ಬೆಂಗಳೂರು: ಕಸಾಪ ಸದಸ್ಯರಾಗಲು 10ನೇ ತರಗತಿ ತೇರ್ಗಡೆಯಾಗಿರಬೇಕು. ಇಲ್ಲದಿದ್ದರೆ ಪರಿಷತ್ತು ನಡೆಸುವ ಪರೀಕ್ಷೆಯನ್ನು ಎದುರಿಸಬೇಕು. ಹೊರನಾಡು, ಹೊರದೇಶದಲ್ಲಿರುವ ಕನ್ನಡಿಗರಿಗೆ ಈ ಶೈಕ್ಷಣಿಕ ಅರ್ಹತೆ ಹಾಗೂ ಪರೀಕ್ಷೆ ಅನ್ವಯವಾಗದು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಹೊಸ ಬೈಲಾದ ಕರಡು ಪ್ರತಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದು ಬಂದಿದೆ.
ನಿವೃತ್ತ ನ್ಯಾಯಮೂರ್ತಿ ನಾಗರಾಜ್ ನೇತೃತ್ವದಲ್ಲಿ ರಚಿಸಲಾದ ಸಮಿತಿ ಕರಡು ಸಿದ್ಧಪಡಿಸಿದೆ. ಸಮಿತಿಯಲ್ಲಿ ಪ್ರತಿನಿಧಿಗಳ ಸಂಖ್ಯೆ 81ಕ್ಕೆ ಹೆಚ್ಚಳ, ಅಧ್ಯಕ್ಷ ಸ್ಥಾನದ ಸ್ಪರ್ಧೆಗೆ ಠೇವಣಿ ಮೊತ್ತ 50 ಸಾವಿರಕ್ಕೆ ಏರಿಕೆ ಸೇರಿದಂತೆ ಹಲವು ತಿದ್ದುಪಡಿಗಳನ್ನು ಶಿಫಾರಸು ಮಾಡಲಾಗಿದೆ. ಪರಿಷತ್ತಿನ ಸದಸ್ಯರಾಗಲು ಕನ್ನಡ ಓದು ಬರಹ ಬರಬೇಕೆಂಬುದು ಹಿಂದಿನಿಂದಲೂ ಇದೆ. ಈಗ ಹೊಸದಾಗಿ ಶೈಕ್ಷಣಿಕ ಅರ್ಹತೆ ಹಾಗೂ ಪರೀಕ್ಷೆಯನ್ನು ಸೇರ್ಪಡೆ ಮಾಡಲಾಗಿದೆ.
ಗಡಿ ರಾಜ್ಯ, ಹೊರ ರಾಜ್ಯ, ಕೇಂದ್ರಾಡಳಿತ ಪ್ರದೇಶ, ಹೊರದೇಶದ ಕನ್ನಡಿಗರಿಗೆ ಸದಸ್ಯರಾಗಲು ಷರತ್ತಿನಿಂದ ವಿನಾಯಿತಿ ನೀಡಲಾಗಿದೆ. ಪರಿಷತ್ತಿನ ಸದಸ್ಯರು, ಸದಸ್ಯ ಸಂಸ್ಥೆಗಳು ಅನುಚಿತ ನಡವಳಿಕೆ ಇತ್ಯಾದಿ ಆರೋಪಕ್ಕೆ ಒಳಗಾದರೆ, ಮೇಲ್ನೋಟಕ್ಕೆ ಸರಿ ಎನಿಸಿದರೆ ಕೇಂದ್ರ ಘಟಕದ ಅಧ್ಯಕ್ಷರು ಅಂತಹವರನ್ನು ನೇರವಾಗಿ ಅಮಾನತು ಮಾಡಬಹುದು. ಇದಕ್ಕೆ ಕಾರ್ಯಕಾರಿ ಸಮಿತಿಯ ಒಪ್ಪಿಗೆ ಬೇಕಿಲ್ಲ ಎಂದು ಹೇಳಲಾಗಿದೆ. ತಾತ್ಕಾಲಿಕವಾಗಿ ಜಿಲ್ಲೆ ಸೇರಿದಂತೆ ವಿವಿಧ ಘಟಕಗಳಿಗೆ ಅಧ್ಯಕ್ಷರ ನೇಮಕಾತಿ ಅಧಿಕಾರವನ್ನು ಕೇಂದ್ರ ಘಟಕದ ಅಧ್ಯಕ್ಷರಿಗೆ ನೀಡುವ ಬಗ್ಗೆ ಕರಡು ಪ್ರತಿಯಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: ಹಿಜಾಬ್ ವಿಚಾರಣೆ ನಾಳೆ ಮಧ್ಯಾಹ್ನಕ್ಕೆ ಮುಂದೂಡಿದ ಹೈಕೋರ್ಟ್
