ಬೆಂಗಳೂರು: ನಾನು ಬೆಂಗಳೂರಿನ ಚಿಕ್ಕಪೇಟೆ ವಿಧಾನಸಭೆ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಎಂದು ಕೆಜಿಎಫ್ ಬಾಬು ತಿಳಿಸಿದ್ದಾರೆ. ಈ ಹಿಂದೆ ಬೆಂಗಳೂರು ನಗರದಿಂದ ವಿಧಾನ ಪರಿಷತ್ಗೆ ಅಭ್ಯರ್ಥಿಯಾಗಿ ಕಣಕ್ಕಿಳಿದು ಸೋಲನ್ನನುಭವಿಸಿರುವ ಇವರು ಇದೀಗ ವಿಧಾನಸಭೆ ಚುನಾವಣೆ ಮೂಲಕ ಇನ್ನೊಮ್ಮೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
ಇಂದು ನಗರದಲ್ಲಿ ಮಾಧ್ಯಮಗಳ ಜತೆ ಮಾತನಾಡಿ, ನಾನು ಈಗಾಗಲೇ ಕ್ಷೇತ್ರದಲ್ಲಿ ಕೆಲಸ ಮಾಡ್ತಿದ್ದೇನೆ. ನಾನು ಪಿಯುಸಿ ಪಾಸ್ ಆದವರಿಗೆ ಸ್ಕಾಲರ್ ಶಿಪ್ ಕೊಡ್ತಿದ್ದೇನೆ. ವರ್ಷಕ್ಕೆ 340 ಕೋಟಿ ರೂ ಹಣ ಖರ್ಚು ಮಾಡ್ತಿದ್ದೇನೆ. ಇದನ್ನು ಚುನಾವಣೆಗೆ ಮುನ್ನ ಘೋಷಣೆ ಮಾಡ್ತೇನೆ. ಇದನ್ನು ನೋಡಲಾರದೆ ಕೆಲವರಿಂದ ಬೆದರಿಕೆ ಕರೆಗಳು ಬರ್ತಿವೆ. ಯಾರು ಏನು ಅನ್ನೋದನ್ನು ನಾನು ಈಗ ಹೇಳಲ್ಲ. ನನಗೆ ಬೆದರಿಕೆ ಬರ್ತಿರೋದಂತು ನಿಜ ಎಂದರು.
ನನಗೆ ಟಿಕೆಟ್ ಕೊಟ್ಟರೂ ಸರಿಯೇ ಇಲ್ಲವಾದ್ರೂ ಸರಿಯೇ. ನಾನು ಚಿಕ್ಕಪೇಟೆಯಿಂದಲೇ ನಿಲ್ತೇನೆ. ನಾನು ಚುನಾವಣೆಗೆ ಸ್ಪರ್ಧಿಸಲು ತೀರ್ಮಾನಿಸಿದ್ದೇನೆ ಎಂದು ಹೇಳುವ ಮೂಲಕ ತಮಗೆ ಟಿಕೆಟ್ ನೀಡದಿದ್ದರೆ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸೂಚನೆ ನೀಡಿದ್ದಾರೆ.
ಟಿಕೆಟ್ಗಾಗಿ ಪೈಪೋಟಿ ಆರಂಭವಾಗಿದೆ: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಉದಯ್ ಗರುಡಾಚಾರ್ ವಿರುದ್ಧ ಸೋಲನುಭವಿಸಿದ್ದ ಮಾಜಿ ಶಾಸಕ ಆರ್ ವಿ ದೇವರಾಜ್ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿಯಲು ಸಿದ್ಧತೆ ನಡೆಸಿಕೊಂಡಿದ್ದಾರೆ. ಮುಸಲ್ಮಾನ್ ಸಮುದಾಯದ ಮತ ಹೆಚ್ಚಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಗೆಲ್ಲುವ ನಿರೀಕ್ಷೆ ಹೆಚ್ಚಿದೆ. ಹೀಗಾಗಿ, ಟಿಕೆಟ್ಗಾಗಿ ಪೈಪೋಟಿ ಆರಂಭವಾಗಿದೆ. ಅಲ್ಪಸಂಖ್ಯಾತ ಮುಸಲ್ಮಾನ್ ಸಮುದಾಯದವರೇ ಆಗಿರುವ ತಮಗೆ ಟಿಕೆಟ್ ನೀಡುವಂತೆ ರಾಜ್ಯ ಕಾಂಗ್ರೆಸ್ ನಾಯಕರಿಗೆ ಕೆಜಿಎಫ್ ಬಾಬು ಮೇಲಿಂದ ಮೇಲೆ ಒತ್ತಡ ಹೇರುತ್ತಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್‌ಗೆ ಹೋಗಲ್ಲ, ಕೊನೆಯ ಉಸಿರಿನವರೆಗೂ ಬಿಜೆಪಿಯಲ್ಲೇ ಇರುವೆ: ಶ್ರೀರಾಮುಲು