ಬೆಂಗಳೂರು: ಕಸ್ತೂರಿ ರಂಗನ್ ವರದಿಯನ್ನು ಯಥಾವತ್ ಅನುಷ್ಠಾನ ಮಾಡುವ ವಿಚಾರದಲ್ಲಿ ರಾಜ್ಯ ಸರ್ಕಾರ ಆತುರದ ನಿರ್ಧಾರ ಕೈಗೊಳ್ಳಬಾರದು ಎಂದು ಕಾರ್ಕಳ ಶಾಸಕ ವಿ ಸುನೀಲ್ ಕುಮಾರ್ ಆಗ್ರಹಿಸಿದ್ದಾರೆ.
ಕಸ್ತೂರಿ ರಂಗನ್ ವರದಿಯನ್ನು ಯಥಾವತ್ ಅನುಷ್ಠಾನ ಮಾಡಲಾಗುವುದು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ನೀಡಿರುವ ಹೇಳಿಕೆ ಕಳವಳಕ್ಕೆ ಕಾರಣವಾಗಿದೆ. ಸರ್ಕಾರ ಈ ವಿಚಾರದಲ್ಲಿ ಆತುರದ ನಿರ್ಣಯ ಕೈಗೊಳ್ಳಬಾರದು. ಈ ವರದಿ ಯಥಾವತ್ ಜಾರಿಯಿಂದ ಪಶ್ಚಿಮಘಟ್ಟ ವ್ಯಾಪ್ತಿಯ ಜನಜೀವನಕ್ಕೆ ಸಮಸ್ಯೆಯಾಗುತ್ತದೆ. ಅರಣ್ಯಾಶ್ರಿತ ಜನರ ಬದುಕು ಹೈರಾಣಾಗುತ್ತದೆ. ಹೀಗಾಗಿ ಕಸ್ತೂರಿ ರಂಗನ್ ವರದಿ ಯಥಾವತ್ ಜಾರಿ ಅವೈಜ್ಞಾನಿಕವಷ್ಟೇ ಅಲ್ಲ, ಅಮಾನವೀಯವೂ ಹೌದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ವರದಿ ಜಾರಿ ಬಗ್ಗೆ ಕೇಂದ್ರಕ್ಕೆ ವರದಿ ಕಳುಹಿಸುವ ಮುನ್ನ ಇನ್ನಷ್ಟು ಚರ್ಚೆಯ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಯೋಜನಾ ವ್ಯಾಪ್ತಿಯಲ್ಲಿ ಬರುವ ಎಲ್ಲ ಶಾಸಕರ ಸಭೆ ಕರೆದು ಚರ್ಚಿಸಿ ನಿರ್ಣಯ ತೆಗೆದುಕೊಳ್ಳಬೇಕು ಎಂದು ಪತ್ರಿಕಾ ಹೇಳಿಕೆ ಮೂಲಕ ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ ಈ ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗಲೂ ಪಶ್ಚಿಮಘಟ್ಟ ಪ್ರದೇಶದ ಆರೇಳು ಜಿಲ್ಲೆಯ ಶಾಸಕರು ಈ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದೆವು. ಈ ಹಿನ್ನೆಲೆ ವರದಿ ಜಾರಿಗೆ ವಿರೋಧ ವ್ಯಕ್ತಪಡಿಸಲು ಅಂದಿನ ಸರ್ಕಾರ ತಾತ್ವಿಕ ನಿರ್ಧಾರ ತೆಗೆದುಕೊಂಡಿತು. ಆದರೆ ಈಗಿರುವ ಕಾಂಗ್ರೆಸ್ ಸರ್ಕಾರ ವರದಿ ಜಾರಿ ಬಗ್ಗೆ ಸಕಾರಾತ್ಮಕ ನಿಲುವು ತಳೆಯುವ ಮೂಲಕ ಈ ಭಾಗದ ಜನರ ನೆತ್ತಿಯ ಮೇಲೆ ತೂಗುಗತ್ತಿ ಇಟ್ಟಿದೆ ಎಂದು ಸುನೀಲ್ ಕುಮಾರ್ ಕಳವಳ ವ್ಯಕ್ತಪಡಿಸಿದ್ದಾರೆ.
