ಬೆಂಗಳೂರು: ಸಾವಿರಾರು ಜನರ ಪ್ರಾಣಕ್ಕೆ ಅಪಾಯವಾಗಿರುವ ಕೊರೊನಾ ವೈರಸ್ ಕುರಿತಂತೆ ರಾಜ್ಯ ಸರ್ಕಾರ ಈಗಾಗಲೇ ವಿಮಾನ ಹಾಗೂ ಬಸ್ ನಿಲ್ದಾಣಗಳು ಸೇರಿದಂತೆ ಸಾರ್ವಜನಿಕ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದಕ್ಕೆ ಪೂರಕವೆಂಬಂತೆ ರಾಜ್ಯ ಕಾರಾಗೃಹ ಹಾಗೂ ಸುಧಾರಣಾ ಇಲಾಖೆಯು ರಾಜ್ಯದ ಎಲ್ಲಾ ಕೇಂದ್ರ ಹಾಗೂ ಜಿಲ್ಲಾ ಕಾರಾಗೃಹಗಳಲ್ಲಿರುವ ಕೈದಿಗಳಿಗೆ ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಲು ನಿರ್ಧರಿಸಿದೆ.
ಇಲಾಖೆಯ ಎಡಿಜಿಪಿ ಅಲೋಕ್ ಕುಮಾರ್ ನೇತೃತ್ವದಲ್ಲಿ ಉನ್ನತ ಮಟ್ಟದ ಆಧಿಕಾರಿಗಳಿಗೆ ಸಭೆ ನಡೆಸಿ ಈ ಬಗ್ಗೆ ಆದೇಶ ಹೊರಡಿಸಿದ್ದಾರೆ. ರಾಜ್ಯದಲ್ಲಿರುವ 8 ಕೇಂದ್ರ ಕಾರಾಗೃಹಗಳಾದ ಬೆಂಗಳೂರು, ಬಳ್ಳಾರಿ, ಬೆಳಗಾವಿ, ಮೈಸೂರು, ಶಿವಮೊಗ್ಗ, ಬಿಜಾಪುರ, ಧಾರವಾಡ ಹಾಗೂ ಕಲಬುರಗಿ, ಜಿಲ್ಲಾ ಮಟ್ಟದಲ್ಲಿ 21, ತಾಲೂಕು ಮಟ್ಟದಲ್ಲಿ 28 ಸೇರಿದಂತೆ ಒಟ್ಟು 58 ಕಾರಾಗೃಹಗಳ ಪೈಕಿ 15 ಸಾವಿರ ಕೈದಿಗಳಿದ್ದಾರೆ. ಈ ಪೈಕಿ ಬೆಂಗಳೂರು ಸೆಂಟ್ರಲ್ ಜೈಲಿನಲ್ಲಿ 4,529 ಕೈದಿಗಳಿದ್ದಾರೆ.
ವಿದೇಶಿಯರು ಸೇರಿದಂತೆ ದೇಶದಲ್ಲಿ 28 ಮಂದಿಗೆ ಕೊರೊನಾ ವೈರಸ್ ತಗುಲಿರುವುದು ದೃಢವಾಗಿದೆ ಎಂದು ಖುದ್ದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ತಿಳಿಸಿದ್ದಾರೆ. ರಾಜ್ಯದಲ್ಲಿಯೂ ಸಹ ಈ ವೈರಸ್ ಬಗ್ಗೆ ಆತಂಕಪಡಬೇಕಾದ ಅವಶ್ಯಕತೆ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಹೀಗಿದ್ದರೂ ಮುನ್ನೆಚ್ಚರಿಕಾ ಕ್ರಮವಾಗಿ ವಿದೇಶಗಳಿಂದ ಬಂದ ಪ್ರಯಾಣಿಕರನ್ನು ತಪಾಸಣೆ ಮಾಡಲಾಗುತ್ತಿದೆ.
ಕೈದಿಗಳ ಭೇಟಿಗೆ ಪ್ರತಿನಿತ್ಯ ಆಗಮಿಸುವ ಪೋಷಕರಿಗೆ ಹಾಗೂ ಅವರ ಸಂಬಂಧಿಕರಿಗೆ ವಿಸಿಟರ್ ರೂಂ ಪ್ರವೇಶಿಸುವ ಮುನ್ನ ಔಷಧಿ ಸಿಂಪಡಿಸಲು ಕ್ರಮ ಕೈಗೊಳ್ಳಲಾಗುವುದು. ಸಜಾ ಬಂಧಿಗಳಿಗೆ ಆರೋಗ್ಯದಲ್ಲಿ ವ್ಯತ್ಯಯ ಬಂದರೆ ಕೂಡಲೇ ಜೈಲಿನ ವೈದ್ಯರು ಸೂಕ್ತ ವೈದ್ಯಕೀಯ ತಪಾಸಣೆ ಕೈಗೊಳ್ಳುತ್ತಾರೆ. ಅಗತ್ಯ ಎಂದು ಕಂಡು ಬಂದರೆ ಮಾಸ್ಕ್ಗಳನ್ನು ನೀಡಲು ಕ್ರಮ ಕೈಗೊಳ್ಳಲು ಮುಂದಾಗುವುದು. ಶೌಚಾಲಯ ಹಾಗೂ ಇನ್ನಿತರ ಶುಚಿ ಕಾರ್ಯಗಳನ್ನು ಮಾಡುವಾಗ ಸ್ವಚ್ಚತೆ ಕಾಪಾಡಬೇಕು ಎಂದು ಬಂಧಿಖಾನೆ ಇಲಾಖೆ ಎಡಿಜಿಪಿ ಅಲೋಕ್ ಮೋಹನ್ ತಿಳಿಸಿದ್ದಾರೆ.