜತೆಗೂಡಿ ಸುದೀರ್ಘ ಸಮಾಲೋಚನೆ ನಡೆಸಿದ್ದೇವೆ. ಈ ಸಮಸ್ಯೆಗಳಿಂದ ರಾಜ್ಯ, ಕೇಂದ್ರ ಸರ್ಕಾರಕ್ಕೂ ನಷ್ಟ ಆಗುತ್ತಿತ್ತು. ನನೆಗುದಿಗೆ ಬಿದ್ದಿದ್ದ ಸಮಸ್ಯೆ ಬಗೆಹರಿಸಲು ಸಿಎಂ ದೊಡ್ಡ ಹೆಜ್ಜೆ ಇಟ್ಟಿದ್ದಾರೆ ಎಂದರು.
ದೋಣಿಮಲೈಯಲ್ಲಿ ಎನ್ಎಂಡಿಸಿ ಕಂಪನಿ ಗಣಿಗಾರಿಕೆ ಮಾಡುತ್ತಿತ್ತು. 2015 ತಿದ್ದುಪಡಿ ಬಳಿಕ ಅದರ 5 ವರ್ಷ ಲೀಸ್ ಅವಧಿ 2018ಕ್ಕೆ ಮುಗಿದಿತ್ತು. ಬಳಿಕ ಇದರ ನವೀಕರಣ ಬಾಕಿ ಇತ್ತು. ಅದರಲ್ಲಿ ರಾಜ್ಯ ಸರ್ಕಾರ ಹೆಚ್ಚಿನ ಪ್ರೀಮಿಯಂ ಬರಬೇಕು ಎಂದು ಬೇಡಿಕೆ ಇಟ್ಟಿತ್ತು. ಈ ಸಂಬಂಧ ಕೇಂದ್ರದ ಕಾನೂನಿನಲ್ಲಿ ತೊಡಕು ಇದೆ. ನಿಯಮದಂತೆ 2020ರ ಬಳಿಕ ಯಾವುದೇ ಗಣಿ ಬ್ಲಾಕ್ ಅನ್ನು ನೀಡಿದರೆ ಕೇಂದ್ರ ಸರ್ಕಾರ ನಿರ್ಧರಿತ ಪ್ರೀಮಿಯಂ ಕೊಡಬಹುದಾಗಿದೆ.
ಆದರೆ, ನವೀಕರಣದ ಅವಕಾಶ ಇಲ್ಲ. ಈ ಸಂಬಂಧ ಕೇಂದ್ರ ಗಣಿ ಇಲಾಖೆ ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗುವುದು. ಆ ಸಮತಿ ಮೂರು ತಿಂಗಳೊಳಗೆ ಗಣಿ ಗುತ್ತಿಗೆ ಪಡೆದ ಪಿಎಸ್ಯುಗಳು ಎಷ್ಟು ಪ್ರೀಮಿಯಂ ಕೊಡಬೇಕು ಎಂದು ತೀರ್ಮಾನ ಮಾಡಲಿದೆ ಎಂದು ತಿಳಿಸಿದರು. ಅಲ್ಲಿವರೆಗೆ ಕರ್ನಾಟಕಕ್ಕೆ 37.25% ರಾಯಲ್ಟಿ ನೀಡಲು ಸೂಚನೆ ನೀಡಿದ್ದೇನೆ. ಸಮಿತಿ ನಿರ್ಧಾರ ಕೈಗೊಂಡ ಬಳಿಕ ಪೂರ್ವಾನ್ವಯವಾಗಿ ಪ್ರೀಮಿಯಂ ಮೊತ್ತ ಜಾರಿಯಾಗಲಿದೆ ಎಂದರು.
