ಬೆಂಗಳೂರು: ಕಾವೇರಿ ನಿವಾಸವನ್ನು ಮುಖ್ಯಮಂತ್ರಿಗಳ ಸರ್ಕಾರಿ ನಿವಾಸವಾಗಿ ಸರ್ಕಾರ ಆದೇಶ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ಕಳೆದ ಆರುವರೆ ವರ್ಷಗಳಿಂದ ವಾಸವಾಗಿದ್ದ ವಿಧಾನಸಭೆ ಪ್ರತಿಪಕ್ಷದ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ತೆರವುಗೊಳಿಸಿರುವ ಹಿನ್ನೆಲೆ, ದುರಸ್ತಿಗೊಳಿಸಿ ಕಾವೇರಿ ನಿವಾಸಕ್ಕೆ ಬಣ್ಣ ಬಳಿಯುವ ಕಾರ್ಯ ನಡೆಸಲಾಗುತ್ತಿದೆ.
ಪ್ರತಿಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯರಿಗೆ ಸರ್ಕಾರ ನೀಡಿರುವ ಕುಮಾರಕೃಪ ಪೂರ್ವ ನಿವಾಸಕ್ಕೆ ಶಿಫ್ಟ್ ಆಗಿದ್ದು, ಕಾವೇರಿ ನಿವಾಸವನ್ನು ದುರಸ್ತಿಗೊಳಿಸಿ ಬಣ್ಣ ಬಳಿಯುವ ಕಾರ್ಯ ನಡೆಸಲಾಯಿತು. ಇದೀಗ ಆ ಕೆಲಸವು ಬಹುತೇಕ ಪೂರ್ಣಗೊಂಡಿದೆ. ಕಾವೇರಿ ನಿವಾಸದ ಒಳ ಹಾಗೂ ಹೊರಭಾಗದ ರಸ್ತೆಗಳ ಡಾಂಬರೀಕರಣ ಕೂಡ ಇಂದು ನಡೆದಿದೆ. ಒಂದೆರಡು ದಿನಗಳಲ್ಲಿಯೇ ಸಿಎಂ ಆಗಮನಕ್ಕೆ ಕಾವೇರಿ ಸಜ್ಜಾಗಿದೆ.
ಮೂಲಗಳ ಪ್ರಕಾರ ಬಜೆಟ್ ಅಧಿವೇಶನ ಆರಂಭಕ್ಕೆ ಮುನ್ನವೇ ಸಿಎಂ ನಿವಾಸಕ್ಕೆ ಆಗಮಿಸಲಿದ್ದಾರೆ. ತಮ್ಮ ಬಜೆಟ್ ಪ್ರತಿಯನ್ನು ಹೊತ್ತ ಸೂಟ್ಕೇಸ್ ಅನ್ನು ಇಲ್ಲಿಂದಲೇ ತೆಗೆದುಕೊಂಡು ಹೊರಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ಆರ್ಎಂವಿ 2ನೇ ಹಂತ ಡಾಲರ್ಸ್ ಕಾಲೋನಿಯ ತಮ್ಮ ಸ್ವಂತ ನಿವಾಸದಲ್ಲಿಯೇ ತಂಗಿರುವ ಸಿಎಂ, ತಾವು ಅಧಿಕಾರ ವಹಿಸಿಕೊಂಡ ಐದಾರು ತಿಂಗಳ ನಂತರ ಅಧಿಕೃತ ಸರ್ಕಾರಿ ನಿವಾಸಕ್ಕೆ ಆಗಮಿಸುತ್ತಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ನಿವಾಸ ತೆರವುಗೊಳಿಸಲು ಸಮಯ ಪಡೆದಿದ್ದರಿಂದ ಈ ವಿಳಂಬ ಆಗಿದೆ.