ಸಮಿತಿಯ ವರದಿ ಬಗ್ಗೆ ಚರ್ಚಿಸಿ ಕ್ರಮ: ಬೈಲಾ ತಿದ್ದುಪಡಿಗೆ ಸಂಬಂಧಿಸಿದಂತೆ ಕಾನೂನು ತಜ್ಞರನ್ನು ಒಳಗೊಂಡ ಸಮಿತಿ ರಚಿಸಲಾಗಿತ್ತು. ಸಮಿತಿ ನೀಡಿದ ಸಲಹೆಗಳನ್ನೆಲ್ಲ ಅನುಷ್ಠಾನ ಮಾಡಬೇಕೆಂದೇನು ಇಲ್ಲ. ಈ ಬಗ್ಗೆ ಕಾರ್ಯಕಾರಿ ಸಮಿತಿಯಲ್ಲಿ ಚರ್ಚೆ ನಡೆಸಿ, ನಿಬಂಧನೆಗೆ ಕಾನೂನಿನ ಅಡಿ ತಿದ್ದುಪಡಿ ತರಲಾಗುವುದು. 1915 ರಲ್ಲಿ ರಚನೆಯಾದ ನಿಬಂಧನೆಯಲ್ಲಿಯೇ ಕನ್ನಡ ಓದು ಬರಹ ಬರಬೇಕೆಂದು ತಿಳಿಸಲಾಗಿದೆ.
ಚುನಾವಣೆಗೆ ಹೋದಾಗ ಕೆಲವರಿಗೆ ಓದು, ಬರಹ ಬರದಿದ್ದನ್ನು ನೋಡಿದ್ದೇನೆ. ಸದಸ್ಯತ್ವ ಪಡೆದಿದ್ದವರಲ್ಲಿ ಕೆಲವರಿಗೆ ಸಹಿ ಹಾಕಲು ಬರುತ್ತಿರಲಿಲ್ಲ. ಅಂತಹವರು ಹೆಬ್ಬೆಟ್ಟು ಒತ್ತುತ್ತಿದ್ದರು. ಹೀಗಾಗಿ ಶಿಕ್ಷಣ ಮತ್ತು ಪರೀಕ್ಷೆಯ ಸಲಹೆ ಬಂದಿದೆ ಎಂದು ಪರಿಷತ್ತಿನ ಬೈಲಾ ತಿದ್ದುಪಡಿ ಕುರಿತಾಗಿ ಅಧ್ಯಕ್ಷ ಮಹೇಶ ಜೋಶಿ ತಿಳಿಸಿದ್ದಾರೆ.
ಇದಕ್ಕೆ ಸಂಬಂಧಿಸಿದ೦ತೆ ರಚಿಸಲಾದ ಪ್ರಸ್ತಾವಿತ ಕರಡಿನಲ್ಲಿ ನಮೂದಿಸಲಾಗಿರುವಂತೆ ಗಡಿ ನಾಡಿನ ರಾಜ್ಯಗಳಲ್ಲಿ ಶೇ. 7ರಿಂದ ಶೇ.10 ರಷ್ಟು ಮಂದಿಗೆ ಕನ್ನಡ ಓದಲು, ಬರೆಯಲು ಬರುವುದಿಲ್ಲ. ಭಾಷೆ ಮತ್ತು ಸಂಸ್ಕೃತಿ ಅಭಿವೃದ್ಧಿ ಹೊಂದಲು ತಿದ್ದುಪಡಿ ಇವಾಗಿವೆ. ಹೈಕೋರ್ಟ್ ಕನ್ನಡ ಕಲಿಕೆ ಅಗತ್ಯ. 7ನೇ ತರಗತಿ ಉತ್ತೀರ್ಣರಾದವರಿಗೂ ಸದಸ್ಯತ್ವ ನೀಡಲು ಮರಳಿ ನಿರ್ಧರಿಸಲಾಗಿದೆ. ಕನ್ನಡ ಓದಲು ಬರೆಯಲು ಬರದವರಿಗೆ ಸರಳ ಕನ್ನಡ ಕಲಿಸಿ, ಪರೀಕ್ಷೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.