ಬೆಂಗಳೂರು : ಭಾರತ ನೀತಿ ಆಯೋಗ ಬಿಡುಗಡೆ ಮಾಡಿರುವ "ಆವಿಷ್ಕಾರ ಸೂಚ್ಯಂಕ- 2020"ರ ಪಟ್ಟಿಯಲ್ಲಿ ಕರ್ನಾಟಕ ರಾಜ್ಯ ಸತತ ಎರಡನೇ ಬಾರಿಗೆ ದೇಶದ ಅಗ್ರಮಾನ್ಯ ನಾವೀನ್ಯತಾ ರಾಜ್ಯ ಎಂಬ ಹಿರಿಮೆಗೆ ಪಾತ್ರವಾಗಿದೆ.
ನೀತಿ ಆಯೋಗ ಪ್ರಕಟಿಸಿರುವ ‘ಭಾರತ ನಾವೀನ್ಯತಾ ಸೂಚ್ಯಂಕ ಪಟ್ಟಿ’ಯಲ್ಲಿ ರಾಜ್ಯವು ಹೋದ ವರ್ಷ ಕೂಡ ಮೊದಲ ಸ್ಥಾನ ಪಡೆದಿತ್ತು. ಈ ಬಾರಿಯೂ ತನ್ನ ಪ್ರಥಮ ಸ್ಥಾನ ಕಾಯ್ದುಕೊಂಡು ಬಂಡವಾಳ ಆಕರ್ಷಣೆಗೆ ದೇಶದಲ್ಲಿಯೇ ನೆಚ್ಚಿನ ರಾಜ್ಯವಾಗಿ ಹೊರ ಹೊಮ್ಮಿದೆ.
ಕಳೆದ ವರ್ಷಕ್ಕಿಂತ ಈ ಬಾರಿ ಇನ್ನಷ್ಟು ಹೊಸ ಮಾನದಂಡಗಳನ್ನು ಅಳವಡಿಸಲಾಗಿತ್ತು. ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ರಾಜ್ಯಗಳು ಮಾಡುವ ವೆಚ್ಚ ಹಾಗೂ ಹೊಸ ವ್ಯಾಪಾರೋದ್ಯಮಗಳ ನೋಂದಣಿ ಇವುಗಳಲ್ಲಿ ಪ್ರಮುಖವಾದವು. ರಾಜ್ಯವು ಎಲ್ಲಾ ವಿಭಾಗಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
ಈ ಸೂಚ್ಯಂಕವು ದೇಶ, ರಾಜ್ಯ ಮತ್ತು ಜಿಲ್ಲಾ ಮಟ್ಟಗಳಲ್ಲಿ ನಾವೀನ್ಯತೆ ನಿರ್ದೇಶಿಸುವ ವಿವಿಧ ಅಂಶಗಳ ವಿಶ್ಲೇಷಣೆಯನ್ನು ಒದಗಿಸುತ್ತದೆ. ಇದು ಸೂಕ್ತ ಕಾರ್ಯನೀತಿಗಳನ್ನು ರೂಪಿಸಲು ಸಹಾಯಕವಾಗಿ ಉದ್ದಿಮೆಗಳಿಗೆ ಹೂಡಿಕೆಯನ್ನು ಆಕರ್ಷಿಸಲು ನೆರವಾಗುತ್ತದೆ.
