ಬೆಂಗಳೂರು: ಆರ್ಥಿಕ ಸಂಕಷ್ಟದ ನಡುವೆಯೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸಿದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಭಿನಂದಿಸಿದ್ದಾರೆ.
ರಾಜ್ಯದ ರೈತ ಸಮುದಾಯಕ್ಕೆ ಅದರಲ್ಲೂ ವಿಶೇಷವಾಗಿ ಬಯಲು ಸೀಮೆ ಭಾಗದಲ್ಲಿ ಪ್ರಮುಖವಾಗಿ ಮೆಕ್ಕೆಜೋಳ ಬೆಳೆಯುವ ರಾಜ್ಯದ ಸುಮಾರು 10 ಲಕ್ಷ ರೈತರಿಗೆ 500 ಕೋಟಿ ರೂ. ವೆಚ್ಚದಲ್ಲಿ ತಲಾ 5,000 ರೂ. ಪರಿಹಾರ ಧನ ಘೋಷಿಸಿರುವುದು ರಾಜ್ಯದ ಸಣ್ಣ, ಬಡ ರೈತರ ಪಾಲಿಗೆ ಆಶಾಕಿರಣವಾಗಿದೆ ಎಂದರು.
ಹಣ್ಣು ಮತ್ತು ತರಕಾರಿ ಬೆಳೆಗಾರರಿಗೆ 137 ಕೋಟಿ ರೂ. ವಿಶೇಷ ಪ್ಯಾಕೇಜ್ ನೀಡಿದ್ದಾರೆ. ಪಪ್ಪಾಯ, ಟೇಬಲ್ ದ್ರಾಕ್ಷಿ, ಅಂಜೂರ, ಅನಾನಸ್, ಕಲ್ಲಂಗಡಿ, ಖರ್ಜೂರ ಮತ್ತು ಬೋರೆ ಹಣ್ಣು ಕೃಷಿಕರಿಗೆ ಜೊತೆಗೆ ಟೊಮ್ಯಾಟೊ, ಹಸಿಮೆಣಸಿನಕಾಯಿ, ಹೂಕೋಸು, ಎಲೆಕೋಸು, ಸಿಹಿ ಕುಂಬಳ ಬೂದುಕುಂಬಳಕಾಯಿ, ಕ್ಯಾರೆಟ್, ಈರುಳ್ಳಿ ದಪ್ಪ ಮೆಣಸಿನಕಾಯಿ, ಸೊಪ್ಪುಗಳು, ಹೀರೇಕಾಯಿ ಮತ್ತು ತೊಂಡೆಕಾಯಿ ಬೆಳೆಗಾರರಿಗೆ ಪ್ರತಿ ಹೆಕ್ಟೇರ್ಗೆ 15,000 ರೂ. ಪರಿಹಾರ ನೀಡುತ್ತಿರುವುದು ಶ್ಲಾಘನೀಯ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೋವಿಡ್-19 ವಿರುದ್ಧದ ಹೋರಾಟ ಮುಂಚೂಣಿಯಲ್ಲಿರುವ ರಾಜ್ಯದ 40,250 ಆಶಾ ಕಾರ್ಯಕರ್ತೆಯರಿಗೆ ತಲಾ 3,000 ರೂ. ಪ್ರೋತ್ಸಾಹ ಧನ ನೀಡಿರುವುದು ಅವರಲ್ಲಿ ಹೊಸ ಹುರುಪು ಮೂಡಿಸಿದೆ. ಕಳೆದ ಮೂರು ತಿಂಗಳಿಂದ ಉದ್ಯೋಗವಿಲ್ಲದೆ ಒವರ್ ಲೂಮ್ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರತಿ ಕಾರ್ಮಿಕರಿಗೆ ತಲಾ 2,000 ರೂ. ಪರಿಹಾರ ನೀಡುತ್ತಿರುವುದು ಅವರ ಬಾಳಿನಲ್ಲಿ ನೆಮ್ಮದಿ ಮೂಡಿಸಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.