ಬೆಂಗಳೂರು : ಸಿಎಂ ಬೊಮ್ಮಾಯಿ ಸರ್ಕಾರ ಇಂದಿನಿಂದ ಮೊದಲ ಅಧಿವೇಶನ ಎದುರಿಸುತ್ತಿದೆ. ಇಂದಿನ ವಿಧಾನಸಭೆ ಕಲಾಪ ಅಗಲಿದ ಗಣ್ಯರ ಸಂತಾಪಕ್ಕಷ್ಟೇ ಸೀಮಿತವಾಯಿತು.
ಮಳೆಗಾಲ ಅಧಿವೇಶನದ ಅಖಾಡ ಸಜ್ಜಾಗಿದೆ. 10 ದಿನಗಳ ಕಾಲ ನಡೆಯುವ ಅಧಿವೇಶನದ ಮೊದಲ ದಿನದ ಕಲಾಪ ಸಂತಾಪ ಸೂಚನೆಗೆ ಮಾತ್ರ ಸೀಮಿತವಾಯಿತು. ಅಗಲಿದ 31 ಗಣ್ಯರಿಗೆ ಸದನ ಸಂತಾಪ ಸೂಚಿಸಿತು. ಸ್ಪೀಕರ್ ಕಾಗೇರಿ, ಸಿಎಂ ಬೊಮ್ಮಾಯಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಸಿಎಂ ಯಡಿಯೂರಪ್ಪ, ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ಶಾಸಕರು ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಿದರು. ಈ ಮೂಲಕ ಮೊದಲ ದಿನದ ಕಲಾಪ ಯಾವುದೇ ಗದ್ದಲ, ಕೋಲಾಹಲವಿಲ್ಲದೆ ಸಮಾಪ್ತಿಯಾಗಿದೆ.
ಕೊನೆಯ ಸಾಲಿನಲ್ಲಿ ಯಡಿಯೂರಪ್ಪ ಮತ್ತಿತರರು : ಯಡಿಯೂರಪ್ಪ ಸೇರಿ ಮಾಜಿ ಸಿಎಂ ಹಾಗೂ ಹಿಂದಿನ ಸರ್ಕಾರದಲ್ಲಿ ಸಚಿವರಾಗಿದ್ದ ಜಗದೀಶ್ ಶೆಟ್ಟರ್ಗೆ ಯಾವ ಸಾಲಿನಲ್ಲಿ ಆಸನ ನೀಡಲಾಗುತ್ತದೆ ಎಂಬ ಬಗ್ಗೆ ಎಲ್ಲರ ಚಿತ್ತ ನೆಟ್ಟಿತ್ತು. ಅದರಂತೆ ಸದನದ ಕೊನೆ ಸಾಲಿನ ವಿಪ್ ಪಕ್ಕದ ಆಸನದಲ್ಲಿ ಮಾಜಿ ಸಿಎಂ ಯಡಿಯೂರಪ್ಪಗೆ ಆಸನ ಹಂಚಿಕೆ ಮಾಡಲಾಗಿದೆ. ಇತ್ತ ಮಾಜಿ ಸಚಿವ ಜಗದೀಶ್ ಶೆಟ್ಟರ್ ಹಾಗೂ ಮಾಜಿ ಸಚಿವ ಸುರೇಶ್ ಕುಮಾರ್ ಅವರಿಗೆ ಕೊನೆ ಸಾಲಿನಲ್ಲೇ ಆಸನ ವ್ಯವಸ್ಥೆ ನೀಡಲಾಗಿದೆ.
ಯಡಿಯೂರಪ್ಪ ಅವರು ಕೊನೆ ಸಾಲಿನಲ್ಲಿ ತಮಗೆ ಆಸನ ನೀಡುವಂತೆ ಸ್ಪೀಕರ್ಗೆ ಮನವಿ ಮಾಡಿದ್ದರು. ಅದರಂತೆ ಸ್ಪೀಕರ್ ಮಾಜಿ ಸಿಎಂಗೆ ಕೊನೆ ಸಾಲಿನಲ್ಲಿ ಆಸನ ನೀಡಲಾಗಿದೆ.
ಎತ್ತಿನ ಗಾಡಿನ ಮೂಲಕ ಕೈ ನಾಯಕರ ಎಂಟ್ರಿ : ಮೊದಲ ದಿನದ ಅಧಿವೇಶನದ ಪ್ರಮುಖ ಹೈಲೈಟ್ ಕೈ ನಾಯಕರ ಎಂಟ್ರಿ. ಕೈ ನಾಯಕರು ಎತ್ತಿನಗಾಡಿ ಮೂಲಕ ವಿಧಾನಸೌಧಕ್ಕೆ ಬರುವ ಮೂಲಕ ಮುಂದಿನ ಕಲಾಪ ಹೇಗಿರಲಿದೆ ಎಂಬ ಬಗ್ಗೆ ಮುನ್ಸೂಚನೆ ನೀಡಿದರು.
ಕೈ ನಾಯಕರ ಆಕ್ರೋಶ : ತೈಲ ಬೆಲೆ ಏರಿಕೆ ವಿರೋಧಿಸಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಎತ್ತಿನ ಗಾಡಿ ಮೂಲಕ ನೇರವಾಗಿ ವಿಧಾನಸೌಧ ಅಧಿವೇಶನಕ್ಕೆ ಆಗಮಿಸಿದರು. ಆ ಮೂಲಕ ಬಿಜೆಪಿ ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಸಚಿವ ಸ್ಥಾನ ವಂಚಿತರ ಗೈರು : ಬೊಮ್ಮಾಯಿ ಸರ್ಕಾರದಲ್ಲಿ ಸಚಿವ ಸ್ಥಾನ ವಂಚಿತರಾದವರು ವಿಧಾನಸಭೆಯ ಮೊದಲ ದಿನದ ಕಲಾಪಕ್ಕೆ ಗೈರಾಗಿದ್ದಾರೆ. ರಮೇಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ, ಶ್ರೀಮಂತ್ ಪಾಟೀಲ್ ಕಲಾಪಕ್ಕೆ ಗೈರಾಗಿದ್ದರು. ಉಳಿದಂತೆ ಬಹುತೇಕ ಎಲ್ಲಾ ಬಿಜೆಪಿ ಶಾಸಕರು, ಮಾಜಿ ಸಚಿವರು ವಿಧಾನಸಭೆ ಕಲಾಪಕ್ಕೆ ಹಾಜರಾಗಿದ್ದರು.
ಇದನ್ನೂ ಓದಿ: ಆಸ್ಕರ್, ಸಂಚಾರಿ ವಿಜಯ್ಗೆ ಪರಿಷತ್ನಲ್ಲಿ ಸಂತಾಪ: ಕಲಾಪ ನಾಳೆಗೆ ಮುಂದೂಡಿಕೆ