ಈ ಪಟ್ಟಿಯನ್ನು ಅಕ್ಟೋಬರ್ 2019ರಲ್ಲಿ ಮೊದಲ ಬಾರಿಗೆ ಪ್ರಕಟಿಸಲಾಗಿತ್ತು. ದೇಶದ ನಾವೀನ್ಯತಾ ಸೂಚ್ಯಂಕವನ್ನು ಜಾಗತಿಕ ನಾವೀನ್ಯತಾ ಸೂಚ್ಯಂಕಕ್ಕೆ ಅನುಗಣವಾಗಿ ಸರಿದೂಗಿಸುವುದು ಇದರ ಉದ್ದೇಶ. ನಾವೀನ್ಯತೆಯು ತಯಾರಿಕಾ ವಲಯದ ಗುಣಮಟ್ಟದ ಉತ್ಪಾದನೆ, ಸ್ಪರ್ಧಾತ್ಮಕತೆ ಹಾಗೂ ರಫ್ತು ಪ್ರವೃತ್ತಿಯನ್ನು ಉತ್ತೇಜಿಸುತ್ತದೆ. ಜೊತೆಗೆ ಆತ್ಮನಿರ್ಭರ ಸ್ಫೂರ್ತಿಯನ್ನು ಎತ್ತಿಹಿಡಿಯಲು ಸಹಾಯಕವಾಗುತ್ತದೆ.
ಈಗ ಪ್ರಕಟಿಸಲಾಗಿರುವ ಪಟ್ಟಿಯು 36 ಮಾನದಂಡಗಳನ್ನು ಆಧರಿಸಿದೆ. ದೇಶ, ರಾಜ್ಯ ಮತ್ತು ಜಿಲ್ಲಾ ಮಟ್ಟಗಳಲ್ಲಿ ನಾವೀನ್ಯತೆಗೆ ಚಾಲಕ ಬಲ ನೀಡುವ ವಿವಿಧ ಅಂಶಗಳ ವಿಶ್ಲೇಷಣೆಯನ್ನೂ ಇದು ಲಭ್ಯವಾಗಿಸುತ್ತದೆ. ಜಾಗತಿಕವಾಗಿ ನಾವೀನ್ಯತಾ ಸೂಚ್ಯಂಕವನ್ನು ನಿರ್ಧರಿಸಲು 80 ಮಾನದಂಡಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ.
ಇದಕ್ಕೆ ಅನುಗುಣವಾಗಿ ನೀತಿ ಆಯೋಗ ಕೂಡ ಈ ಪಟ್ಟಿ ನಿರ್ಧರಿಸಲು ವರ್ಷದಿಂದ ವರ್ಷಕ್ಕೆ ಮಾನದಂಡಗಳ ಸಂಖ್ಯೆಯನ್ನು ಹೆಚ್ಚಿಸುತ್ತಾ ಹೋಗಲಿದೆ. ಮಹಾರಾಷ್ಟ್ರ, ತಮಿಳುನಾಡು, ತೆಲಂಗಾಣ, ಕೇರಳ ಕ್ರಮವಾಗಿ ಈ ಸೂಚ್ಯಂಕ ಪಟ್ಟಿಯಲ್ಲಿ ಎರಡು, ಮೂರು, ನಾಲ್ಕು ಮತ್ತು ಐದನೇ ಸ್ಥಾನದಲ್ಲಿವೆ. ಪಟ್ಟಿಯಲ್ಲಿರುವ 17 ಪ್ರಮುಖ ರಾಜ್ಯಗಳ ಪೈಕಿ ಹರಿಯಾಣ 6ನೇ ಸ್ಥಾನದಲ್ಲಿದ್ದು, ಬಿಹಾರ ಕಡೆಯ ಸ್ಥಾನದಲ್ಲಿದೆ.
ಹರ್ಷ ವ್ಯಕ್ತಪಡಿಸಿದ ಶೆಟ್ಟರ್, ಡಿಸಿಎಂ ಅಶ್ವತ್ಥ್ ನಾರಾಯಣ : ಭಾರತದ ನೀತಿ ಆಯೋಗವು ಪ್ರಕಟಿಸಿರುವ ನಾವೀನ್ಯತಾ ಸೂಚ್ಯಂಕದಲ್ಲಿ ಕರ್ನಾಟಕ ರಾಜ್ಯ ದೇಶದಲ್ಲಿಯೇ ಈ ವರ್ಷವೂ ಸತತ ಎರಡನೇ ಬಾರಿ ಅಗ್ರಸ್ಥಾನ ಪಡೆದಿರುವುದಕ್ಕೆ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಮತ್ತು ಉಪಮುಖ್ಯಮಂತ್ರಿ ಡಾ. ಅಶ್ವತ್ಥ್ ನಾರಾಯಣ ಸಂತೋಷ ವ್ಯಕ್ತಪಡಿಸಿದ್ದಾರೆ.
