ಬೆಂಗಳೂರು: ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆ (ಡಿಪಿಐಐಟಿ) ಬಿಡುಗಡೆ ಮಾಡಿರುವ 'ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್' ಶ್ರೇಯಾಂಕ ಪಟ್ಟಿಯಲ್ಲಿ ಕರ್ನಾಟಕ ಅಗ್ರಸ್ಥಾನ ಪಡೆದುಕೊಂಡಿದೆ. 2020ರ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗಿದ್ದ ಕಳೆದ ಸಾಲಿನ ಶ್ರೇಯಾಂಕ ಪಟ್ಟಿಯಲ್ಲಿ 17ನೇ ಸ್ಥಾನದಲ್ಲಿದ್ದ ಕರ್ನಾಟಕ ಈಗ, ಟಾಪ್ ಅಚೀವರ್ ಆಗಿ ಹೊರಹೊಮ್ಮಿದೆ.
ಕಳೆದ ವರ್ಷ ಡಿಪಿಐಐಟಿ ಸೂಚಿಸಿದ್ದ 187 ಸುಧಾರಣಾ ಕ್ರಮಗಳಲ್ಲಿ ಶೇ.100ರಷ್ಟು ಅನುಷ್ಠಾನಗೊಳಿಸಿದ್ದರೂ ಕರ್ನಾಟಕ 2019 ರಲ್ಲಿ 17ನೇ ಸ್ಥಾನಕ್ಕೆ ಕುಸಿದಿತ್ತು. ಹಲವು ಸುಧಾರಣಾ ಕ್ರಮಗಳ ಅನುಷ್ಠಾನದ ಜೊತೆಗೆ ರಾಜ್ಯದ 30ಕ್ಕೂ ಹೆಚ್ಚು ಇಲಾಖೆಗಳ ನಡುವಿನ ಸಮನ್ವಯತೆ ಮತ್ತು ಪೂರಕ ಪ್ರಯತ್ನಗಳಿಂದ ಪ್ರಸಕ್ತ ಸಾಲಿನಲ್ಲಿ ರಾಜ್ಯ ಈ ಶ್ರೇಣಿಗೆ ಏರಲು ಸಾಧ್ಯವಾಗಿದೆ.
ಸುಲಲಿತ ವ್ಯವಹಾರಕ್ಕೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಅಫಿಡವಿಟ್ ಬೇಸ್ಡ್ ಕ್ಲಿಯರೆನ್ಸ್ ಯೋಜನೆಯನ್ನು ಜಾರಿಗೊಳಿಸಿದ್ದೇವೆ. ಕೈಗಾರಿಕಾ ಸೌಲಭ್ಯ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಕೈಗಾರಿಕೆಗಳ ಸ್ಥಾಪನೆಗೆ ಇದ್ದ ತೊಡಕು ನಿವಾರಿಸಲಾಗಿದೆ. ನಮ್ಮ ಸರ್ಕಾರ ಸುಲಲಿತ ವ್ಯವಹಾರಕ್ಕೆ ಹೆಚ್ಚು ಒತ್ತು ನೀಡಿರುವುದರಿಂದ ಹೂಡಿಕೆದಾರರು ನಮ್ಮ ರಾಜ್ಯದಲ್ಲಿ ಹೆಚ್ಚು ಬಂಡವಾಳ ಹೂಡುತ್ತಿದ್ದಾರೆ ಎಂದು ಕೈಗಾರಿಕಾ ಸಚಿವ ಡಾ.ಮುರುಗೇಶ್ ನಿರಾಣಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಸುಲಲಿತ ವ್ಯವಹಾರಕ್ಕೆ ಪೂರಕವಾದ ಸುಧಾರಣಾ ಕ್ರಮಗಳ ಅನುಷ್ಠಾನವನ್ನು ಖಾತ್ರಿಪಡಿಸುವ ನೋಡಲ್ ಏಜೆನ್ಸಿ 'ಕರ್ನಾಟಕ ಉದ್ಯೋಗ ಮಿತ್ರ' ಡಿಪಿಐಐಟಿ ಮಾಡಿದ ಶಿಫಾರಸುಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿರುವ ಫಲವಾಗಿ ರಾಜ್ಯ ಇಂದು ಅಗ್ರ ಶ್ರೇಯಾಂಕ ಪಡೆಯಲು ಸಾಧ್ಯವಾಗಿದೆ ಎಂದು ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣರೆಡ್ಡಿ ತಿಳಿಸಿದ್ದಾರೆ.
ಇದನ್ನೂ ಓದಿ: ಮೇಕೆದಾಟು ಯೋಜನೆಗೆ ಹಸಿರು ನಿಶಾನೆ ತೋರುವುದೇ ಕೇಂದ್ರ ಜಲ ಆಯೋಗ?