ಬೆಂಗಳೂರು : ಪಂಜಾಬ್ನಲ್ಲಿ ಪ್ರಧಾನಿಗಳು ಕಾರ್ಯಕ್ರಮಕ್ಕೆ ತೆರಳುವ ವೇಳೆ ರೈತ ಚಳವಳಿ ಹೆಸರಿನಲ್ಲಿ ರಸ್ತೆ ಬಂದ್ ಮಾಡಿ ಸಂಚಾರಕ್ಕೆ ತೊಡಕುಂಟು ಮಾಡಿದ ಘಟನೆ ಪೂರ್ವನಿಯೋಜಿತವಾಗಿದೆ. ದೇಶದ ಪ್ರಧಾನಿಗೆ ಭದ್ರತೆ ಕಲ್ಪಿಸಲು ವಿಫಲವಾದ ಪಂಜಾಜ್ ಸರ್ಕಾರವನ್ನು ವಜಾಗೊಳಿಸಬೇಕು ಎಂದು ರಾಜ್ಯಪಾಲರ ಮೂಲಕ ರಾಷ್ಟ್ರಪತಿಗಳಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮನವಿ ಮಾಡಿದ್ದಾರೆ.
ಸಚಿವರಾದ ಎಸ್.ಟಿ. ಸೋಮಶೇಖರ್ ಹಾಗೂ ಭೈರತಿ ಬಸವರಾಜ್ ಜೊತೆಗೂಡಿ ರಾಜಭವನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಭೇಟಿ ನೀಡಿದರು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಜೊತೆ ಕೆಲಕಾಲ ಮಾತುಕತೆ ನಡೆಸಿ, ಪಂಜಾಬ್ ಸಿಎಂ ವಿರುದ್ಧ ದೂರು ನೀಡಿದರು. ಸರ್ಕಾರವನ್ನು ವಜಾಗೊಳಿಸುವಂತೆ ಮನವಿ ಮಾಡಿದರು.
ರಾಜ್ಯಪಾಲರ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಟೀಲ್, ಪಂಜಾಬ್ನಲ್ಲಿರುವ ಕಾಂಗ್ರೆಸ್ ಆಡಳಿತ ಪ್ರಧಾನಿ ನರೇಂದ್ರ ಮೋದಿ ರಾಜ್ಯ ಪ್ರವಾಸದ ಹಿಂದೆ ರಾಜಕಾರಣ ಮಾಡಿದೆ, ಕಾನೂನು ಸುವ್ಯವಸ್ಥೆ ಕಾಪಾಡಲು ವಿಫಲವಾಗಿದೆ.
ಪ್ರಧಾನಿಗಳ ಪ್ರವಾಸ ನಿರ್ವಹಣೆ ಮಾಡುವಲ್ಲಿಯೂ ವಿಫಲವಾಗಿದೆ. ಇತಿಹಾಸದಲ್ಲಿ ಹಿಂದೆ ಎಂದೂ ಹೀಗಾಗಿರಲಿಲ್ಲ. ಹಾಗಾಗಿ, ಪಂಜಾಬ್ ಕಾಂಗ್ರೆಸ್ ಸರ್ಕಾರವನ್ನು ವಜಾಗೊಳಿಸುವಂತೆ ಮನವಿ ಮಾಡಿದ್ದಾಗಿ ತಿಳಿಸಿದರು.
ಓದಿ: PM Security breach : ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದ ಪಂಜಾಬ್ ಸರ್ಕಾರ
ಪಂಜಾಬ್ ಘಟನೆ ಹಿಂದೆ ಸೋನಿಯಾಗಾಂಧಿ ಯೋಜನೆಗಳಿವೆ ಎನಿಸುತ್ತಿದೆ. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇಲ್ಲದಿದ್ದಾಗ ಪ್ರಜಾಪ್ರಭುತ್ವ ನಾಶ ಹಾಗೂ ಸಂವಿಧಾನಕ್ಕೆ ತೊಂದರೆ ಮಾಡುತ್ತದೆ. ಇಂದಿರಾ ಗಾಂಧಿ ಹಿಂದೆ ತುರ್ತು ಪರಿಸ್ಥಿತಿ ಹೇರಿದ್ದರು, ತನಗೆ ಸಮಸ್ಯೆ ಆಗುತ್ತದೆ ಎಂದಾಗ ಇಂತಹ ನಾಟಕವಾಡುತ್ತಾರೆ.