''ನೀತಿ ಆಯೋಗ ಪ್ರಕಟಿಸಿರುವ ಅಖಿಲ ಭಾರತ ಆವಿಷ್ಕಾರ ಸೂಚ್ಯಂಕ ಪಟ್ಟಿಯಲ್ಲಿ ಸತತ ಎರಡನೇ ಬಾರಿಗೆ ಕರ್ನಾಟಕ ಅಗ್ರ ಶ್ರೇಯಾಂಕ ಪಡೆದಿರುವುದು ಹೆಮ್ಮೆಯ ವಿಷಯ. ನುರಿತ ಮಾನವ ಸಂಪನ್ಮೂಲ ಲಭ್ಯತೆ, ಉನ್ನತ ಶಿಕ್ಷಣ ಸಂಸ್ಥೆಗಳು, ಪ್ರಮುಖ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳು, ಉತ್ತಮ ಆಡಳಿತ ಹಾಗೂ ಹೂಡಿಕೆಗೆ ಪೂರಕ ವಾತಾವರಣದಿಂದಾಗಿ ರಾಜ್ಯ ಅಗ್ರಸ್ಥಾನ ಪಡೆಯಲು ಸಾಧ್ಯವಾಗಿದೆ" ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಓದಿ:ನೀತಿ ಆಯೋಗದ ಇನ್ನೋವೇಷನ್ ಸೂಚ್ಯಂಕ: ಭಾರತದಲ್ಲಿ ಸತತ 2ನೇ ವರ್ಷವೂ ಕರ್ನಾಟಕಕ್ಕೆ ನಂ.1 ಸ್ಥಾನ
ನೀತಿ ಆಯೋಗ 2019ರಲ್ಲಿ ಮೊದಲ ಬಾರಿಗೆ ಪ್ರಕಟಿಸಿದ್ದ ಈ ಪಟ್ಟಿಯಲ್ಲಿ ಪ್ರಥಮ ಸ್ಥಾನ ಪಡೆದಿದ್ದ ಕರ್ನಾಟಕ, 2020ರ ಪಟ್ಟಿಯಲ್ಲೂ ಅದೇ ಸ್ಥಾನ ಉಳಿಸಿಕೊಂಡಿದೆ. ಉಳಿದಂತೆ ಮಹಾರಾಷ್ಟ್ರ, ತಮಿಳುನಾಡು, ತೆಲಂಗಾಣ, ಕೇರಳ ಕ್ರಮವಾಗಿ ಎರಡು, ಮೂರು, ನಾಲ್ಕು ಮತ್ತು ಐದನೇ ಸ್ಥಾನದಲ್ಲಿವೆ. ಪಟ್ಟಿಯಲ್ಲಿರುವ 17 ಪ್ರಮುಖ ರಾಜ್ಯಗಳ ಪೈಕಿ ಹರಿಯಾಣ 6ನೇ ಸ್ಥಾನದಲ್ಲಿದ್ದರೆ, ಬಿಹಾರ ಕಡೆಯ ಸ್ಥಾನದಲ್ಲಿದೆ.
ಜಾಗತಿಕ ಆವಿಷ್ಕಾರ ಸೂಚ್ಯಂಕದ ಮಾದರಿಯಲ್ಲಿ ನೀತಿ ಆಯೋಗ ದೇಶದ ಆವಿಷ್ಕಾರ ಸೂಚ್ಯಂಕ ಪಟ್ಟಿಯನ್ನು ಸಿದ್ಧಪಡಿಸುತ್ತದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಆವಿಷ್ಕಾರಕ್ಕೆ ಇರುವ ಪೂರಕ ವಾತಾವರಣವನ್ನು ಅದು ವಿಶ್ಲೇಷಿಸುತ್ತದೆ.
