ಬೆಂಗಳೂರು: ಹಿಜಾಬ್ ನಿಷೇಧದ ಬಗ್ಗೆ ನ್ಯಾಯಾಲಯದ ತೀರ್ಪು ಬಂದಿದ್ದರೂ, ಹಿಜಾಬ್ಗೆ ಅವಕಾಶ ನೀಡುವಂತೆ ಕೋರಿ ಮುಖ್ಯಮಂತ್ರಿಗೆ 60 ಮಂದಿ ಚಿಂತಕರು ಪತ್ರ ಬರೆದು ಸಂವಿಧಾನ ವಿರೋಧಿ ನಿಲುವು ತಾಳಿದ್ದಾರೆ ಎಂದು ಬಿಜೆಪಿ ಶಾಸಕ ಕೆ.ಜಿ.ಬೋಪಯ್ಯ ಟೀಕಿಸಿದರು. ವಿಧಾನಸೌಧದಲ್ಲಿ ಮಾತನಾಡಿದ ಅವರು, ಸೋಕಾಲ್ಡ್ ಪ್ರಗತಿಪರರು ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ. ಹಿಜಾಬ್ ಹಾಕಿ ಪರೀಕ್ಷೆ ಬರೆಯೋಕೆ ಹಾಗೂ ವ್ಯಾಪಾರ ಮಾಡಲು ಅವಕಾಶ ನೀಡುವಂತೆ ಕೋರಿರುವುದು ಸಂವಿಧಾನದ ವಿರೋಧಿ. ಈ ವಿಚಾರವನ್ನು ನಾನು ಸದನದಲ್ಲೂ ಪ್ರಸ್ತಾಪಿಸುತ್ತೇನೆ ಎಂದರು.
ಧಾರ್ಮಿಕ ದತ್ತಿ ನಿಯಮದ ಪ್ರಕಾರ, ಅನ್ಯ ಧರ್ಮೀಯರಿಗೆ ವ್ಯಾಪಾರ ಮಾಡಲು ಅವಕಾಶ ನೀಡಬಾರದು. 2002ರಲ್ಲಿ ಎಸ್.ಎಂ.ಕೃಷ್ಣ ಸರ್ಕಾರದಲ್ಲೇ ಆದೇಶ ಮಾಡಲಾಗಿತ್ತು. ನಾನು ಕೂಡ ಅವಕಾಶ ನೀಡಬಾರದು ಎಂದು ಸಿಎಂ ಹಾಗೂ ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ಪತ್ರ ಬರೆದಿದ್ದೇನೆ ಎಂದರು.
ಹಲಾಲ್ ಮಾಂಸ ನಿಷೇಧಿಸಬೇಕು. ಇಸ್ಲಾಂನಲ್ಲಿ ಹಲಾಲ್ ಮಾಡಿ ತಿನ್ನಬೇಕು ಅಂತಿದೆ. ಹಿಂದೂಗಳಿಗೆ ಈ ನಿಯಮ ಅನ್ವಯವಾಗದು. ಧಾರ್ಮಿಕ ವಿಚಾರ ಇಟ್ಟುಕೊಂಡು ರಾಜಕೀಯ ಮಾಡಬಾರದು ಎಂದರು.
ಇದನ್ನೂ ಓದಿ: ಸಂಘರ್ಷದ ವಾತಾವರಣದಲ್ಲಿಯೂ ಶಾಂತಿ - ಸುವ್ಯವಸ್ಥೆ ಕಾಪಾಡಿದ್ದೇವೆ: ಸಿಎಂ ಬೊಮ್ಮಾಯಿ