ಆತಂಕ ಒಡ್ಡುವುದು, ಅರಾಜಕತೆ ಸೃಷ್ಠಿ ಮಾಡುವುದನ್ನ ಮಾಡಲಿದೆ. ಈಗ ಆಗಿರುವುದು ಕೂಡ ಅದರ ಒಂದು ಭಾಗವೇ. ರೈತರ ಹೆಸರಿನಲ್ಲಿ ಕೆಲ ಖಲಿಸ್ತಾನಿಗಳನ್ನು ಇಟ್ಟುಕೊಂಡು ಕಾಂಗ್ರೆಸ್ ಈ ರೀತಿ ಮಾಡಿದೆ. ಪ್ರಧಾನಿ ಯಾವುದೇ ಪಕ್ಷಕ್ಕೆ ಸೀಮಿತವಲ್ಲ, ಇಡೀ ದೇಶಕ್ಕೆ ಪ್ರಧಾನಿ. ಭದ್ರತೆ ಕೊಡುವುದು ಅಲ್ಲಿನ ಸಿಎಂ, ಸರ್ಕಾರದ ಜವಾಬ್ದಾರಿ. ಆದರೆ, ಎಲ್ಲದರಲ್ಲಿಯೂ ಅವರು ವಿಫಲರಾಗಿದ್ದಾರೆ. ಹಾಗಾಗಿ, ಸರ್ಕಾರವನ್ನು ವಜಾಗೊಳಿಸಬೇಕು ಎಂದರು.
ಘಟನೆ ಕುರಿತು ಕೇಂದ್ರ ಸರ್ಕಾರ, ಸುಪ್ರೀಂಕೋರ್ಟ್, ರಾಷ್ಟ್ರಪತಿ ತನಿಖೆಗೆ ಆದೇಶಿಸಿದ್ದಾರೆ. ತನಿಖಾ ವರದಿ ಬರಲಿದೆ, ಸತ್ಯ ಹೊರ ಬರಲಿದೆ. ಅವರು ಮೋದಿ ಈ ರೀತಿ ನಾಟಕ ಮಾಡುತ್ತಿದ್ದಾರೆ ಎನ್ನುತ್ತಿದ್ದಾರೆ. ರಸ್ತೆಯಲ್ಲಿ ತಡೆಗಟ್ಟಿದ್ದು ಯಾಕೆ?, ರಾಜ್ಯ ಸರ್ಕಾರದ ಜವಾಬ್ದಾರಿ ಏನು?, ರಸ್ತೆ ತಡೆ ಇವರು ಮಾಡಿದ್ದಲ್ಲವೇ?, ಪ್ರಧಾನಿ ಎಲ್ಲೇ ಪ್ರವಾಸ ಮಾಡಿದರೂ ಅತಿ ಹೆಚ್ಚು ಭದ್ರತೆ ಇರಲಿದೆ. ಪ್ರಧಾನಿ ಪ್ರವಾಸ ಇರುವಾಗ ಒಂದು ಗಂಟೆ ಮೊದಲೇ ಜೀರೋ ಸಂಚಾರ ಮಾಡಬೇಕು, ರೈತರು ಪ್ರತಿಭಟನೆ ಮಾಡುತ್ತಾರೆ ಎಂದರೆ ಅಲ್ಲಿ ಗುಪ್ತಚರ ಇಲಾಖೆ ಇಲ್ಲವೇ, ಪೊಲೀಸರಿಲ್ಲವೇ ಎಂದು ಪ್ರಶ್ನಿಸಿದರು.
ಕೋವಿಡ್ ಜಾಸ್ತಿಯಾದರೆ ಕಾಂಗ್ರೆಸ್ ಕಾರಣ : ಪ್ರಜಾಪ್ರಭುತ್ವದಲ್ಲಿ ಎಲ್ಲರೂ ಹೋರಾಟ ಮಾಡಬಹುದು. ಆದರೆ, ಈಗ ಮೇಕೆದಾಟು ಯೋಜನೆಗೆ ಕಾಂಗ್ರೆಸ್ ನಡೆಸಲು ಹೊರಟಿರುವ ಪಾದಯಾತ್ರೆ ರಾಜಕೀಯ ಕಾರಣದ್ದಾಗಿದೆ. ಹಿಂದೆ ಐದು ವರ್ಷ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದರು. ನಂತರ ಒಂದೂವರೆ ವರ್ಷ ಸಮ್ಮಿಶ್ರ ಸರ್ಕಾರ ಇತ್ತು. ಯಾಕೆ ನಿಮ್ಮ ಕಾಲದಲ್ಲಿ ಈ ಪ್ರಯತ್ನ ಆಗಲಿಲ್ಲ, ಯೋಜನೆ ಮಾಡಲಿಲ್ಲ. ನಮ್ಮ ಸರ್ಕಾರ ಈಗ ಯೋಜನೆ ಅನುಷ್ಠಾನಕ್ಕೆ ಬದ್ಧವಾಗಿದೆ.