ಮಾನದಂಡಗಳು : ಆವಿಷ್ಕಾರ, ಅನುಷ್ಠಾನ, ಮಾನವ ಸಂಪನ್ಮೂಲ, ಹೂಡಿಕೆ, ವಿಷಯ ತಜ್ಞರು, ಉದ್ಯಮ ಸ್ನೇಹಿ ವಾತಾವರಣ, ಸುರಕ್ಷತೆ, ಉತ್ತಮ ಕಾನೂನು, ಸಾಧನೆ, ಜ್ಞಾನ ಪ್ರಸಾರ ಮುಂತಾದ ಅಂಶಗಳನ್ನು ಆಧರಿಸಿ ಸೂಚ್ಯಂಕ ನಿರ್ಧರಿಸಲಾಗುತ್ತದೆ. ಈ ಎಲ್ಲ ಮಾನದಂಡಗಳಲ್ಲಿ ಕರ್ನಾಟಕ ಅಗ್ರಸ್ಥಾನ ಕಾಯ್ದುಕೊಂಡಿದೆ ಎಂದು ಸಚಿವ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.
ಮಾಹಿತಿ ತಂತ್ರಜ್ಞಾನ ಸಚಿವರೂ ಆದ ಡಾ.ಸಿ ಎನ್ ಅಶ್ವತ್ಥ್ ನಾರಾಯಣ ರಾಜ್ಯದ ಈ ಸಾಧನೆ ಬಗ್ಗೆ ಸಂತಸ ವ್ಯಕ್ತಡಿಸುತ್ತಾ ಮಾನವ ಸಂಪನ್ಮೂಲ, ಹೂಡಿಕೆ, ವಿಷಯ ತಜ್ಞರು, ಉದ್ಯಮ ಸ್ನೇಹಿ ವಾತಾವರಣ, ಸುರಕ್ಷತೆ, ಉತ್ತಮ ಕಾನೂನು, ಸಾಧನೆ, ಜ್ಞಾನ ಪ್ರಸಾರ ಆರೋಗ್ಯ, ಶಿಕ್ಷಣ, ಕೃಷಿ ಸೇರಿದಂತೆ ವಿವಿಧ ವಲಯಗಳು ಮಾನದಂಡಗಳಾಗಿ ಪರಿಗಣಿತವಾಗುತ್ತವೆ. ಈ ಎಲ್ಲ ಅನುಕೂಲಕರ ವಾತಾವರಣದಿಂದಾಗಿ ಅಗ್ರಸ್ಥಾನ ಉಳಿಸಿಕೊಳ್ಳಲು ಸಾಧ್ಯವಾಗಿದೆ ಎಂದು ತಿಳಿಸಿದ್ದಾರೆ.
ಶೀಘ್ರವೇ ಮಧ್ಯಂತರ ವರದಿ : ರಾಜ್ಯದ ವಿವಿಧ ವಲಯಗಳಲ್ಲಿ ನಾವೀನ್ಯತೆಗೆ ಇರುವ ಅವಕಾಶಗಳ ಕುರಿತು ಈಗಾಗಲೇ ಅಧ್ಯಯನ ನಡೆಸಲಾಗುತ್ತಿದೆ. ಮಾಹಿತಿ ತಂತ್ರಜ್ಞಾನ ಇಲಾಖೆ ನೇತೃತ್ವದಲ್ಲಿ ವಿವಿಧ ಇಲಾಖೆಗಳೊಂದಿಗೆ ಈಗಾಗಲೇ ಸಮಾಚೋಚನೆ ಪ್ರಕ್ರಿಯೆ ನಡೆಯುತ್ತಿದೆ. ಈ ಸಂಬಂಧ ಶೀಘ್ರವೇ ಮಧ್ಯಂತರ ವರದಿ ಪ್ರಕಟಿಸಲಾಗುವುದು ಎಂದು ಅಶ್ವತ್ಥ್ ನಾರಾಯಣ ಇದೇ ಸಂದರ್ಭದಲ್ಲಿ ತಿಳಿಸಿದರು.