ಈ ವಿಚಾರಕ್ಕೆ ಸಂಬಂಧಪಟ್ಟಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೂ ಜನತೆಯ ಪರವಾಗಿ ಮನವಿ ಮಾಡುತ್ತಿದ್ದು ಜನ, ಅರಣ್ಯ, ಬದುಕು ಎಲ್ಲವೂ ಒಂದಕ್ಕೊಂದು ಕೊಂಡಿಯಾಗಿದೆ. ಜನರನ್ನು ದೂರವಿಟ್ಟು ನಡೆಸುವ ಸಂರಕ್ಷಣೆ ಎಲ್ಲಿಯೂ ಸಫಲವಾಗಿಲ್ಲ. ಹಾಗಾಗಿ ಜನರ ಅಭಿಪ್ರಾಯ ಪಡೆದು ನಂತರವೇ ಮುಂದುವರೆಯಬೇಕು ಎಂದು ಮನವಿ ಮಾಡಿದ್ದಾರೆ.
ಕಸ್ತೂರಿ ರಂಗನ್ ವರದಿ ಮಾಹಿತಿ: ಪಶ್ಚಿಮ ಘಟ್ಟದ ಜೀವ ವೈವಿಧ್ಯ ರಕ್ಷಣೆ ಮತ್ತು ಸಂರಕ್ಷಣೆ ಉದ್ದೇಶದಿಂದ ಕೇಂದ್ರ ಪರಿಸರ, ಅರಣ್ಯ ಸಚಿವಾಲಯವು ಕಸ್ತೂರಿ ರಂಗನ್ ಅಧ್ಯಕ್ಷತೆಯಲ್ಲಿ ವರದಿ ತಯಾರಿಸಿತ್ತು. ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಯಲ್ಲಿ ಕರ್ನಾಟಕದ ಹತ್ತು ಜಿಲ್ಲೆಗಳ 1,597 ಹಳ್ಳಿಗಳು ಒಳಪಡುತ್ತವೆ.
ಈಗಿರುವ ಅರಣ್ಯ ಸಮಸ್ಯೆಗಳೇ ಸಾಕಾಗಿದೆ. ಮುಂದಿನ ಪೀಳಿಗೆಗೆ ಅರಣ್ಯ ಸಂಪತ್ತನ್ನು ನಾವು ಇಟ್ಟು ಹೋಗಬೇಕು ನಿಜ. ಆದರೆ ಇಲ್ಲಿನ ಜನರು ಸಹ ಬದುಕಬೇಕು. ತೂಗುಗತ್ತಿಯನ್ನು ತಲೆಮೇಲೆ ಇಟ್ಟುಕೊಂಡು ಜೀವನ ನಡೆಸಲು ಸಾಧ್ಯವಿಲ್ಲ. ಯಥಾಸ್ಥಿತಿಯಲ್ಲಿ ಕಸ್ತೂರಿ ರಂಗನ್ ವರದಿಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.
ಕಸ್ತೂರಿ ರಂಗನ್ ಮತ್ತು ಶರಾವತಿ ಅಭಯಾರಣ್ಯ ಪ್ರದೇಶದ ಒಟ್ಟು ಕ್ಷೇತ್ರ ಹಾಗೂ ಈ ಪ್ರದೇಶಕ್ಕೆ ಹೆಚ್ಚುವರಿಯಾಗಿ ಅತೀ ಸೂಕ್ಷ್ಮ ಪ್ರದೇಶ ಎಂದು ಗುರುತಿಸಲ್ಪಡುವುದು. ಇದರಿಂದ ಅಭಿವೃದ್ಧಿಗೂ ಸಾಕಷ್ಟು ಹಿನ್ನಡೆ ಆಗುವ ಕಾರಣ ಸರ್ಕಾರ ಇದರ ಬಗ್ಗೆ ಇನ್ನೊಮ್ಮೆ ಪರಿಶೀಲನೆ ಮಾಡಬೇಕು ಎನ್ನುವುದೇ 10 ಜಿಲ್ಲೆಯ ಜನರ ಆಗ್ರಹವಾಗಿದೆ ಎಂದು ಮಾಜಿ ಸಚಿವ ಸುನೀಲ್ ಕುಮಾರ್ ವಿವರಿಸಿದ್ದಾರೆ.
ಇದನ್ನೂಓದಿ: Video of Elephants: ಬೆಳ್ಳಂಬೆಳಗ್ಗೆ ಶ್ರೀ ಹೊಳೆಆಂಜನೇಯ ಸ್ವಾಮಿ ದರ್ಶನ ಪಡೆದ ಗಜಪಡೆ