ಕಾನೂನು ತೊಡಕುಗಳನ್ನು ನಿವಾಸರಿಸಿಕೊಂಡು ಯೋಜನೆ ಜಾರಿ ಮಾಡುತ್ತೇವೆ. ಇದು ಬೆಂಗಳೂರಿಗೆ ನೀರು ಕೊಡಲು ಪಾದಯಾತ್ರೆ ಅಲ್ಲ, ಕಾಂಗ್ರೆಸ್ ನಾಯಕತ್ವದ ಮೇಲಾಟದಿಂದ ಆಗುತ್ತಿರುವ ಪಾದಯಾತ್ರೆ, ಈ ಹೋರಾಟದ ಹೆಸರಿನಲ್ಲಿ ರಾಜಕೀಯ ಮಾಡಲು ಆರಂಭಿಸಿದ್ದಾರೆ. ಡಿಕೆಶಿ ನಾಯಕನಾ? ಅಥವಾ ಸಿದ್ದರಾಮಯ್ಯ ನಾಯಕನಾ? ಎನ್ನುವ ಕುರಿತ ಹೋರಾಟ ಇದಾಗಿದ್ದು, ಪಕ್ಷದಲ್ಲಿ ನಾಯಕತ್ವ ಸ್ಥಾಪಿಸಲು ರಾಜಕೀಯ ನಾಟಕ ಮಾಡುತ್ತಿದ್ದಾರೆ ಎಂದು ಕಟೀಲ್ ಪಾದಯಾತ್ರೆಯನ್ನು ಟೀಕಿಸಿದರು.
ಓದಿ: PM Security Breach : ತನಿಖಾ ಸಮಿತಿಗಳು ತನಿಖೆ ತಾತ್ಕಾಲಿಕ ಸ್ಥಗಿತ, ದಾಖಲೆ ಸಂಗ್ರಹಕ್ಕೆ ಸೂಚನೆ
ಈಗ ಇಡೀ ದೇಶದಲ್ಲಿ ಕೊರೊನಾ ಇದೆ, ಕರ್ನಾಟಕದಲ್ಲಿ ಮಾತ್ರವಲ್ಲ ಎಲ್ಲಾ ಕಡೆ ಕ್ರಮಕ್ಕೆ ಮುಂದಾಗಿದ್ದಾರೆ. ರಾಜ್ಯದ್ಲಲಿಯೂ ವೀಕೆಂಡ್ ಕರ್ಫ್ಯೂ ಸೇರಿ ಕೆಲ ಕಠಿಣ ಕ್ರಮವನ್ನು ಸರ್ಕಾರ ತೆಗೆದುಕೊಂಡಿದೆ.
ನಾವೆಲ್ಲಾ ಅದಕ್ಕೆ ಸ್ಪಂದಿಸಬೇಕು, ರಾಜಕೀಯ, ಅಧಿಕಾರಕ್ಕಿಂತ ಪ್ರಾಮುಖ್ಯತೆ ಜನರ ಪ್ರಾಣ ಉಳಿಸುವುದಾಗಬೇಕು, ಕೊರೊನಾ ನಿಯಂತ್ರಣ ನಮ್ಮ ಮೊದಲ ಆದ್ಯತೆ ಆಗಬೇಕು. ಸರ್ಕಾರದ ನಿಯಮಕ್ಕೆ ಬದ್ದರಾಗಿ ಎಲ್ಲರೂ ನಡೆದುಕೊಳ್ಳಬೇಕು ಎಂದು ಕಾಂಗ್ರೆಸ್‌ಗೆ ಸಲಹೆ ನೀಡಿದರು.
ಒಂದು ವೇಳೆ ಕಠಿಣ ನಿಯಮ ಮೀರಿಯೂ ಕಾಂಗ್ರೆಸ್ ಪಾದಯಾತ್ರೆ ನಡೆಸಿದರೆ ಅವರನ್ನು ಬಂಧಿಸಬೇಕು. ಕಾನೂನು ಕ್ರಮ ತೆಗೆದುಕೊಳ್ಳಬೇಕು ಎನ್ನುವ ಕುರಿತು ಮುಖ್ಯಮಂತ್ರಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ಕೊರೊನಾ ಮುಂದೆ ಹೆಚ್ಚಾದರೆ ನಿಮ್ಮ ಪ್ರತಿಭಟನೆ ಕಾರಣಕ್ಕಾಗಿಯೇ ಜನರು ಸಾಯುತ್ತಾರೆ ಎಂದು ಕಾಂಗ್ರೆಸ್‌ಗೆ ಕಟೀಲ್ ಎಚ್ಚರಿಕೆ ನೀಡಿದರು.