ಬೆಂಗಳೂರು: ಪಿಎಸ್ಐ ಪರೀಕ್ಷಾ ಅಕ್ರಮದ ಹಿನ್ನೆಲೆಯಲ್ಲಿ ನೇಮಕಾತಿಗೆ ನಡೆಸಿದ್ದ ಲಿಖಿತ ಪರೀಕ್ಷೆಯನ್ನು ರದ್ದುಪಡಿಸಿ, ಮರು ಪರೀಕ್ಷೆ ನಡೆಸಲು ಸರ್ಕಾರ ಹೊರಡಿಸಿರುವ ಆದೇಶ ರದ್ದು ಕೋರಿ ಸಲ್ಲಿಸಿರುವ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ) ರಾಜ್ಯ ಸರ್ಕಾರಕ್ಕೆ ಇದೇ ಮೇ 24ರವರೆಗೆ ಕಾಲಾವಕಾಶ ನೀಡಿದೆ.
ಮರು ಪರೀಕ್ಷೆ ನಡೆಸದಂತೆ ಹಾಗೂ ಅಕ್ರಮ ಎಸಗದ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡುವಂತೆ ಸರ್ಕಾರಕ್ಕೆ ನಿರ್ದೇಶನ ಕೋರಿ ಎಲ್.ಎನ್.ಪವಿತ್ರಾ ಹಾಗೂ ಇತರೆ 27 ಅಭ್ಯರ್ಥಿಗಳು ಸಲ್ಲಿಸಿರುವ ಅರ್ಜಿಯನ್ನು ಬುಧವಾರ ಕೆಎಟಿ ವಿಚಾರಣೆ ನಡೆಸಿತು. ಸರ್ಕಾರದ ಪರ ವಕೀಲರು, ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡುವಂತೆ ಕೋರಿದರು. ಇದೇ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಡಿ.ಆರ್.ರವಿಶಂಕರ್ ವಾದ ಮಂಡಿಸಿ, ಮರುಪರೀಕ್ಷೆ ನಡೆಸಲು ಅಧಿಸೂಚನೆ ಹೊರಡಿಸದಂತೆ ಸರ್ಕಾರವನ್ನು ನಿರ್ಬಂಧಿಸಲು ಮಧ್ಯಂತರ ಆದೇಶ ಹೊರಡಿಸಬೇಕು ಎಂದು ಮನವಿ ಮಾಡಿದರು.
ಅರ್ಜಿದಾರರ ಪರ ವಕೀಲರ ಕೋರಿಕೆಗೆ ಆಕ್ಷೇಪಿಸಿದ ಸರ್ಕಾರದ ಪರ ವಕೀಲರು, ಮರು ಪರೀಕ್ಷೆ ನಡೆಸಲು ಇನ್ನೂ ಸಾಕಷ್ಟು ಸಮಯ ಬೇಕಿದೆ. ಆದ್ದರಿಂದ, ಸದ್ಯಕ್ಕೆ ಮಧ್ಯಂತರ ಆದೇಶ ನೀಡುವ ಅಗತ್ಯವಿಲ್ಲ ಎಂದರು. ವಾದ ಪರಿಗಣಿಸಿದ ಪೀಠ, ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸರ್ಕಾರಕ್ಕೆ ಕಾಲಾವಕಾಶ ನೀಡಿ ವಿಚಾರಣೆಯನ್ನು ಮೇ. 24ಕ್ಕೆ ಮುಂದೂಡಿತು.
ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆ ನಡೆಸುತ್ತಿದೆ. ಸಿಐಡಿ ಮಧ್ಯಂತರ ತನಿಖಾ ವರದಿಯಲ್ಲಿ ನೇಮಕಾತಿ ಅಕ್ರಮದ ಕುರಿತು ಪ್ರಸ್ತಾಪಿಸಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಪಿಎಸ್ಐ ನೇಮಕಾತಿ ಸಂಬಂಧ ಮರು ಪರೀಕ್ಷೆಗೆ ಮುಂದಾಗಿದ್ದು, ಇದನ್ನು ಕೆಲ ಉದ್ಯೋಗಾಕಾಂಕ್ಷಿ ಅಭ್ಯರ್ಥಿಗಳು ಆಕ್ಷೇಪಿಸಿದ್ದಾರೆ. ಕಳಂಕಿತ ಹಾಗೂ ಕಳಂಕರಹಿತ ಅಭ್ಯರ್ಥಿಗಳನ್ನು ಪ್ರತ್ಯೇಕಿಸಿ, ಕಳಂಕರಹಿತರಿಗೆ ನೇಮಕಾತಿ ಆದೇಶ ನೀಡಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.
ಇದನ್ನೂ ಓದಿ: ಮ್ಯಾಜಿಸ್ಟ್ರೇಟ್ ದೂರು ವಿಚಾರಣೆಗೆ ಪರಿಗಣಿಸಿದಾಗ ಪೊಲೀಸರು ತನಿಖೆ ನಿರಾಕರಿಸುವಂತಿಲ್ಲ: ಹೈಕೋರ್ಟ್