ಕಲ್ಲಿದ್ದಲು ಬೆಲೆ ಮರುಪರಿಶೀಲನೆಗೆ ಸೂಚನೆ:
ಕರ್ನಾಟಕಕ್ಕೆ ಸಿಂಗ್ರೇನಿ ಕಲ್ಲಿದ್ದಲು ಫೀಲ್ಡ್ನಿಂದ ಕಲ್ಲಿದ್ದಲು ಬರುತ್ತಿದೆ. ಅದು ದುಬಾರಿಯಾಗುತ್ತಿದೆ ಎಂದು ರಾಜ್ಯ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದ್ದು, ಬೆಲೆ ಮರುಪರಿಶೀಲಿಸುವಂತೆ ಇಲಾಖೆ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು.
ಒಂದು ವೇಳೆ ಬೆಲೆ ಪರಿಷ್ಕರಣೆ ಮಾಡಲು ಆಗದೇ ಹೋದಲ್ಲಿ ಇಲಾಖೆ ಮಧ್ಯ ಪ್ರವೇಶ ಮಾಡಿ, ನಿರ್ಧಾರ ಕೈಗೊಳ್ಳಲಿದೆ ಎಂದರು. ರಾಜ್ಯದ ಸುಪರ್ದಿಗೆ ನೀಡಲಾಗಿರುವ ಬಾರಂಜಾ ಕೋಲ್ ಮೈನ್ನಲ್ಲಿ ಕಲ್ಲಿದ್ದಲು ಕಳವು ಆಗಿದೆ. ಈ ಸಂಬಂಧ ಕಲ್ಲಿದ್ದಲು ನಿಯಂತ್ರಣಾಧಿಕಾರಿಗಳಿಗೆ ತನಿಖೆ ನಡೆಸಲು ಸೂಚನೆ ನೀಡಲಾಗಿದೆ. ಅಲ್ಲಿ ಗಣಿಗಾರಿಕೆ ಪ್ರಾರಂಭಿಸಲು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದೇವೆ ಎಂದರು.
ಜಿ4 ಲೆವೆಲ್ ಹರಾಜಿಗೆ ಅವಕಾಶ:
2015 ಬಳಿಕ ಜಿ2 ಲೆವೆಲ್ನಲ್ಲಿ ಮಾತ್ರ ಗಣಿ ಹರಾಜು ಮಾಡಲಾಗುತ್ತಿದೆ. ಜಿ2 ಲೆವೆಲ್ ಮಾಡಲು ಸಾಕಷ್ಟು ಸಮಯ ಬೇಕಾಗುತ್ತದೆ. ಈ ವಿಳಂಬದಿಂದ ಸಾಕಷ್ಟು ಸಮಸ್ಯೆ ಆಗುತ್ತಿದೆ ಎಂದು ರಾಜ್ಯ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿತ್ತು. ಅದನ್ನು G3 ಲೆವೆಲ್ ಮಾಡಲು ರಾಜ್ಯ ಸರ್ಕಾರ ಮನವಿ ಮಾಡಿತ್ತು. ಕೇಂದ್ರ ಸರ್ಕಾರ G4 ಲೆವೆಲ್ ಪರವಾನಿಗೆ ಕೊಡಲು ನಿರ್ಧರಿಸಿದೆ ಎಂದು ತಿಳಿಸಿದರು.
ಅದಕ್ಕೆ ಬೇಕಾದ ತಿದ್ದುಪಡಿ ಮಾಡಲಾಗುತ್ತದೆ. G4 ಲೆವೆಲ್ ಕಾಂಪೊಸಿಟ್ ಪರವಾನಗಿ ಕೊಡುತ್ತೇವೆ. ಆ ಮೂಲಕ ಒಂದು ವೇಳೆ ಗಣಿ ಸಂಪತ್ತು ಸಿಕ್ಕಿದರೆ ರಾಜ್ಯ ಸರ್ಕಾರ ಅದನ್ನು ಬಳಕೆ ಮಾಡಬಹುದು. ಇಲ್ಲವಾದರೆ ಅದರಿಂದ ಹೊರಬರಬಹದು ಎಂದು ತಿಳಿಸಿದರು.